ನವದೆಹಲಿ: 2027ರ ಐಪಿಎಲ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಈ ಬಾರಿ ಗೋವಾದಲ್ಲಿ ನಡೆಯಲಿದೆ. ಡಿಸೆಂಬರ್‌ನಲ್ಲಿ ಹರಾಜು ನಡೆಸಲು ಬಿಸಿಸಿಐ ನಿರ್ಧರಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮತ್ತು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ತಿಳಿಸಿದ್ದಾರೆ.
ಮೂರು ವರ್ಷಗಳ ಬಳಿಕ ಐಪಿಎಲ್ ಹರಾಜು ಪ್ರಕ್ರಿಯೆ ಭಾರತದಲ್ಲಿ ನಡೆಯಲಿದೆ. ಕಳೆದ ಮೂರು ಆವೃತ್ತಿಗಳ ಆಟಗಾರರ ಹರಾಜು ಕ್ರಮವಾಗಿ ದುಬೈ, ಜೆಡ್ಡಾ ಮತ್ತು ಅಬುಧಾಬಿಯಲ್ಲಿ ನಡೆದಿತ್ತು. ಗೋವಾದಲ್ಲಿ 2027ರ ಹರಾಜು ನಡೆಯುವುದರಿಂದ ಭಾರತದಲ್ಲಿ ಹರಾಜು ಆಯೋಜನೆಯಾಗುತ್ತಿರುವುದು 2022ರ ಬಳಿಕ ಇದು ಮೊದಲ ಬಾರಿಯಾಗಿದೆ.
ಇದು ದೊಡ್ಡ ಮೆಗಾ ಹರಾಜು ಬದಲಿಗೆ ಮಿನಿ ಹರಾಜು ಆಗಿರಲಿದ್ದು, ಒಂದು ದಿನದ ಅವಧಿಯಲ್ಲಿ ಹರಾಜು ಪೂರ್ಣಗೊಳಿಸುವ ಸಾಧ್ಯತೆ ಇದೆ. ಡಿಸೆಂಬರ್ 15 ಅಥವಾ 16ರಂದು ಹರಾಜು ನಡೆಯುವ ಸಾಧ್ಯತೆ ಇದೆ ಎಂದು ಅರುಣ್ ಧುಮಾಲ್ ತಿಳಿಸಿದ್ದಾರೆ. ಆದರೆ ಅಂತಿಮ ದಿನಾಂಕವನ್ನು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಬೇಕಿದೆ.
2027ರ ಐಪಿಎಲ್ 20ನೇ ಆವೃತ್ತಿಯಾಗಿದ್ದು, ಈ ವಿಶೇಷ ಆವೃತ್ತಿಯನ್ನು ಅದ್ಧೂರಿಯಾಗಿ ಆಚರಿಸಲು ಬಿಸಿಸಿಐ ಈಗಾಗಲೇ ತೀರ್ಮಾನ ಮಾಡಿದೆ.






















