SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಮುನಿರಾಬಾದ್: ರೈತರ ಹಿತಕ್ಕೆ 3 ರಾಜ್ಯಗಳ ಒಗ್ಗಟ್ಟು – ಸಿಎಂ ರೆಡ್ಡಿ

ಮುನಿರಾಬಾದ್: ರೈತರ ಹಿತಕ್ಕೆ 3 ರಾಜ್ಯಗಳ ಒಗ್ಗಟ್ಟು – ಸಿಎಂ ರೆಡ್ಡಿ

0
86

ಮುನಿರಾಬಾದ್‌ನಲ್ಲಿ ನಡೆದ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಅಂತರರಾಜ್ಯ ಜಲ ವಿವಾದಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ಮುನಿರಾಬಾದ್ (ಕೊಪ್ಪಳ): ತುಂಗಭದ್ರಾ ಜಲಾಶಯದ 33 ನೂತನ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಮೂರು ರಾಜ್ಯಗಳ ರೈತರ ಹಿತಾಸಕ್ತಿಗಾಗಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಒಗ್ಗಟ್ಟಿನಿಂದ ಕೆಲಸ ಮಾಡಲು ಬದ್ಧವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಇಂದು ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಒಂದೇ ವೇದಿಕೆಯಲ್ಲಿ ಸೇರಿರುವುದು ಮಹತ್ವದ ಬೆಳವಣಿಗೆಯಾಗಿದೆ. ಮೂರು ರಾಜ್ಯಗಳ ರೈತರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಇದು ಕೇವಲ ಒಂದು ಕಾರ್ಯಕ್ರಮವಲ್ಲ, ಅಂತರರಾಜ್ಯ ಸಹಕಾರದ ಪ್ರತೀಕವಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: 3 ರಾಜ್ಯಗಳು ಒಟ್ಟಾಗಿ ನೀರಾವರಿ ಸಮಸ್ಯೆ ಬಗೆಹರಿಸೋಣ: ಡಿಕೆ

ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು ಕೈಗೊಳ್ಳಲಿರುವ ನಿರ್ಧಾರ ಐತಿಹಾಸಿಕವಾಗಲಿದ್ದು, ದೇಶದ ರೈತರಿಗೆ ಉತ್ತಮ ಸಂದೇಶ ರವಾನಿಸಲಿದೆ ಎಂದು ರೇವಂತ್ ರೆಡ್ಡಿ ಅಭಿಪ್ರಾಯಪಟ್ಟರು. “ಕೇಂದ್ರ ಜಲಶಕ್ತಿ ಸಚಿವಾಲಯದೊಂದಿಗೆ ನಾವು ಇದ್ದೇವೆ. ಸಚಿವರು ಕೈಗೊಳ್ಳುವ ನಿರ್ಧಾರಗಳಿಗೆ ನಾವು ಬದ್ಧರಾಗಿದ್ದೇವೆ. ಆದರೆ ನದಿ ನೀರಿನ ಹಂಚಿಕೆ ಮತ್ತು ಅಂತರರಾಜ್ಯ ವಿವಾದಗಳ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು” ಎಂದು ಆಗ್ರಹಿಸಿದರು.

ಗೋದಾವರಿ, ಕೃಷ್ಣ ಮತ್ತು ತುಂಗಭದ್ರಾ ನದಿಗಳ ನೀರಿನ ಬಳಕೆಗೆ ಸಂಬಂಧಿಸಿದಂತೆ ಮೂರು ರಾಜ್ಯಗಳ ನಡುವಿನ ವಿವಾದಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು. “ಆರಡಿಡಸ್ ಜಲಾಶಯದ ಮೂಲಕ ತೆಲಂಗಾಣಕ್ಕೆ 16 ಟಿಎಂಸಿ ನೀರು ನೀಡುವಂತೆ ನಾವು ಬೇಡಿಕೆ ಇಟ್ಟಿದ್ದೇವೆ. ಈ ಕುರಿತು ಕೇಂದ್ರ ಸರ್ಕಾರ ರೈತರ ಹಿತದೃಷ್ಟಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳಬೇಕು” ಎಂದು ಮನವಿ ಮಾಡಿದರು.

ಇದನ್ನೂ ಓದಿ: ಮುನಿರಾಬಾದ್‌: ಕನ್ನಡದಲ್ಲೇ ಭಾಷಣ – ರೈತರ ಮನಗೆದ್ದ CM ನಾಯ್ಡು

ಇದೇ ವೇಳೆ, ತುಂಗಭದ್ರಾ ಜಲಾಶಯಕ್ಕೆ 33 ನೂತನ ಕ್ರಸ್ಟ್ ಗೇಟ್‌ಗಳನ್ನು ಅಳವಡಿಸುವ ನಿರ್ಧಾರವನ್ನು ಐತಿಹಾಸಿಕವೆಂದು ಬಣ್ಣಿಸಿದ ರೇವಂತ್ ರೆಡ್ಡಿ, “ಈ ನಿರ್ಧಾರದಿಂದ ಮೂರು ರಾಜ್ಯಗಳ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ. ಡಿ.ಕೆ. ಶಿವಕುಮಾರ್ ಕೈಗೊಂಡ ಈ ಕ್ರಮ ಶ್ಲಾಘನೀಯವಾಗಿದೆ” ಎಂದರು.

ರಾಜೋಳ್ಳಿ ಬಂಡಾ ನೀರಿನ ಸಮಸ್ಯೆ ಸೇರಿದಂತೆ ಹಲವು ಜಲ ವಿವಾದಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿದ್ದು, ಈ ಕುರಿತು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. “ಇಂದಿನ ನಿರ್ಧಾರಗಳು ಸುವರ್ಣಾಕ್ಷರಗಳಲ್ಲಿ ದಾಖಲಾಗಲಿವೆ. ಅಂತರರಾಜ್ಯ ನೀರಿನ ವಿವಾದಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಾವು ಇಲ್ಲಿ ಸೇರಿದ್ದೇವೆ” ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದರು.