ಕೊಡಗು: ಈ ಬಾರಿಯ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಗಜಪಡೆಯ ಪಟ್ಟಿ ಸಿದ್ಧವಾಗಿದ್ದು, ದುಬಾರೆ ಶಿಬಿರದಿಂದ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಕಾವೇರಿ ಸೇರಿದಂತೆ ವಿವಿಧ ಶಿಬಿರಗಳಿಂದ ಒಟ್ಟು 12 ಆನೆಗಳ ಪಟ್ಟಿ ಸಿದ್ಧಗೊಂಡಿದೆ.
ದಸರೆಗೆ ಕಳುಹಿಸಲು ಸಿದ್ಧವಾದ ಆನೆಗಳ ಪಟ್ಟಿಯಲ್ಲಿ ಕುಶಾಲನಗರ ಸಮೀಪದ ದೊಡ್ಡ ಹರವೆ ಶಿಬಿರದ ರೂಪ, ನಾಗರಹೊಳೆ ಸಮೀಪದ ಬಳ್ಳೆ ಆನೆ ಶಿಬಿರದ ಮಹೇಂದ್ರ, ಲಕ್ಷ್ಮಿ, ಮತ್ತಿಗೋಡು ಶಿಬಿರದ ಏಕಲವ್ಯ, ಶ್ರೀಕಂಠ ಮತ್ತು ರಾಮಪುರ ಶಿಬಿರದ ಚೈತ್ರ ಆನೆಗಳನ್ನು ದಸರೆಗೆ ಕಳುಹಿಸಲು ನಿರ್ಧರಿಸಲಾಗಿದೆ.
ಪ್ರಥಮ ತಂಡದಲ್ಲಿ ದುಬಾರೆಯ 5 ಆನೆಗಳು ಸೇರಿದಂತೆ ಒಟ್ಟು 8 ಆನೆಗಳನ್ನು ಆ. 26ರಂದು ಕಳುಹಿಸಿಕೊಡಲಾಗುತ್ತದೆ. ಎರಡನೇ ತಂಡದಲ್ಲಿ ದೊಡ್ಡ ಹರವೆ ಶಿಬಿರದ ರೂಪ ಸೇರಿದಂತೆ 4 ಆನೆಗಳನ್ನು ಕಳುಹಿಸಲು ನಿರ್ಧರಿಸಲಾಗಿದೆ.
ಕಳೆದ ಆರು ವರ್ಷಗಳಿಂದ ದಸರಾ ಉತ್ಸವದಲ್ಲಿ ಅಂಬಾರಿ ಹೊತ್ತು ಗಜ ಪಡೆ ಮುನ್ನಡೆಸಿದ್ದ ಕ್ಯಾಪ್ಟನ್ ಅಭಿಮನ್ಯುವನ್ನು ವಯೋಮಿತಿ ಹಿನ್ನೆಲೆಯಲ್ಲಿ ಈ ಬಾರಿ ಪಟ್ಟಿಯಿಂದ ಕೈಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ದುಬಾರೆಯ ಧನಂಜಯ ಅಥವಾ ಪ್ರಶಾಂತಗೆ ಈ ಬಾರಿ ಅಂಬಾರಿ ಆನೆಯಾಗಿ ಅವಕಾಶ ದೊರಕುವ ಸಾಧ್ಯತೆ ಹೆಚ್ಚಾಗಿದೆ. ಈ ಸಂಬಂಧ ಸದ್ಯದಲ್ಲಿಯೇ ಅಂತಿಮ ತೀರ್ಮಾನ ಹೊರಬೀಳಲಿದೆ.
ನಿಶಾನೆ ಆನೆಯಾಗಿ ಕ್ಯಾಪ್ಟನ್ ಅಭಿಮನ್ಯು: ದಸರಾ 2026ರಲ್ಲಿ ಅಭಿಮನ್ಯು ಆನೆ ನಿಶಾನೆ ಆನೆಯಾಗಿ ಭಾಗವಹಿಸುವುದು ಬಹುತೇಕ ಖಚಿತವಾಗಿದೆ. ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತನಾಗಿದ್ದರೂ, ಆತನ ಸೇವೆಯನ್ನು ಗೌರವಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆರು ಬಾರಿ ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದ್ದ ಅಭಿಮನ್ಯುಗೆ ಇದು ಗೌರವಪೂರ್ವಕ ವಿದಾಯವಾಗಿದ್ದು, ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಸತತ ಆರು ಬಾರಿ ದಸರೆಯ ಕ್ಯಾಪ್ಟನ್ ಆಗಿ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತಿದ್ದ ಅಭಿಮನ್ಯು, ತನ್ನ ಕರ್ತವ್ಯ ನಿಷ್ಠೆ ಮತ್ತು ಗಾಂಭೀರ್ಯದಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದ.






















