ಕೊಪ್ಪಳ: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್‌ಐಡಿಎಲ್)ನ ಹಗರಣದ ಪ್ರಮುಖ ಆರೋಪಿ ಕೆ.ಆರ್.ಐ.ಡಿ.ಎಲ್.ನ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದ ಝಡ್.ಎಂ. ಚಿಂಚೋಳಿಕರ್ ಕೊನೆಗೂ ಅಮಾನತುಗೊಂಡಿದ್ದಾನೆ.
ಸಂಯುಕ್ತ ಕರ್ನಾಟಕ ದಿನಪತ್ರಿಕೆಯು ನಿರಂತರ ಸರಣಿ ವರದಿಗಳ ಮೂಲಕ ಕೆಆರ್‌ಐಡಿಎಲ್‌ನ ಹಗರಣ ಬಯಲಿಗೆಳದಿತ್ತು. ಇಲಾಖಾ ತನಿಖೆ, ಲೋಕಾಯುಕ್ತ ದೂರು, ದಾಳಿ, ಆರೋಪಿಗಳ ಬಂಧನ ಸೇರಿದಂತೆ ಸುದ್ದಿ ಬಿತ್ತರಿಸುವ ಮೂಲಕ ಎಚ್ಚರಗೊಳಿಸಿತ್ತು. ಇದರಿಂದ ಎಚ್ಚತ್ತ ಕೆಆರ್‌ಐಡಿಎಲ್‌ನ ಮೇಲಧಿಕಾರಿಗಳು ಕ್ರಮ ಕೈಗೊಂಡಿದ್ದರು.
ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಕಾರ್ಯನಿರ್ವಹಣೆಯಲ್ಲಿ ಕೆಆರ್‌ಐಡಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ಝಡ್.ಎಂ. ಚಿಂಚೋಳರ್ ಮೇಲೆ ಇದ್ದ ಭ್ರಷ್ಟಾಚಾರ ಆರೋಪ ಸಾಬೀತಾಗಿತ್ತು. ಆದ್ದರಿಂದ ಎರಡು ವರ್ಷಗಳ ಹಿಂದೆ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿತ್ತು. ಆಗ ಈ ಪ್ರಕರಣದ ತನಿಖೆಯು ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ವರ್ಗಾವಣೆಗೊಂಡಿತ್ತು.
ಈ ಹಿನ್ನಲೆ ಜುಲೈ 15ರಂದು ಬೆಂಗಳೂರಿನ ಲೋಕಾಯುಕ್ತ ಪೊಲೀಸರು ಝಡ್.ಎಂ. ಚಿಂಚೋಳಕರನನ್ನು ಕೊಪ್ಪಳದಲ್ಲಿ ಬಂಧಿಸಿ, ನಗರದ ಗವಿಮಠ ಹಿಂಭಾಗದ ಹಾಲವರ್ತಿ ರಸ್ತೆಯ ಜೈಲಿನಲ್ಲಿ ಇರಿಸಲಾಗಿತ್ತು. ಇದರ ಬೆನ್ನಲ್ಲೇ ಕೆಆರ್‌ಐಡಿಎಲ್ ಅಧಿಕಾರಿಗಳು, ಜುಲೈ 17ರಂದು ಕೆಆರ್‌ಐಡಿಎಲ್‌ನ ಇಇ ಹುದ್ದೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.






















