SK Home Ad
Home ನಮ್ಮ ಜಿಲ್ಲೆ ಧಾರವಾಡ ಮನಸ್ಸುಗಳ ವೈದ್ಯನ ನಿರ್ಗಮನ: ಬರೀ ಔಷಧಿಯಲ್ಲ, ಬದುಕುವ ಧೈರ್ಯ ಕೊಡುತ್ತಿದ್ದ ಡಾ. ಆನಂದ ಪಾಂಡುರಂಗಿ ಇನ್ನಿಲ್ಲ

ಮನಸ್ಸುಗಳ ವೈದ್ಯನ ನಿರ್ಗಮನ: ಬರೀ ಔಷಧಿಯಲ್ಲ, ಬದುಕುವ ಧೈರ್ಯ ಕೊಡುತ್ತಿದ್ದ ಡಾ. ಆನಂದ ಪಾಂಡುರಂಗಿ ಇನ್ನಿಲ್ಲ

0
132

ಧಾರವಾಡ: ಬೆಳಿಗ್ಗೆ ಎದ್ದರೆ ಧಾರವಾಡದ ಪಾಂಡುರಂಗಿ ಆಸ್ಪತ್ರೆ ಮುಂದೆ ಜನರ ಸಾಲು… ಒಳಗೆ ಹೋದರೆ ನಗುಮುಖದ ಡಾಕ್ಟರ್… “ಏನಾಗಿದೆ? ಹೆದರಬೇಡಿ, ಎಲ್ಲ ಸರಿ ಹೋಗುತ್ತೆ” ನಾನಿದ್ದೀನಿಲ್ಲ… ಮತ್ಯಾಕ ಹೆದರತೀರಿ… ಅವನಷ್ಟೇ ಅಲ್ಲ.. ನಿಮಗೂ ಹೇಳ್ತಿನಿ ನೋಡ್ರಿ… ಬ್ಯಾಳ ಬ್ಯಾಸರ ಮಾಡ್ಕೋಬಾರದ್ರಿ…. ಈ ಜಿಂದಗಿನ ಹಂಗ… ನಕ್ಕೊಂತ ಇರಬೇಕ್ರಿಪಾ… ಅವನ್ನ ಅರಾಮ ಮಾಡಿಕೊಡೊ ಜವಾಬ್ದಾರಿ ನಂದೈತಿ…

ಹೀಗೆ ಭುಜ ತಟ್ಟಿ ಹೇಳುವ ಆ ಒಂದು ಮಾತಿಗೇ ಅರ್ಧ ರೋಗ ವಾಸಿಯಾಗುತ್ತಿತ್ತು. ರೋಗಿಯನ್ನು ಆಸ್ಪತ್ರೆಗೆ ಕರೆತಂದ ಕುಟುಂಬಸ್ಥರು ನಿರಾಳರಾಗುತ್ತಿದ್ದರು. ವೈದ್ಯರ ಆ ಮಾತಿಗೆ ವೈದ್ಯೋ ನಾರಾಯಣ ಹರಿ ಎಂಬ ಮಾತು ಎಷ್ಟು ಸತ್ಯ ಎಂಬ ಅನುಭವ ಅಗುತ್ತಿತ್ತು. ಅಂಥ ಮನಸ್ಸುಗಳ ವೈದ್ಯ, ಸಾವಿರಾರು ಕುಟುಂಬಗಳಿಗೆ ನೆಮ್ಮದಿ ನೀಡಿದ್ದ ಡಾ. ಆನಂದ ಪಾಂಡುರಂಗಿ ( 71) ಇನ್ನಿಲ್ಲ.

ಇದು ಕೇವಲ ಒಬ್ಬ ವೈದ್ಯರ ಸಾವಲ್ಲ, ಉತ್ತರ ಕರ್ನಾಟಕ ಕಂಡ ಅಪರೂಪದ ಮಾನವೀಯ ವೈದ್ಯ ಪರಂಪರೆಯ ಅಂತ್ಯ. ತೀವ್ರ ಹೃದಯಾಘಾತಕ್ಕೀಡಾದ ಅವರು ಗುರುವಾರ ಬೆಳಿಗ್ಗೆ ನಿಧನರಾದರು. ಅವರಿಗೆ ಪತ್ನಿ, ಪುತ್ರ ಆದಿತ್ಯ (ಮನೋರೋಗ ವೈದ್ಯ ), ಸೊಸೆ ಹಾಗೂ ಅಪಾರ ಬಂಧು ಬಳಗ ಇದ್ದಾರೆ.

ಕಿಮ್ಸ್‌ನಲ್ಲಿ ಓದಿ, ಕರ್ನಾಟಕ ವಿವಿಯಿಂದ ಹಾನರ್ಸ್ ಪಡೆದು, ಮೀರಜ್‌ನ ಖ್ಯಾತ ಮನೋರೋಗ ತಜ್ಞ ಡಾ. ಬಿ.ಎಂ. ದೇಬಸಿಕ್ದಾರ್ ಅವರ ಬಳಿ ಕೌಶಲ್ಯ ಕಲಿತು ಬಂದ ಅವರು ಧಾರವಾಡವನ್ನೇ ಕರ್ಮಭೂಮಿ ಮಾಡಿಕೊಂಡರು. ದುಡ್ಡಿಗಾಗಿ ಅಲ್ಲ, ಜನರ ಮನಸ್ಸು ಹಗುರ ಮಾಡುವುದಕ್ಕಾಗಿ ಆಸ್ಪತ್ರೆ ತೆರೆದರು.

ಅವರ ಬಳಿ ಬರುತ್ತಿದ್ದವರು ಕೇವಲ ರೋಗಿಗಳಲ್ಲ. ಪರೀಕ್ಷೆ ಹೆದರಿಕೆಯ ವಿದ್ಯಾರ್ಥಿ, ಸಂಸಾರದ ಜಂಜಾಟದಲ್ಲಿ ಬಳಲಿದ ತಾಯಿ, ಕೆಲಸದ ಒತ್ತಡದಲ್ಲಿ ಕುಗ್ಗಿದ ಯುವಕ… ಎಲ್ಲರಿಗೂ ಅವರ ಬಳಿ ಮಾತಿತ್ತು, ಸಮಯವಿತ್ತು, ಪರಿಹಾರವಿತ್ತು. ಪತ್ರಿಕೆಗಳಲ್ಲಿ ಪರೀಕ್ಷೆ ಸಮಯದಲ್ಲಿ ಅವರು ಬರೆಯುತ್ತಿದ್ದ ಅಂಕಣಗಳು ಎಷ್ಟೋ ಮಕ್ಕಳ ಆತ್ಮಹತ್ಯೆಯ ಯೋಚನೆಗೆ ಬ್ರೇಕ್ ಹಾಕಿದ್ದವು. ವೇದಿಕೆಯಲ್ಲಿ ಅವರು ಮಾತನಾಡಲು ನಿಂತರೆ ಅದು ಉಪನ್ಯಾಸವಾಗುತ್ತಿರಲಿಲ್ಲ, ಬದುಕಿನ ಪಾಠವಾಗುತ್ತಿತ್ತು.

ವೈದ್ಯರಾಗಿ ಬ್ಯುಸಿಯಾಗಿದ್ದರೂ ಕರ್ನಾಟಕ ವಿದ್ಯಾವರ್ಧಕ ಸಂಘದ ವೇದಿಕೆಯಲ್ಲಿ, ಸಾಹಿತ್ಯ ಸಂಸ್ಕೃತಿಯ ಕಾರ್ಯಕ್ರಮದಲ್ಲಿ ಅವರು ಇರುತ್ತಿದ್ದರು. ಅವರಿಗೆ ಸಿಕ್ಕ ರಾಜ್ಯೋತ್ಸವ ಪ್ರಶಸ್ತಿ, ಬಿ.ಸಿ. ರಾಯ್ ಪ್ರಶಸ್ತಿ, ಗೌರವ ಡಾಕ್ಟರೇಟ್, ಅವ್ವ ಸೇವಾ ಪ್ರಶಸ್ತಿ ಎಲ್ಲವೂ ಅವರ ಸೇವೆಗೆ ಸಿಕ್ಕ ನಮನಗಳಷ್ಟೇ.

ಇಂದು ಆಸ್ಪತ್ರೆಯ ಆ ಕುರ್ಚಿ ಖಾಲಿ ಇದೆ. ಆದರೆ ಅವರು ಗುಣಪಡಿಸಿದ ಸಾವಿರಾರು ಮನಸ್ಸುಗಳಲ್ಲಿ, ಅವರು ತುಂಬಿದ ಧೈರ್ಯದಲ್ಲಿ ಡಾ. ಆನಂದ ಪಾಂಡುರಂಗಿ ಸದಾ ಜೀವಂತ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.