ಬಳ್ಳಾರಿ ಪೊಲೀಸರು ಸರಣಿ ಬೈಕ್ ಕಳ್ಳನನ್ನು ಬಂಧಿಸಿದ್ದು, ಕಳೆದ ಒಂದು ವರ್ಷದಲ್ಲಿ 41 ಬೈಕ್‌ಗಳನ್ನು ಕದ್ದು ಮಾರಾಟ ಮಾಡಿದ್ದಾನೆ ಎನ್ನಲಾಗಿದೆ. ಹೀರೋ ಹೋಂಡಾ ಮತ್ತು ಸ್ಪ್ಲೆಂಡರ್ ಬೈಕ್‌ಗಳನ್ನೇ ಗುರಿಯಾಗಿಸಿಕೊಂಡಿದ್ದ ಕಾರಣ ಆರೋಪಿ ‘ಸ್ಪ್ಲೆಂಡರ್ ಸಿದ್ದ ರೆಡ್ಡಿ’ ಎಂದೇ ಕುಖ್ಯಾತನಾಗಿದ್ದ.
ಬಳ್ಳಾರಿ: ಹೀರೋ ಹೋಂಡಾ ಹಾಗೂ ವಿಶೇಷವಾಗಿ ಸ್ಪ್ಲೆಂಡರ್ ಬೈಕ್‌ಗಳನ್ನು ಕಳವು ಮಾಡುವುದನ್ನೇ ಕಸುಬಾಗಿಸಿಕೊಂಡಿದ್ದ ಕುಖ್ಯಾತ ಸರಣಿ ಬೈಕ್ ಕಳ್ಳನನ್ನು ಬಳ್ಳಾರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 41 ಬೈಕ್‌ಗಳನ್ನು ಕದ್ದು ಮಾರಾಟ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಕಳುವಾದ ವಾಹನಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಳ್ಳಾರಿ ನಗರದ ಅಹಂಭಾವಿ ನಿವಾಸಿ ಸಿದ್ದರೆಡ್ಡಿ ಎಂದು ಗುರುತಿಸಲಾಗಿದ್ದು, ಆತ ಮೂಲತಃ ಆಟೋ ಚಾಲಕನಾಗಿದ್ದಾನೆ. ಆದರೆ ಕಳೆದ ಕೆಲವು ವರ್ಷಗಳಿಂದ ಬೈಕ್ ಕಳವು ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದ ಆತ, ವಿಶೇಷವಾಗಿ ಹೀರೋ ಹೋಂಡಾ ಕಂಪನಿಯ ಬೈಕ್‌ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ: 3 ರಾಜ್ಯಗಳು ಒಟ್ಟಾಗಿ ನೀರಾವರಿ ಸಮಸ್ಯೆ ಬಗೆಹರಿಸೋಣ: ಡಿಕೆ
ಆರೋಪಿ ಹೀರೋ ಹೋಂಡಾ ಹಾಗೂ ಸ್ಪ್ಲೆಂಡರ್ ಬೈಕ್‌ಗಳ ಲಾಕ್ ತೆರೆಯುವಲ್ಲಿ ಪರಿಣತಿ ಹೊಂದಿದ್ದ ಕಾರಣ, ಪೊಲೀಸ್ ವಲಯ ಹಾಗೂ ಸ್ಥಳೀಯರಲ್ಲಿ ‘ಸ್ಪ್ಲೆಂಡರ್ ಸಿದ್ದ ರೆಡ್ಡಿ’ ಎಂದೇ ಕುಖ್ಯಾತನಾಗಿದ್ದ. ಕಳುವು ಮಾಡಿದ ಬೈಕ್‌ಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಸಿರುಗುಪ್ಪ ಪಟ್ಟಣದಲ್ಲಿ ನಡೆದ ಬೈಕ್ ಕಳವು ಪ್ರಕರಣವನ್ನು ಬೆನ್ನಟ್ಟಿದ ಪೊಲೀಸರು, ಸಿಸಿಟಿವಿ ದೃಶ್ಯಗಳು ಮತ್ತು ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಕಳೆದ ಒಂದು ವರ್ಷದಲ್ಲಿ 41 ಬೈಕ್‌ಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕನ್ನಡ ಪಠ್ಯಪುಸ್ತಕ ವಿವಾದ: ‘ಕೃಷ್ಣ’ ಹೆಸರಿನ ಬಗ್ಗೆ NCERT ಸ್ಪಷ್ಟನೆ
ವಶಪಡಿಸಿಕೊಂಡಿರುವ 41 ಬೈಕ್‌ಗಳಲ್ಲಿ ಸುಮಾರು 30 ಬೈಕ್‌ಗಳು ಸ್ಪ್ಲೆಂಡರ್ ಮಾದರಿಯದ್ದಾಗಿದ್ದು, ಉಳಿದವು ಹೀರೋ ಹೋಂಡಾ ಕಂಪನಿಯ ಇತರೆ ಮಾದರಿಯ ವಾಹನಗಳಾಗಿವೆ ಎನ್ನುವುದು ವಿಶೇಷ. ಒಂದು ಬೈಕ್ ಕಳವು ಪ್ರಕರಣವನ್ನು ಭೇದಿಸಲು ಆರಂಭಿಸಿದ ತನಿಖೆ, ಕೊನೆಗೆ 41 ಬೈಕ್ ಕಳವು ಜಾಲವನ್ನು ಪತ್ತೆಹಚ್ಚುವಂತೆ ಮಾಡಿದ್ದು, ಆರೋಪಿಯ ಚಾಣಾಕ್ಷತನಕ್ಕೆ ಪೊಲೀಸರು ಕ್ಷಣಕಾಲ ದಂಗಾಗಿದ್ದಾರೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಇನ್ನಷ್ಟು ಕಳವು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.






















