SK Home Ad
Home ಸುದ್ದಿ ರಾಜ್ಯ ಪಿಯು ಪಠ್ಯಪುಸ್ತಕ ವಿತರಣೆಗೆ ಆರಂಭದಲ್ಲೇ ವಿಘ್ನ

ಪಿಯು ಪಠ್ಯಪುಸ್ತಕ ವಿತರಣೆಗೆ ಆರಂಭದಲ್ಲೇ ವಿಘ್ನ

0
243

ಅಕ್ಷತಾ ಮಿರಜಕರ
ಬೆಂಗಳೂರು: ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಘೋಷಿಸಿದ್ದ ಸರ್ಕಾರಿ ಮತ್ತು ಅನುದಾನಿತ ಪದವಿಪೂರ್ವ ಕಾಲೇಜುಗಳ ಮೊದಲ ವರ್ಷದ ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳಿಗೆ ಆರಂಭಿಕ ವಿಘ್ನ ಎದುರಾಗಿದೆ.

ತರಗತಿಗಳು ಆರಂಭವಾಗಿ ಎರಡೂವರೆ ತಿಂಗಳು ಕಳೆದರೂ ಇನ್ನೂವರೆಗೆ ಪುಸ್ತಕಗಳ ವಿತರಣೆಯಾಗಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ.

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಈ ಯೋಜನೆ ಆರಂಭಿಸಿತ್ತು. 2026ರ ಮೇ. 24ರಿಂದ ಪಿಯುಸಿ ಪ್ರವೇಶಾತಿ ನಡೆದು ಜೂನ್ ತಿಂಗಳಿಂದ ತರಗತಿಗಳು ಆರಂಭವಾಗಿವೆ. ಪಿಯುಸಿ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಕಿರುಪರೀಕ್ಷೆ ಸೇರಿದಂತೆ ಅರ್ಧವಾರ್ಷಿಕ ಪರೀಕ್ಷೆ ನಡೆಸುವಂತೆ ಆದೇಶಿಸಿದೆ. ಆದರೆ, ಪಠ್ಯಪುಸ್ತಕ ಇಲ್ಲದೇ ಪರೀಕ್ಷೆ ಹೇಗೆ ಬರೆಯುವುದು ಹೇಗೆ ಎಂಬ ಪ್ರಶ್ನೆ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಮೂಡಿದೆ.

ಪೋಷಕರ ಆಕ್ರೋಶ: ಶಾಲಾ ಶಿಕ್ಷಣದ ಬಳಿಕ ಪಿಯು ಹಂತವು ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಭವಿಷ್ಯಕ್ಕೆ ಪ್ರಮುಖ ಘಟ್ಟ. ಇಂತಹ ಸಂದರ್ಭದಲ್ಲಿ ಎರಡೂವರೆ ತಿಂಗಳಾದರೂ ಪುಸ್ತಕ ನೀಡದಿರುವುದು ಇಲಾಖೆಯ ಯೋಜನೆ ಮತ್ತು ಪೂರೈಕೆ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಮೂಡಿಸಿದೆ. ವಿಶೇಷವಾಗಿ ಪರೀಕ್ಷಾ ದೃಷ್ಟಿಯಿಂದ ಮಹತ್ವದ ಪಾಠಗಳನ್ನು ಸಮಯಕ್ಕೆ ಸರಿಯಾಗಿ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಉಪನ್ಯಾಸಕರು ಪಾಠ ಬೋಧನೆ ಮುಂದುವರಿಸುತ್ತಿದ್ದರೂ ಎಲ್ಲ ವಿದ್ಯಾರ್ಥಿಗಳ ಕೈಯಲ್ಲಿ ಪಠ್ಯಪುಸ್ತಕ ಇಲ್ಲದಿರುವುದು ಕಲಿಕೆಗೆ ಅಡ್ಡಿಯಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೈ ಸೇರದ ಪುಸ್ತಕಗಳು: ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಕನ್ನಡ ಇಂಗ್ಲೀಷ್ ಸೇರಿದಂತೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳು ವಿದ್ಯಾರ್ಥಿಗಳ ಕೈ ಸೇರಿಲ್ಲ. ಸರ್ಕಾರದಿಂದ ಮುದ್ರಣಗೊಂಡ ಪುಸ್ತಕಗಳು ಗೋದಾಮಿನಲ್ಲೇ ಗೆದ್ದಲು ಹಿಡಿಯುತ್ತಿವೆ. ಖಾಸಗಿಯವರು ಶೇ. 25ರಷ್ಟು ಹಣ ಕೊಟ್ಟು ಪುಸ್ತಕ ಖರೀದಿ ಮಾಡಿದ್ದಾರೆ. ಉಳಿದ ಶೇ. 75ರಷ್ಟು ಪುಸ್ತಕ ಸರಬರಾಜು ಆಗಿಲ್ಲ. ಮುದ್ರಣಗೊಂಡ ಪಠ್ಯಪುಸ್ತಕಗಳನ್ನು ಸರಕಾರಿ ಕಾಲೇಜು ಮಕ್ಕಳಿಗೆ ವಿತರಿಸಲು ಸರ್ಕಾರದ ಅನುಮೋದನೆ ಬೇಕಿದೆ. ಹೀಗಾಗಿ ಮುದ್ರಿತ ಪುಸ್ತಕ ಯಾವುದೇ ಪ್ರಯೋಜನಕ್ಕೆ ಬಾರದೆ ಗ್ರಾಮೀಣ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ..

ಕರ್ನಾಟಕ ಪಠ್ಯಪುಸ್ತಕ ಸಂಘ ವ್ಯವಸ್ಥಾಪಕ ನಿರ್ದೇಶಕ ಎಂ.ಪಿ. ಮಾದೇಗೌಡ ಮಾತನಾಡಿ, “ರಾಜ್ಯ ಸರ್ಕಾರದಿಂದ ಸುಮಾರು 27 ಲಕ್ಷ ಪುಸ್ತಕಗಳ ಬೇಡಿಕೆಯಿದ್ದು, ಶೇ. 100ರಷ್ಟು ಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ. ಮತ್ತೆ ಸರ್ಕಾರದಿಂದ ಯಾವುದೇ ಬೇಡಿಕೆ ಬಂದಿಲ್ಲ. ಕಳೆದ ವರ್ಷ ಮಾರಾಟಕ್ಕೆ ಇಟ್ಟಿರುವ ಪುಸ್ತಕಗಳನ್ನು ಇದೀಗ ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದ್ದು, ಶಿಕ್ಷಣ ಇಲಾಖೆಯಿಂದ ಅನುಮೋದನೆ ಬಂದಾಗ ಮಾತ್ರ ಪುಸ್ತಕಗಳನ್ನು ನೀಡಲಾಗುವುದು” ಎಂದು ತಿಳಿಸಿದ್ದಾರೆ.