6ನೇ ತರಗತಿ ಕನ್ನಡ ‘ಕೃಷ್ಣ’ ಪಠ್ಯಪುಸ್ತಕದ ಶೀರ್ಷಿಕೆ ಮತ್ತು ಆಹಾರ ವಿಷಯಕ್ಕೆ ಸಂಬಂಧಿಸಿದ ವಿವಾದಕ್ಕೆ ಎನ್‌ಸಿಇಆರ್‌ಟಿ ಸ್ಪಷ್ಟನೆ ನೀಡಿದ್ದು, ಪುಸ್ತಕದ ಹೆಸರನ್ನು ಕೃಷ್ಣಾ ನದಿಯ ಆಧಾರದ ಮೇಲೆ ಇಡಲಾಗಿದೆ ಹಾಗೂ ಪಠ್ಯದಲ್ಲಿ ಸಸ್ಯಾಹಾರ ಅಥವಾ ಮಾಂಸಾಹಾರದ ಪರ-ವಿರೋಧ ಇಲ್ಲ ಎಂದು ತಿಳಿಸಿದೆ.
ನವದೆಹಲಿ: 6ನೇ ತರಗತಿಯ ಕನ್ನಡ R3 ಪಠ್ಯಪುಸ್ತಕ ‘ಕೃಷ್ಣ’ ಶೀರ್ಷಿಕೆ ಹಾಗೂ ಅದರಲ್ಲಿನ ಆಹಾರ ಸಂಬಂಧಿತ ವಿಷಯದ ಕುರಿತು ಮಾಧ್ಯಮಗಳಲ್ಲಿ ವ್ಯಕ್ತವಾಗಿರುವ ಕಳವಳಗಳಿಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಸ್ಪಷ್ಟನೆ ನೀಡಿದೆ. ಪಠ್ಯಪುಸ್ತಕದ ಶೀರ್ಷಿಕೆ ಮತ್ತು ವಿಷಯದ ಬಗ್ಗೆ ಹರಡುತ್ತಿರುವ ಗೊಂದಲಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಎನ್‌ಸಿಇಆರ್‌ಟಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಎನ್‌ಸಿಇಆರ್‌ಟಿ ಪ್ರಕಾರ, ತನ್ನ ಭಾಷಾ ಪಠ್ಯಪುಸ್ತಕಗಳಿಗೆ ಭಾರತದ ಪ್ರಮುಖ ನದಿಗಳ ಹೆಸರನ್ನು ಇಡುವ ಪರಂಪರೆಯನ್ನು ಅನುಸರಿಸಲಾಗುತ್ತಿದೆ. ಅದರಂತೆ, 6ನೇ ತರಗತಿಯ ಕನ್ನಡ ಪಠ್ಯಪುಸ್ತಕಕ್ಕೆ ಕರ್ನಾಟಕದ ಪ್ರಮುಖ ನದಿಗಳಲ್ಲೊಂದಾದ ಕೃಷ್ಣಾ ನದಿಯ ಹೆಸರನ್ನೇ ‘ಕೃಷ್ಣ’ ಎಂದು ನೀಡಲಾಗಿದೆ. ಇದೇ ರೀತಿಯಲ್ಲಿ ಹಿಂದಿ ಪಠ್ಯಪುಸ್ತಕಕ್ಕೆ ‘ಗಂಗಾ’, ಇಂಗ್ಲಿಷ್ ಪಠ್ಯಪುಸ್ತಕಕ್ಕೆ ‘ಕಾವೇರಿ’ ಹಾಗೂ ಉರ್ದು ಪಠ್ಯಪುಸ್ತಕಕ್ಕೆ ‘ಜಮುನಾ’ ಎಂದು ಹೆಸರಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.
ಇದನ್ನೂ ಓದಿ: ತುರ್ತು ಪರಿಸ್ಥಿತಿಯ ಅಧ್ಯಾಯ: ನಕಲಿ ಪ್ರತಿಗಳ ಬಗ್ಗೆ NCERT ಎಚ್ಚರಿಕೆ!
ರಾಷ್ಟ್ರೀಯ ಶಿಕ್ಷಣ ನೀತಿ-2020 (NEP 2020) ಹಾಗೂ ರಾಷ್ಟ್ರೀಯ ಪಠ್ಯಚೌಕಟ್ಟು (NCF-SE 2023)ಯಲ್ಲಿ ಸ್ಥಳೀಯ ಸಂಸ್ಕೃತಿ, ಬೇರುಗಳು ಮತ್ತು ಅರ್ಥಪೂರ್ಣ ಕಲಿಕೆಗೆ ಒತ್ತು ನೀಡಿರುವ ಹಿನ್ನೆಲೆಯಲ್ಲಿ ಈ ಹೆಸರಿಡುವ ಪದ್ಧತಿಯನ್ನು ಅನುಸರಿಸಲಾಗಿದೆ ಎಂದು ಎನ್‌ಸಿಇಆರ್‌ಟಿ ಹೇಳಿದೆ.
ಇದೇ ವೇಳೆ, ಪಠ್ಯಪುಸ್ತಕದಲ್ಲಿ ಸಸ್ಯಾಹಾರವನ್ನು ಮಾತ್ರ ಪ್ರೋತ್ಸಾಹಿಸಲಾಗಿದೆ ಎಂಬ ಆರೋಪಗಳಿಗೂ ಎನ್‌ಸಿಇಆರ್‌ಟಿ ಸ್ಪಷ್ಟನೆ ನೀಡಿದೆ. ‘ಆರೋಗ್ಯವೇ ಸಂಪತ್ತು’ ಎಂಬ ಅಧ್ಯಾಯದಲ್ಲಿ ಸಮತೋಲಿತ ಆಹಾರದ ಕುರಿತು ವಿವರಿಸಲಾಗಿದ್ದು, ಉತ್ತಮ ಆರೋಗ್ಯಕ್ಕಾಗಿ ಸಮತೋಲಿತ ಆಹಾರ, ವ್ಯಾಯಾಮ ಮತ್ತು ಶುಚಿತ್ವದ ಅಗತ್ಯವನ್ನು ತಿಳಿಸಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ವೆನೆಜುವೆಲಾ: ಭೂಕಂಪದ ಅಟ್ಟಹಾಸ – 7.5 ಕಂಪನಕ್ಕೆ ದೇಶವೇ ತಲ್ಲಣ!
ಪುಟ 63ರಲ್ಲಿ ‘ಸಮತೋಲಿತ ಆಹಾರ’ ಎಂಬ ಶೀರ್ಷಿಕೆಯಡಿ ಹಾಲು, ಹಣ್ಣು, ತರಕಾರಿಗಳು, ಹಸಿರು ಸೊಪ್ಪುಗಳು ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಉಲ್ಲೇಖಿಸಲಾಗಿದೆ. ಜೊತೆಗೆ, ಪಠ್ಯದಲ್ಲಿನ ಚಿತ್ರಗಳಲ್ಲಿ ಸಸ್ಯಾಹಾರ ಮತ್ತು ಮಾಂಸಾಹಾರ ಎರಡೂ ವಿಧದ ಆಹಾರ ಪದಾರ್ಥಗಳನ್ನು ಸೇರಿಸಲಾಗಿದೆ ಎಂದು ಎನ್‌ಸಿಇಆರ್‌ಟಿ ಸ್ಪಷ್ಟಪಡಿಸಿದೆ.
ಪಠ್ಯಪುಸ್ತಕದಲ್ಲಿ ಎಲ್ಲಿಯೂ ಸಸ್ಯಾಹಾರವನ್ನು ಸಮರ್ಥಿಸಲಾಗಿಲ್ಲ ಅಥವಾ ಮಾಂಸಾಹಾರಿ ಆಹಾರವನ್ನು ವಿರೋಧಿಸಲಾಗಿಲ್ಲ ಎಂದು ಹೇಳಿರುವ ಮಂಡಳಿ, ಆರೋಗ್ಯಕರ ಆಹಾರ ಪದ್ಧತಿ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದೇ ಅಧ್ಯಾಯದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: Digital Arrest : 16 ರಾಜ್ಯಗಳ 80 ಕಡೆ CBI ‘ಆಪರೇಷನ್ ಚಕ್ರ’ ದಾಳಿ!
ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಬೋಧನಾ-ಕಲಿಕಾ ಸಾಮಗ್ರಿಗಳನ್ನು ಒದಗಿಸಲು ಎನ್‌ಸಿಇಆರ್‌ಟಿ ಬದ್ಧವಾಗಿದ್ದು, ಪಠ್ಯಪುಸ್ತಕಗಳ ಸುಧಾರಣೆಗೆ ರಚನಾತ್ಮಕ ಸಲಹೆಗಳನ್ನು ಸ್ವಾಗತಿಸುವುದಾಗಿ ತಿಳಿಸಿದೆ.



















