SK Home Ad
Home ನಮ್ಮ ಜಿಲ್ಲೆ ದಾವಣಗೆರೆ ವರದಕ್ಷಿಣೆ ಕಿರುಕುಳ ಆರೋಪ: ಮಗಳ ಮೃತದೇಹದೊಂದಿಗೆ ಎಸ್‌ಪಿ ಕಚೇರಿ ಎದುರು ಕುಟುಂಬಸ್ಥರ ಧರಣಿ

ವರದಕ್ಷಿಣೆ ಕಿರುಕುಳ ಆರೋಪ: ಮಗಳ ಮೃತದೇಹದೊಂದಿಗೆ ಎಸ್‌ಪಿ ಕಚೇರಿ ಎದುರು ಕುಟುಂಬಸ್ಥರ ಧರಣಿ

0
93

ದಾವಣಗೆರೆ: ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದಲ್ಲದೆ, ತಮ್ಮ ಮಗಳನ್ನು ಅಳಿಯನೇ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತ ಮಹಿಳೆಯ ಕುಟುಂಬಸ್ಥರು ಮೃತದೇಹವನ್ನು ದಾವಣಗೆರೆ ಎಸ್ಪಿ ಕಚೇರಿ ಬಳಿ ತಂದು ನ್ಯಾಯಕ್ಕಾಗಿ ಆಗ್ರಹಿಸಿದ ಘಟನೆ ಬುಧವಾರ ನಡೆದಿದೆ.

ಹರಿಹರ ತಾಲೂಕಿನ ಕಡ್ಲೆಗೊಂದಿ ಗ್ರಾಮದ ವಿನುತಾ (26) ಮೃತಪಟ್ಟವರು. ಐದು ವರ್ಷಗಳ ಹಿಂದೆ ಅದೇ ಗ್ರಾಮದ ಶಿವಶಂಕರ ಎಂಬಾತನೊಂದಿಗೆ ವಿನುತಾ ವಿವಾಹವಾಗಿದ್ದರು. ಶಿವಶಂಕರ ಅವರು ವಿನುತಾ ತಾಯಿಯ ಚಿಕ್ಕಮ್ಮನ ಮಗನಾಗಿದ್ದು, ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿರಲಿಲ್ಲ ಎನ್ನಲಾಗಿದೆ.

ಮದುವೆಯಾದ ಬಳಿಕ ಶಿವಶಂಕರ ಅವರು ತವರಿನಿಂದ ವರದಕ್ಷಿಣೆ ತರುವಂತೆ ವಿನುತಾಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೆ, ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ‘ಬಂಜೆ’ ಎಂದು ಮಾನಸಿಕವಾಗಿ ಹಿಂಸಿಸುತ್ತಿದ್ದರು ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.

ಮಂಗಳವಾರ ವಿನುತಾ ಅವರು ತಮ್ಮ ಅಜ್ಜನ ಪುಣ್ಯಸ್ಮರಣೆಯ ನಿಮಿತ್ತ ಪಕ್ಕದಲ್ಲೇ ಇರುವ ತವರು ಮನೆಗೆ ತೆರಳಿದ್ದರು. ಈ ವೇಳೆ ತವರಿಗೆ ಹೋದರೆ ಜೀವ ಸಹಿತ ಉಳಿಸುವುದಿಲ್ಲ ಎಂದು ಶಿವಶಂಕರ ಬೆದರಿಕೆ ಹಾಕಿದ್ದ ಎಂದು ಕುಟುಂಬಸ್ಥರು ದೂರಿದ್ದಾರೆ.

ಅಜ್ಜನ ತಿಥಿ ಕಾರ್ಯ ಮುಗಿಸಿಕೊಂಡು ವಿನುತಾ ಗಂಡನ ಮನೆಗೆ ಮರಳಿದ್ದರು. ಸಂಜೆ ಸುಮಾರು 4 ಗಂಟೆ ವೇಳೆಗೆ ವಿನುತಾಳನ್ನು ಹೊತ್ತುಕೊಂಡು ಬರುತ್ತಿರುವುದನ್ನು ತವರು ಮನೆಯವರು ಗಮನಿಸಿದ್ದು, ಗಂಡನ ಮನೆಯವರು ಆಕೆ ನೇಣು ಹಾಕಿಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ತಕ್ಷಣ ವಿನುತಾಳನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆತರಲಾಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವಿನುತಾ ಮೃತಪಟ್ಟ ಬಳಿಕ ಆಕೆಯ ಪತಿ ಶಿವಶಂಕರ, ಅತ್ತೆ ಶಾಂತಮ್ಮ ಹಾಗೂ ಮಾವ ಈಶ್ವರಪ್ಪ ಪರಾರಿಯಾಗಿದ್ದಾರೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ದಾವಣಗೆರೆ ಎಸ್ಪಿ ಕಚೇರಿ ಬಳಿ ತಂದ ಕುಟುಂಬಸ್ಥರು, ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕಣ್ಣೀರಿಟ್ಟರು. ಶಿವಶಂಕರ ಹಾಗೂ ಆತನ ಕುಟುಂಬದವರನ್ನು ಬಂಧಿಸಿ, ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವಿನುತಾ ಅವರ ಪತಿ ಶಿವಶಂಕರ್, ಅತ್ತೆ ಶಾಂತಮ್ಮ ಹಾಗೂ ಮಾವ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಾವಿನ ನಿಖರ ಕಾರಣ ಹಾಗೂ ಕುಟುಂಬಸ್ಥರು ಮಾಡಿರುವ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ತಿಳಿದು ಬರಬೇಕಿದೆ.