ಬಾಗಲಕೋಟೆ: ಮನೆ ಮುಂದೆ ಆಟವಾಡುತ್ತ ನೀರಿನ ಸಂಪ್‌ನಲ್ಲಿ ಬಿದ್ದು ಮೃತಪಟ್ಟ ಬಾಲಕಿ ಮರಳಿ ಜೀವ ಪಡೆಯಬಹುದು ಎಂದು ಕುಟುಂಬಸ್ಥರು ಎರಡು ಗಂಟೆಗಳ ಕಾಲ ಉಪ್ಪಿನಲ್ಲಿರಿಸಿ, ಕುರಾನ್ ಪಠಿಸಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ನವನಗರದ 38ನೇ ಸೆಕ್ಟರ್‌ನ ಶಗುಫ್ತಾ ತೌಸಿಫ್ ಪಠಾಣ್ ದಂಪತಿಯ ಮಗಳು ಅಮಿನಾ ಮನೆ ಮುಂದೆ ಆಟವಾಡುತ್ತಿದ್ದಳು. ನೀರು ಬಂದಿದ್ದರಿಂದ ನೆಲಮಟ್ಟದ ಸಂಪ್‌ನ ಮುಚ್ಚಳವನ್ನು ತೆರೆದಿಡಲಾಗಿತ್ತು. ಈ ವೇಳೆ ಎದುರು ಮನೆಯ ಸಂಪ್‌ನಲ್ಲಿ ಬಿದ್ದು ಬಾಲಕಿ ಮೃತಪಟ್ಟಿದ್ದಾಳೆ. ಆಕೆ ನಾಪತ್ತೆಯಾಗಿರುವುದನ್ನು ಗಮನಿಸಿ ವಿಷಯವನ್ನು ಪೊಲೀಸರಿಗೆ ತಿಳಿಸಲಾಗಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂಶಯಪಟ್ಟು ಎಲ್ಲರ ಸಂಪ್‌ಗಳಿಂದ ನೀರು ಹೊರಹಾಕಲು ಸೂಚಿಸಿದ್ದಾರೆ. ಆಗ ಬಾಲಕಿ ಎದುರು ಮನೆಯ ಸಂಪ್‌ನಲ್ಲಿ ಮೃತಪಟ್ಟಿರುವುದು ಖಾತರಿಯಾಗಿದೆ. ನಂತರ ಬಾಲಕಿಯ ಮೃತದೇಹವನ್ನು ನವನಗರ ಜಿಲ್ಲಾಸ್ಪತ್ರೆಗೆ ತಂದಾಗ ವೈದ್ಯರು ಬಾಲಕಿ ಮೃತಪಟ್ಟಿರುವುದನ್ನು ಖಚಿತಪಡಿಸಿ ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಿದ್ದಾರೆ.
ಈ ವೇಳೆ ಕುಟುಂಬಸ್ಥರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಉಪ್ಪಿನಲ್ಲಿ ಹೆಣವಿರಿಸಿ ಬದುಕುಳಿಸಿದ ವಿಡಿಯೋವೊಂದರ ಪ್ರಯೋಗಕ್ಕೆ ಮನವಿ ಮಾಡಿಕೊಂಡು ಎರಡು ಗಂಟೆಗಳ ಕಾಲ ಉಪ್ಪಿನಲ್ಲಿ ಇರಿಸಿದ್ದಾರೆ. ಮೊಬೈಲ್‌ನಲ್ಲಿ ಕುರಾನ್ ಪಠಿಸಿದ್ದಾರೆ. ಬಾಲಕಿ ಜೀವ ಬಾರದಿದ್ದಾಗ ಶವಪರೀಕ್ಷೆಗೆ ನೀಡಲಾಗಿದೆ.
ಅವಳಿ ಮಕ್ಕಳು: ಶಗುಫ್ತಾ ಮತ್ತು ತೌಸಿಫ್‌ಗೆ ಮದುವೆಯಾಗಿ ಆರೇಳು ವರ್ಷಗಳ ನಂತರ ಅವಳಿ ಮಕ್ಕಳಾಗಿದ್ದವು. ಎರಡು ಮುದ್ದಾದ ಮಕ್ಕಳ ಜತೆಗೆ ದಂಪತಿ ಸುಖವಾಗಿದ್ದರು. ಎರಡೂ ಮಕ್ಕಳು ಅತ್ಯಂತ ಮುದ್ದಾಗಿದ್ದು, ಅಮಿನಾ ಹಾಗೂ ಮೆಹಬೂಬ್ ಎಂದು ಹೆಸರಿಡಲಾಗಿತ್ತು. ಸೋಮವಾರ ಮಧ್ಯಾಹ್ನ ನೀರು ಬಂದಿದ್ದರಿಂದ ಎಲ್ಲರ ಮನೆಯ ಸಂಪ್‌ಗಳ ಮುಚ್ಚಳಿಕೆ ತೆರೆದಿಡಲಾಗಿತ್ತು. ಮನೆ ಮುಂದೆ ಅಮಿನಾಳಿಗೆ ಆಟವಾಡಲು ಬಿಟ್ಟು ಮೆಹಬೂಬನಿಗೆ ಸ್ನಾನ ಮಾಡಿಸಲು ತಾಯಿ ಮನೆಯೊಳಗೆ ಬಂದಿದ್ದಳು. ಆಚೆ ಬಂದಾಗ ಅಮಿನಾ ಕಾಣದಿರುವುದನ್ನು ಕಂಡು ಹುಡುಕಲು ಆರಂಭಿಸಿದ್ದು, ನೆರೆಹೊರೆಯವರು ನೆರವಾಗಿದ್ದಾರೆ. ಎಲ್ಲೂ ಆಕೆ ಕಾಣದಿದ್ದಾಗ ಪೊಲೀಸರಿಗೆ ತಿಳಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂಪ್‌ಗಳಲ್ಲಿನ ನೀರು ಖಾಲಿ ಮಾಡಲು ಹೇಳಿದ್ದಾರೆ. ಈ ವೇಳೆ ಎದುರು ಮನೆಯ ಸಂಪ್‌ನಲ್ಲಿ ಆಕೆ ಶವವಾಗಿರುವುದು ಕಂಡು ಬಂದಿದೆ ಎಂದು ತಿಳಿದು ಬಂದಿದೆ.






















