SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಜಯದೇವ ಜಗದ್ಗುರುಗಳ ಆಶೀರ್ವಾದವೇ ಮುರುಘಾ ಮಠದ ರಕ್ಷಾಕವಚ

ಜಯದೇವ ಜಗದ್ಗುರುಗಳ ಆಶೀರ್ವಾದವೇ ಮುರುಘಾ ಮಠದ ರಕ್ಷಾಕವಚ

0
29

ದಾವಣಗೆರೆ: ಜಯದೇವ ಜಗದ್ಗುರುಗಳು ಬದುಕಿದ್ದಾಗ ಮಾತ್ರವಲ್ಲ, ಲಿಂಗೈಕ್ಯರಾದ ನಂತರವೂ ತಮ್ಮ ಪವಾಡಗಳು ಹಾಗೂ ಮಹಾನ್ ಕಾರ್ಯಗಳ ಮೂಲಕ ಭಕ್ತರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ಮುರುಘಾ ಶರಣರಿಗೆ ರಕ್ಷೆಯಾಗಿ ನಿಂತವರು ಜಯದೇವ ಜಗದ್ಗುರುಗಳು. ಮುರುಘಾ ಮಠ ಹಾಗೂ ಶೂನ್ಯ ಪೀಠವನ್ನು ಕಾಪಾಡಿರುವುದು ಅವರ ಪವಾಡವಲ್ಲದೆ ಮತ್ತೇನು ಎಂದು ದಾವಣಗೆರೆ ವಿರಕ್ತಮಠದ ಡಾ. ಶ್ರೀಬಸವಪ್ರಭು ಸ್ವಾಮೀಜಿ ಹೇಳಿದರು.

ದಾವಣಗೆರೆಯ ಶಿವಯೋಗಿ ಮಂದಿರದಲ್ಲಿ ಶಿವಯೋಗಾಶ್ರಮ ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಿದ್ದ ಲಿಂ. ಶ್ರೀಜಯದೇವ ಮುರುಘಾರಾಜೇಂದ್ರ ಮಹಾಸ್ವಾಮಿಗಳವರ 70ನೇ ವರ್ಷದ ಸ್ಮರಣೋತ್ಸವ ಹಾಗೂ ಮಹಾರಥೋತ್ಸವ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

ಜಯದೇವ ಜಗದ್ಗುರುಗಳ ಆಶೀರ್ವಾದದಿಂದಲೇ ಮುರುಘಾ ಶರಣರು ಹಲವು ಸವಾಲು ಹಾಗೂ ಸಂಕಷ್ಟಗಳನ್ನು ಎದುರಿಸಿ ಗೆದ್ದು ಬಂದಿದ್ದಾರೆ. ಅತ್ಯಂತ ಕಷ್ಟದ ಸಂದರ್ಭಗಳಲ್ಲಿಯೂ ಮುರುಘಾ ಶರಣರು ವೈಯಕ್ತಿಕ ವಿಚಾರಗಳಿಗಿಂತ ಮಠದ ಅಭಿವೃದ್ಧಿ, ಸಮಾಜದ ಹಿತ ಹಾಗೂ ಶರಣ ಪರಂಪರೆಯ ಬೆಳವಣಿಗೆಯ ಬಗ್ಗೆಯೇ ಚಿಂತಿಸುತ್ತಿದ್ದರು. ಇಂತಹ ಮಹಾನ್ ಗುರುಗಳನ್ನು ಪಡೆದಿರುವ ನಾವೇ ಧನ್ಯರು ಎಂದು ಹೇಳಿದರು.

ಜಯದೇವ ಜಗದ್ಗುರುಗಳು ಪವಾಡ ಪುರುಷರು, ಮಹಾನ್ ಶಿವಯೋಗಿಗಳು ಹಾಗೂ ವಿಭೂತಿ ಪುರುಷರಾಗಿದ್ದರು. ಅವರ ಬದುಕು ಸಮಾಜಕ್ಕೆ ತ್ಯಾಗ, ಸೇವೆ ಮತ್ತು ಶಿವಯೋಗದ ಆದರ್ಶವನ್ನು ತೋರಿಸಿಕೊಟ್ಟಿದೆ. ತಮ್ಮನ್ನು ಗೌರವಿಸಿ ಕಾಣಿಕೆಯಾಗಿ ನೀಡಿದ ಸುಮಾರು 9 ಕೋಟಿ ಹಣವನ್ನು ವೈಯಕ್ತಿಕ ಬಳಕೆಗೆ ಬಳಸದೆ ಸಮಾಜದ ಏಳಿಗೆಗೆ ಸಮರ್ಪಿಸಿದ ಮಹಾಶರಣರು ಎಂದು ಸ್ಮರಿಸಿದರು.

ಮಠವನ್ನು ಕೇವಲ ಶ್ರೀಮಂತಗೊಳಿಸುವುದಕ್ಕೆ ಸೀಮಿತವಾಗದೆ, ಅದರ ಸಂಪತ್ತನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಕಾರ್ಯಕ್ಕೆ ಜಯದೇವ ಜಗದ್ಗುರುಗಳು ಆದ್ಯತೆ ನೀಡಿದ್ದರು. ಉಚಿತ ಪ್ರಸಾದ ನಿಲಯಗಳನ್ನು ಆರಂಭಿಸಿ ಹಸಿದವರಿಗೆ ಅನ್ನ ನೀಡಿದರು. ಶಿಕ್ಷಣಕ್ಕೆ ಉತ್ತೇಜನ ನೀಡುವ ಮೂಲಕ ಬಡ ಹಾಗೂ ಹಿಂದುಳಿದ ವರ್ಗಗಳ ಮಕ್ಕಳಿಗೆ ಜ್ಞಾನಾರ್ಜನೆಗೆ ಅವಕಾಶ ಕಲ್ಪಿಸಿದರು ಎಂದು ಹೇಳಿದರು.

ಜಯದೇವ ಜಗದ್ಗುರುಗಳ ಸೇವಾ ಪರಂಪರೆಯೇ ಇಂದು ಮುರುಘಾ ಮಠದ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೇರಣೆಯಾಗಿದೆ. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಹಾಗೂ ಅವರ ಸಮಾಜಮುಖಿ ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ನಿಜವಾದ ಗುರುಸೇವೆ ಎಂದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಡಾ. ಶಿವಮೂರ್ತಿ ಮುರುಘಾ ಶರಣರು, ‘ಯತಿಗಳು ಹಾಗೂ ಸಾಧಕರ ಜೀವನ ಸುಲಭವಾಗಿರುವುದಿಲ್ಲ. ಜೀವನದ ಪ್ರತಿಯೊಂದು ಹಂತದಲ್ಲೂ ಸವಾಲುಗಳು ಹಾಗೂ ಸಮಸ್ಯೆಗಳು ಎದುರಾಗುತ್ತವೆ. ಆ ಸಮಸ್ಯೆಗಳಿಗೆ ಯಾರೂ ಹೆದರಬಾರದು. ಅವುಗಳನ್ನು ಧೈರ್ಯದಿಂದ ಎದುರಿಸಿ ಮುನ್ನಡೆದಾಗ ಮಾತ್ರ ನಿಜವಾದ ಸಾಧನೆ ಸಾಧ್ಯ ಎಂದರು.

ಶ್ರೀಜಯದೇವ ಜಗದ್ಗುರುಗಳ ಆಶೀರ್ವಾದ ಹಾಗೂ ಅವರ ವ್ಯಕ್ತ-ಅವ್ಯಕ್ತ ಶಕ್ತಿ ಈ ಮುರುಘಾ ಶರಣರ ಮೇಲಿದೆ. ಶ್ರೀಗಳ ಜೀವನವು ಅನೇಕ ಸವಾಲುಗಳು, ಸಂಕೀರ್ಣ ಸಂದರ್ಭಗಳು ಮತ್ತು ಆಪತ್ತುಗಳಿಂದ ಕೂಡಿದ್ದು, ಅವರು ಸದಾ ಭಕ್ತರ ರಕ್ಷಕರಾಗಿದ್ದರು ಎಂದು ಸ್ಮರಿಸಿದರು.

ಬ್ಯಾಡಗಿಯಿಂದ ಚಿತ್ರದುರ್ಗ ಪೀಠಕ್ಕೆ ಆಗಮಿಸುವ ಸಂದರ್ಭದಲ್ಲಿ ಶ್ರೀಜಯದೇವ ಗುರುಗಳಿಗೆ ಪ್ರಾಣಬೆದರಿಕೆ ಸೇರಿದಂತೆ ಹಲವು ಬೆದರಿಕೆಗಳು ಎದುರಾಗಿದ್ದವು. ಈ ಹಿನ್ನೆಲೆಯಲ್ಲಿ ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಅವರು ಪೊಲೀಸ್ ಇನ್ಸ್‌ಪೆಕ್ಟರ್ ಅವರ ಸಮವಸ್ತ್ರ ಧರಿಸಿ ಚಿತ್ರದುರ್ಗಕ್ಕೆ ಆಗಮಿಸಿದ್ದರು ಎಂದು ಶರಣರು ಸ್ಮರಿಸಿದರು.

ಅಲ್ಲದೆ, ಕೊರೊನಾ ಸಮಯದಲ್ಲಿ ಮ್ಯೂಸಿಯಂ ವ್ಯವಸ್ಥೆಗೊಳಿಸುವಾಗ ಶ್ರೀಗಳು ಬಳಸುತ್ತಿದ್ದ ಹಾಸಿಗೆಯನ್ನು ಪರಿಶೀಲಿಸಿದಾಗ, ಅದರೊಳಗೆ ಸ್ವಯಂ ರಕ್ಷಣೆಗಾಗಿ ಇಟ್ಟಿದ್ದ ಬೆಳ್ಳಿಯ ಚೂರಿ ಪತ್ತೆಯಾಗಿತ್ತು ಎಂದು ತಿಳಿಸಿದರು.