ಧಾರವಾಡ: ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ ಆಗಿದ್ದು, ಸಮಾಜವನ್ನು ಒಡೆಯುವ ಪ್ರಯತ್ನಗಳನ್ನು ರಾಜಕಾರಣಿಗಳು ಮಾಡುತ್ತಿರುವುದು ದುರದೃಷ್ಟಕರ ಎಂದು ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಧಾರವಾಡದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸ್ಥಾಪಿಸಿ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಲಿಂಗರಾಜ ದೇಸಾಯಿ ಮಾಡಿದ್ದರು. ಆದರೆ ಇಂದಿನ ರಾಜಕಾರಣಿಗಳು ಒಡಕು ಸೃಷ್ಟಿಸುತ್ತಿದ್ದಾರೆ ಎಂದರು.
ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ ಅವರು ಕರ್ಣನಿಗಿಂತಲೂ ಮಹಾತ್ಯಾಗಿಯಾಗಿದ್ದು, ನಿಸ್ವಾರ್ಥ ಮನೋಭಾವದಿಂದ ತಮ್ಮ ಸಂಪತ್ತನ್ನೆಲ್ಲ ಸಮಾಜಕ್ಕೆ ದಾನ ಮಾಡಿದ ಮಹನೀಯರು ಎಂದು ಅವರು, ಆಸೆಯಿಲ್ಲದೆ ಆದರ್ಶ ಜೀವನ ನಡೆಸಿದ ಲಿಂಗರಾಜ ದೇಸಾಯಿ ಅವರ ವಿಚಾರಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಉತ್ತರ ಕರ್ನಾಟಕದಲ್ಲಿ ಕೆಎಲ್ಇ ಸಂಸ್ಥೆ ಬೆಳೆದು ನಿಲ್ಲಲು ಅವರ ಕೊಡುಗೆ ಅಪಾರವಾಗಿದೆ. ಶಿರಸಂಗಿ ಲಿಂಗರಾಜರ ತ್ಯಾಗ ಮತ್ತು ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಹೇಳಿದರು.






















