SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ನಟ ಧನ್ವೀರ್ ವಿರುದ್ಧ ಜಮೀರ್ ಅಭಿಮಾನಿಗಳ ಆಕ್ರೋಶ: ಕ್ಷಮೆಯಾಚಿಸದಿದ್ದರೆ ಮುತ್ತಿಗೆ ಹಾಕುವ ಎಚ್ಚರಿಕೆ

ನಟ ಧನ್ವೀರ್ ವಿರುದ್ಧ ಜಮೀರ್ ಅಭಿಮಾನಿಗಳ ಆಕ್ರೋಶ: ಕ್ಷಮೆಯಾಚಿಸದಿದ್ದರೆ ಮುತ್ತಿಗೆ ಹಾಕುವ ಎಚ್ಚರಿಕೆ

0
42

ಬಳ್ಳಾರಿ: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ, ನಟ ಜೈದ್ ಖಾನ್ ಕುರಿತು ನಟ ಧನ್ವೀರ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ, ನಗರದ ಕೌಲ್ ಬಜಾರ್‌ನಲ್ಲಿ ಜಮೀರ್ ಅಭಿಮಾನಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಕೌಲ್ ಬಜಾರ್‌ನ ಇರ್ಷಾದ್ ಅಲಿ ಬಾಬಾ ಮೈದಾನದಲ್ಲಿ ರೈಸ್ ಆಫ್ ಹ್ಯೂಮ್ಯಾನಿಟಿ ಟ್ರಸ್ಟ್ ಅಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಸದಸ್ಯ ಎನ್.ಎಂ.ಡಿ. ಆಸಿಫ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ನಟ ಧನ್ವೀರ್ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ಅವರ ಭಾವಚಿತ್ರಕ್ಕೆ ಮಸಿ ಬಳಿದು, ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಎನ್.ಎಂ.ಡಿ. ಆಸಿಫ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಜಮೀರ್ ಅಹ್ಮದ್ ಖಾನ್, ಯುವ ನಾಯಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಹಾಗೂ ನಟ ಜೈದ್ ಖಾನ್ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಸಾರ್ವಜನಿಕ ಜೀವನದಲ್ಲಿರುವವರು ಮಾತನಾಡುವಾಗ ಸಂಯಮ ಮತ್ತು ಜವಾಬ್ದಾರಿ ಪ್ರದರ್ಶಿಸಬೇಕು. ವೈಯಕ್ತಿಕ ಟೀಕೆಗಳ ಮೂಲಕ ಇತರರ ಗೌರವಕ್ಕೆ ಧಕ್ಕೆ ತರುವುದು ಸರಿಯಲ್ಲ. ವಿವಾದಕ್ಕೆ ಕಾರಣವಾಗಿರುವ ಹೇಳಿಕೆಗಳ ಕುರಿತು ನಟ ಧನ್ವೀರ್ ಸ್ಪಷ್ಟನೆ ನೀಡಿ, ಸಂಬಂಧಪಟ್ಟವರಲ್ಲಿ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಮುತ್ತಿಗೆ ಹಾಕುವ ಎಚ್ಚರಿಕೆ: ನಟ ಧನ್ವೀರ್ ಕ್ಷಮೆಯಾಚಿಸದಿದ್ದರೆ ಅವರು ಎಲ್ಲಿಗೆ ಬಂದರೂ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಅಭಿಮಾನಿಗಳು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ವಾಹಿದ್, ಅಸ್ಲಾಂ, ಹುಸೇನ್ ಸಾಬ್, ಸಮೀರ್, ಅನ್ವರ್, ಜಂಡಾ ಜಿಲನ್, ನೂರ್, ಸೈಫುಲ್ಲಾ, ಸಲೀಂ, ಶಕ್ಕು ಇಲಿಯಾಸ್, ಬಾಬಾಲಿ ಸಿರಾಜ್, ಫಾರಿದ್, ಆದಿಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.