SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ದೇವರಗಟ್ಟು ಬನ್ನಿ ಉತ್ಸವದಲ್ಲಿ ದೊಣ್ಣೆ ಕಾಳಗ: ಓರ್ವ ಸಾವು, 80ಕ್ಕೂ ಹೆಚ್ಚು ಮಂದಿಗೆ ಗಾಯ

ದೇವರಗಟ್ಟು ಬನ್ನಿ ಉತ್ಸವದಲ್ಲಿ ದೊಣ್ಣೆ ಕಾಳಗ: ಓರ್ವ ಸಾವು, 80ಕ್ಕೂ ಹೆಚ್ಚು ಮಂದಿಗೆ ಗಾಯ

0
75

ಆಂಧ್ರದ ದೇವರಗಟ್ಟು ಬನ್ನಿ ಉತ್ಸವದಲ್ಲಿ ದೊಣ್ಣೆ ಕಾಳಗ: ಓರ್ವ ಸಾವು, 80ಕ್ಕೂ ಹೆಚ್ಚು ಮಂದಿಗೆ ಗಾಯ

ವರದಿ : ಕೆ. ಸಾಯಿಬಾಬಾ ತೆಕ್ಕಲಕೋಟೆ

ಸಂ ಕ. ಸಮಾಚಾರ ತೆಕ್ಕಲಕೋಟೆ( ಬಳ್ಳಾರಿ ): ರಾಜ್ಯದ ಗಡಿ ಬಗದಲ್ಲಿ ಹೊಂದಿಕೊಂಡಿರುವ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ದೇವರಗಟ್ಟು–ನೆರಣಿಕೆ ಗ್ರಾಮದಲ್ಲಿ ವಿಜಯದಶಮಿ ಅಂಗವಾಗಿ ನಡೆದ ಮಾಳ ಮಲ್ಲೇಶ್ವರಸ್ವಾಮಿ ಬನ್ನಿ ಉತ್ಸವದಲ್ಲಿ ದೊಣ್ಣೆ ಕಾಳಗದಲ್ಲಿ ಓರ್ವ ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಆಲೂರು ತಾಲ್ಲೂಕಿನ ಪೋತರಾಜು (50) ಮೃತಪಟ್ಟವರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗುರುವಾರ ಬೆಳಗಿನ ಜಾವ ಮಾಳ ಮಲ್ಲೇಶ್ವರಸ್ವಾಮಿ ಮತ್ತು ಮಾಳಮ್ಮ ದೇವಿಯ ಕಲ್ಯಾಣೋತ್ಸವದ ಬಳಿಕ ಉತ್ಸವಮೂರ್ತಿಗಳ ಮೆರವಣಿಗೆ ಆರಂಭವಾಯಿತು. ದೇವರ ಮೂರ್ತಿಗಳನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ವಿವಿಧ ಗ್ರಾಮಗಳ ಭಕ್ತರು ಪೈಪೋಟಿ ನಡೆಸಿದರು. ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ದೊಣ್ಣೆಗಳಿಂದ ಹೊಡೆದಾಟ ನಡೆದು ಹಲವರು ಗಾಯಗೊಂಡರು. ಕರಕು (ಪಂಜು) ತೂರುವ ವೇಳೆ ನೂಕುನುಗ್ಗಲೂ ಉಂಟಾಯಿತು ಎಂದು ತಿಳಿದುಬಂದಿದೆ.

15 ಗ್ರಾಮಗಳ ಭಕ್ತರ ಭಾಗಿ : ದೇವರಗಟ್ಟದಲ್ಲಿ ವಿಜಯದಶಮಿಯಂದು ನಡೆಯುವ ಬನ್ನಿ ಉತ್ಸವದಲ್ಲಿ ಸುತ್ತಮುತ್ತಲಿನ 15 ಗ್ರಾಮಗಳ ಭಕ್ತರು ಪಾಲ್ಗೊಳ್ಳುತ್ತಾರೆ. ಉತ್ಸವಮೂರ್ತಿಗಳನ್ನು ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ಗ್ರಾಮಸ್ಥರು ಪೈಪೋಟಿ ನಡೆಸುವುದು ಈ ಆಚರಣೆಯ ಭಾಗವಾಗಿದೆ. ಈ ಸಂದರ್ಭದಲ್ಲಿ ದೊಣ್ಣೆಗಳಿಂದ ಪರಸ್ಪರ ಹೊಡೆದಾಡಿಕೊಳ್ಳುತ್ತಾರೆ.

ನೇರಣಿಕೆ, ನೇರಣಿಕೆ ತಾಂಡಾ ಹಾಗೂ ಕೊತ್ತಪೇಟ ಗ್ರಾಮದವರು ಒಂದು ಗುಂಪಿನಲ್ಲಿದ್ದರೆ, ಅರಿಕೇರ, ಸುಳುವಾಯಿ, ಎಳ್ಳಾರ್ತಿ, ಬಿಳೇಹಾಳ್, ನಿಟ್ರವಟ್ಟಿ ಮತ್ತು ಆಲೂರು ಗ್ರಾಮದವರು ಮತ್ತೊಂದು ಗುಂಪಿನಲ್ಲಿರುತ್ತಾರೆ ಎಂದು ಸ್ಥಳೀಯ ನಿವಾಸಿ ರಘುರಾಮ ರೆಡ್ಡಿ ತಿಳಿಸಿದ್ದಾರೆ.

ಪ್ರತಿ ವರ್ಷ ನಡೆಯುವ ಈ ಉತ್ಸವದಲ್ಲಿ ಈ ಬಾರಿ ಕಾಳಗ ತೀವ್ರಗೊಂಡು ಸಾವು-ನೋವು ಸಂಭವಿಸಿರುವುದು ಆತಂಕ ಮೂಡಿಸಿದೆ. ಗಾಯಾಳುಗಳ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ನೆರಣಿಕೆ – ದೇವರಗುಡ್ಡ ಮಾಳ ಮಲ್ಲೇಶ್ವರ ‘ಕಾರ್ಣಿಕ’

ಮಲ್ಲಿಗೆ ಹೂನಿಂದ ಗಂಗೆಮಾಳ ನಿಂತಾಳ. 7900 ನಗಹಳ್ಳಿ, 3400 ಉಕ್ಕಳ ಜ್ವಾಳ 3 – 6, 6 ವರ್ಣಾದಿತು. ಹತ್ತಿಬೆಳೆ ಉತ್ತಮವಾಗಿ ಬರುತ್ತದೆ. ಮಳೆ ಸ್ಥಿರವಾಗಿದೆ. ನಗಳ್ಳಿ (ಹತ್ತಿ) ಗೆ ₹7900 ಜೋಳಕ್ಕೆ ₹3400 ಬೆಲೆ ಸಿಗುತ್ತದೆ. 3 – 6, 6 ವರ್ಣಾದೀತು ಎಂದರೆ ರಾಜಕೀಯವಾಗಿ ಕೆಳಗಿನವರು ಮೇಲೇರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

ಈ ಕಾರಣಿಕವನ್ನು ಅವಲಂಬಿಸಿ ಸುತ್ತಮುತ್ತಲಿನ ರೈತರು ತಮ್ಮ ಬೆಳೆಗಳಿಗೆ ಮಾರುಕಟ್ಟೆ ದರ ಕಂಡುಕೊಳ್ಳುತ್ತಾರೆ. ಈ ವರ್ಷ ಯಾವ ಬೆಳೆ ಉತ್ತಮವಾಗಿ ಬರುತ್ತದೆ ಎನ್ನುವುದನ್ನು ಲೆಕ್ಕಹಾಕಿ ಬೆಳೆಯುತ್ತಾರೆ. ದೇಶ ಮತ್ತು ರಾಜ್ಯದಲ್ಲಿ ಸಂಭವಿಸಬಹುದಾದ ಘಟನೆಗಳನ್ನು ಈ ಭವಿಷ್ಯವಾಣಿಯ ಮೂಲಕ ತಿಳಿದುಕೊಳ್ಳುತ್ತಾರೆ.