SK Home Ad
Home ನಮ್ಮ ಜಿಲ್ಲೆ ಕೊಪ್ಪಳ 3 ರಾಜ್ಯಗಳು ಒಟ್ಟಾಗಿ ನೀರಾವರಿ ಸಮಸ್ಯೆ ಬಗೆಹರಿಸೋಣ: ಡಿಕೆ

3 ರಾಜ್ಯಗಳು ಒಟ್ಟಾಗಿ ನೀರಾವರಿ ಸಮಸ್ಯೆ ಬಗೆಹರಿಸೋಣ: ಡಿಕೆ

0
80

ಮುನಿರಾಬಾದ್‌ನಲ್ಲಿ ನಡೆದ ತುಂಗಭದ್ರಾ ಜಲಾಶಯದ 33 ಹೊಸ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ‘ತುಂಗಭದ್ರಾ ಡ್ಯಾಂ ಉಳಿಸಿದ್ದೇವೆ, ಇದು ಹೆಮ್ಮೆಯ ದಿನ’ ಎಂದು ಹೇಳಿದರು.

ಮುನಿರಾಬಾದ್ (ಕೊಪ್ಪಳ): ತುಂಗಭದ್ರಾ ಜಲಾಶಯದ 33 ಹೊಸ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ದಕ್ಷಿಣ ಭಾರತದ ಐತಿಹಾಸಿಕ ಕ್ಷಣವೆಂದು ಬಣ್ಣಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರೈತರ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶದಿಂದ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ 19ನೇ ಗೇಟ್ ಕೊಚ್ಚಿಕೊಂಡು ಹೋದ ಸಂದರ್ಭವನ್ನು ಸ್ಮರಿಸಿದರು. “ಆ ರಾತ್ರಿ ಡ್ಯಾಂ ಅಪಾಯದಲ್ಲಿದೆ ಎಂದು ಮಧ್ಯರಾತ್ರಿ ಕರೆ ಬಂದಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸಿದರು. ಮರುದಿನ ಬೆಳಗ್ಗೆ 8.30ರ ವೇಳೆಗೆ ನಾನು ಸ್ಥಳಕ್ಕೆ ಆಗಮಿಸಿದ್ದೆ. ಅಧಿಕಾರಿಗಳು ಹಾಗೂ ತಜ್ಞರ ಸಹಕಾರದಿಂದ ಗೇಟ್ ಬದಲಾಯಿಸಿ, ರೈತರ ಬೆಳೆ ಹಾಗೂ ಭತ್ತದ ಕಣಜವನ್ನು ಉಳಿಸಲು ಸಾಧ್ಯವಾಯಿತು” ಎಂದು ಹೇಳಿದರು.

ಇದನ್ನೂ ಓದಿ: ಕನ್ನಡ ಪಠ್ಯಪುಸ್ತಕ ವಿವಾದ: ‘ಕೃಷ್ಣ’ ಹೆಸರಿನ ಬಗ್ಗೆ NCERT ಸ್ಪಷ್ಟನೆ

“ಆ ಸಂದರ್ಭದಲ್ಲಿ ವಿರೋಧ ಪಕ್ಷದವರು ಸಾಕಷ್ಟು ಟೀಕೆಗಳನ್ನು ಮಾಡಿದರು. ಆದರೆ ಹಂಪಿ ವಿರೂಪಾಕ್ಷ, ರಾಘವೇಂದ್ರ ಸ್ವಾಮಿ ಹಾಗೂ ಅಜ್ಜಯ್ಯನ ಆಶೀರ್ವಾದದಿಂದ ಇಂದು 33 ಹೊಸ ಕ್ರಸ್ಟ್ ಗೇಟ್‌ಗಳ ಲೋಕಾರ್ಪಣೆ ಸಾಧ್ಯವಾಗಿದೆ. ಇದಕ್ಕಾಗಿ ದೇವರ ಕೃಪೆ ಹಾಗೂ ಎಲ್ಲರ ಸಹಕಾರ ಕಾರಣ” ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ನೀರಾವರಿ ಸಚಿವನಾಗಿದ್ದ ಕಾಲವನ್ನು ನೆನಪಿಸಿಕೊಂಡ ಅವರು, “ಇಂದು ಮುಖ್ಯಮಂತ್ರಿ ಸ್ಥಾನದಲ್ಲಿದ್ದರೂ ನಾನು ನಿಮ್ಮ ಸೇವಕ. ರೈತರಿಗೆ ಪದೋನ್ನತಿ, ನಿವೃತ್ತಿ ಅಥವಾ ಊಟದ ಸಮಯವಿಲ್ಲ. ರೈತರು ಬದುಕಿದರೆ ದೇಶ ಬದುಕುತ್ತದೆ. ಆದ್ದರಿಂದ ರೈತರ ಹಿತ ಕಾಪಾಡುವುದು ಸರ್ಕಾರದ ಮೊದಲ ಆದ್ಯತೆ” ಎಂದರು.

ಇದನ್ನೂ ಓದಿ: ತುರ್ತು ಪರಿಸ್ಥಿತಿಯ ಅಧ್ಯಾಯ: ನಕಲಿ ಪ್ರತಿಗಳ ಬಗ್ಗೆ NCERT ಎಚ್ಚರಿಕೆ!

ಮೂರು ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದ ನಡುವೆ ನೀರಾವರಿ ಸಮಸ್ಯೆಗಳ ಬಗ್ಗೆ ಒಮ್ಮತದ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಹೇಳಿದ ಅವರು, “ನೀರು ನಮ್ಮ ಹಕ್ಕು. ಆದರೆ ಅದನ್ನು ರಕ್ಷಿಸುವ ಜವಾಬ್ದಾರಿಯೂ ನಮ್ಮದೇ. ನವಲಿ ಜಲಾಶಯ, ಹೂಳು ತೆಗೆಯುವ ವಿಚಾರ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮೂರು ರಾಜ್ಯಗಳು ಒಟ್ಟಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು” ಎಂದು ಹೇಳಿದರು.

“ನಾವೆಲ್ಲ ಒಟ್ಟಾಗಿ ಸಾಗಬೇಕು. ಈ ಕಾರ್ಯಕ್ರಮವೇ ಅದಕ್ಕೆ ಸಾಕ್ಷಿಯಾಗಿದೆ. ರೈತರ ಬದುಕು ಹಾಗೂ ಭತ್ತದ ಕಣಜವನ್ನು ಉಳಿಸುವ ನಿಟ್ಟಿನಲ್ಲಿ ಕೈಗೊಂಡ ಈ ಕ್ರಮ ಇತಿಹಾಸದಲ್ಲಿ ದಾಖಲಾಗಲಿದೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.