ಧಾರವಾಡ: ಸಂಸ್ಕೃತ ಭಾಷೆ ಹಾಗೂ ಸಾಹಿತ್ಯವನ್ನು ಕಲಿಯಲು ಆಸಕ್ತರಿಗೆ ಮಹತ್ವದ ಅವಕಾಶ ದೊರೆತಿದ್ದು, ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಐಐಟಿ ಧಾರವಾಡದ ಜಂಟಿ ಸಹಯೋಗದಲ್ಲಿ ನಡೆಸಲಾಗುವ ಸಂಸ್ಕೃತ ಪ್ರಮಾಣಪತ್ರ ಮತ್ತು ಡಿಪ್ಲೊಮಾ ಕೋರ್ಸ್‌ಗಳಿಗೆ 2026–27ನೇ ಶೈಕ್ಷಣಿಕ ಅವಧಿಯ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ.
ಸಂಸ್ಕೃತ ಭಾಷೆಯ ಮೂಲಭೂತ ಜ್ಞಾನದಿಂದ ಮುಂದುವರಿದ ಅಧ್ಯಯನದವರೆಗೆ ಆಸಕ್ತಿ ಹೊಂದಿರುವವರು ಈ ಕೋರ್ಸ್‌ಗಳ ಮೂಲಕ ಸಂಸ್ಕೃತ ಭಾಷೆ ಮತ್ತು ಅದರ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಕಲಿಯಲು ಅವಕಾಶ ಪಡೆಯಬಹುದಾಗಿದೆ.
IIT ಧಾರವಾಡ ಮತ್ತು ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯವು ಈಗಾಗಲೇ ಸಂಸ್ಕೃತ ಭಾಷೆಯ ಕಲಿಕೆ ಮತ್ತು ಪರಿಚಯಕ್ಕೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. 2026ರ ಆಗಸ್ಟ್ 25ರಿಂದ 31ರವರೆಗೆ IIT ಧಾರವಾಡದಲ್ಲಿ ವಿಶ್ವ ಸಂಸ್ಕೃತ ದಿನದ ಅಂಗವಾಗಿ ಸಂಸ್ಕೃತ ವಾರವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರತಿದಿನ ಸರಳ ಸಂಸ್ಕೃತ ಸಂಭಾಷಣಾ ತರಗತಿಗಳನ್ನು ನಡೆಸಲಾಗಿತ್ತು.
ಇದೀಗ ಇದೇ ಸಹಯೋಗದಡಿ 2026–27ರ ಸಂಸ್ಕೃತ ಪ್ರಮಾಣಪತ್ರ ಮತ್ತು ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭಿಸಿರುವುದಾಗಿ IIT ಧಾರವಾಡ ಪ್ರಕಟಿಸಿದೆ. ಸಂಸ್ಕೃತ ಭಾಷೆ, ಸಾಹಿತ್ಯ ಮತ್ತು ಭಾರತೀಯ ಜ್ಞಾನ ಪರಂಪರೆಯ ಬಗ್ಗೆ ಆಸಕ್ತಿ ಹೊಂದಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಆನ್‌ಲೈನ್‌ನಲ್ಲಿ ಪ್ರವೇಶ : ಪ್ರವೇಶಕ್ಕೆ ಸಂಬಂಧಿಸಿದ ಅರ್ಜಿ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಕೈಗೊಳ್ಳಲಾಗುತ್ತಿದೆ. ಆಸಕ್ತರು ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದ SAMARTH ಪ್ರವೇಶ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಪ್ರವೇಶ ಲಿಂಕ್: csucsl.samarth.edu.in ಹೆಚ್ಚಿನ ಮಾಹಿತಿಗಾಗಿ IIT ಧಾರವಾಡ ಕೇಂದ್ರ ಸಂರ್ಪಕಿಸಬಹುದಾಗಿದೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಕೋರ್ಸ್‌ನ ಅರ್ಹತೆ, ಅವಧಿ, ಶುಲ್ಕ, ತರಗತಿ ವಿಧಾನ ಹಾಗೂ ಕೊನೆಯ ದಿನಾಂಕ ಸೇರಿದಂತೆ ಸಂಪೂರ್ಣ ವಿವರಗಳನ್ನು ಅಧಿಕೃತ ಪ್ರವೇಶ ಪೋರ್ಟಲ್‌ನಲ್ಲಿ ಪರಿಶೀಲಿಸುವುದು ಸೂಕ್ತ.
ಸಂಸ್ಕೃತವನ್ನು ಹೊಸದಾಗಿ ಕಲಿಯಲು ಬಯಸುವವರು ಮಾತ್ರವಲ್ಲದೆ, ಭಾಷೆ ಮತ್ತು ಸಾಹಿತ್ಯದ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆಯಲು ಬಯಸುವವರಿಗೂ ಈ ಕೋರ್ಸ್‌ಗಳು ಉಪಯುಕ್ತವಾಗಬಹುದಾಗಿದೆ. IIT ಧಾರವಾಡದಲ್ಲಿ ಸಂಸ್ಕೃತ ಸಂಬಂಧಿತ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಇತ್ತೀಚೆಗೆ ನೀಡಲಾಗುತ್ತಿರುವ ಆದ್ಯತೆಯ ಹಿನ್ನೆಲೆಯಲ್ಲಿ ಈ ಪ್ರವೇಶಾತಿ ಗಮನ ಸೆಳೆದಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















