ಹುಬ್ಬಳ್ಳಿ: ʻಸ್ವಾಮಿನಾಥನ್ ಆಯೋಗ ವರದಿ ಜಾರಿ ಹಾಗೂ ಕಬ್ಬಿಗೆ ಕನಿಷ್ಠ ಬೆಂಬಲ ನೀಡುವ ಕುರಿತು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರು ಇಂದು(ಮಂಗಳವಾರ) ಮಧ್ಯಾಹ್ನ 3 ಗಂಟೆಯೊಳಗೆ ಸ್ಪಷ್ಟ ನಿರ್ಧಾರ ತಿಳಿಸಬೇಕು. ಇಲ್ಲದಿದ್ದರೆ ಇಲ್ಲಿ ನೆರದ ರೈತರು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಅವರ ನಿವಾಸಕ್ಕೆ ಮುತ್ತಿಗೆ ಹಾಕಿದರೂ ಅಚ್ಚರಿಯಿಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ ಎಚ್ಚರಿಸಿದ್ದಾರೆ.
ಹುಬ್ಬಳ್ಳಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ʻಸಚಿವ ಜೋಶಿ ಅವರು ವಿಡಿಯೋ ಸಂದೇಶದಲ್ಲಿ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಕಬ್ಬು ಬೆಳೆಗಾರರಲ್ಲಿ ಉಂಟಾಗಿರುವ ಗೊಂದಲ, ಸಮಸ್ಯೆಗಳನ್ನು ಚರ್ಚಿಸಲು ದೆಹಲಿಗೆ ಆಹ್ವಾನಿಸುತ್ತೇವೆ ಎಂದಿದ್ದಾರೆ. ನಾವೇನು ಅವರ ಪಕ್ಷದ ಕಾರ್ಯಕರ್ತರಲ್ಲ. ದೇಶಕ್ಕೆ ಅನ್ನ ನೀಡುವ ರೈತರಾಗಿದ್ದು, ಅವರೇ ಇಲ್ಲಿಗೇ ಬರಬೇಕು’ ಎಂದು ಆಗ್ರಹಿಸಿದರು.
ಈಗಾಗಲೇ ಚನ್ನಮ್ಮ ವೃತ್ತದಲ್ಲಿ ವಿವಿಧ ಜಿಲ್ಲೆಗಳಿಂದ, ರಾಜ್ಯಗಳಿಂದ ಐದು ಸಾವಿರಕ್ಕೂ ಹೆಚ್ಚು ಮಂದಿ ರೈತರು ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ. ಸಾಕಷ್ಟು ಮಂದಿ ಇನ್ನೂ ಬರುತ್ತಿದ್ದಾರೆ. ನಗರದ ಹೊರವಲಯದಲ್ಲಿ ರೈತರ ವಾಹನಗಳನ್ನು ತಡೆದು ನಿಲ್ಲಿಸಲಾಗಿದೆ. ಪ್ರತಿಭಟನೆ ಕೈ ಮೀರುವ ಮೊದಲು ರೈತರ ಬೇಡಿಕೆ ಈಡೇರಿಸುವ ಕುರಿತು ಸ್ಪಷ್ಟ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.
ರೈತರು ಬಾರಕೋಲು ಚಳವಳಿ ನಡೆಸಿ, ಹಸಿರು ಟವೆಲ್ ಪ್ರದರ್ಶಿಸಿ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಕೇಂದ್ರ ಸಚಿವ ಪ್ಲಲ್ಹಾದ ಜೋಶಿ ಅವರ ನಿವಾಸ ಹಾಗೂ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.





















