ಬಾಗಲಕೋಟೆ: ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಯ ಅಂಗಾಂಗ ದಾನ – ಕುಟುಂಬದ ಮಾನವೀಯ ನಿರ್ಧಾರಕ್ಕೆ ಸಾರ್ವಜನಿಕರ ಮೆಚ್ಚುಗೆ
ಬಾಗಲಕೋಟೆ: ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ಸಮ್ಮತಿ ಸೂಚಿಸುವ ಮೂಲಕ ಮಾನವೀಯತೆ ಮೆರೆದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಕುಟುಂಬದ ಈ ನಿರ್ಧಾರದಿಂದ ಹಲವು ರೋಗಿಗಳಿಗೆ ಹೊಸ ಬದುಕಿನ ಆಶಾಕಿರಣ ಮೂಡಿದ್ದು, ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಮುದೋಳ ತಾಲ್ಲೂಕಿನ ಜುನ್ನೂರ ಗ್ರಾಮದ 58 ವರ್ಷದ ವ್ಯಕ್ತಿ ಅಪಘಾತದಲ್ಲಿ ತಲೆಗೆ ತೀವ್ರ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದರು. ಅವರನ್ನು ಚಿಕಿತ್ಸೆಗಾಗಿ ಬಾಗಲಕೋಟೆಯ ಹಾನಗಲ್ಲ ಶ್ರೀ ಕುಮಾರೇಶ್ವರ (HSK) ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದನ್ನೂ ಓದಿ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ
ಮೆದುಳು ನಿಷ್ಕ್ರೀಯಗೊಂಡಿರುವುದು ದೃಢ : ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ರೋಗಿಗೆ ತುರ್ತು ಚಿಕಿತ್ಸೆ ನೀಡಿದ್ದು, ವೆಂಟಿಲೇಟರ್‌ನಲ್ಲಿ ಇರಿಸಿ ಜೀವ ಉಳಿಸುವ ಪ್ರಯತ್ನ ನಡೆಸಿದರು. ಆದರೆ ವೈದ್ಯಕೀಯ ಪರೀಕ್ಷೆಗಳ ಬಳಿಕ ರೋಗಿಯ ಮೆದುಳು ನಿಷ್ಕ್ರೀಯಗೊಂಡಿರುವುದನ್ನು (Brain Death) ವೈದ್ಯರು ದೃಢಪಡಿಸಿದರು. ಈ ವೇಳೆ ವೈದ್ಯರು ಕುಟುಂಬದವರಿಗೆ ಅಂಗಾಂಗ ದಾನದ ಮಹತ್ವವನ್ನು ವಿವರಿಸಿ, ದಾನಕ್ಕೆ ಮುಂದಾಗುವಂತೆ ಮನವಿ ಮಾಡಿದರು.
ಕುಟುಂಬದ ತಕ್ಷಣದ ಒಪ್ಪಿಗೆ : ವೈದ್ಯರ ಮನವಿಗೆ ಸ್ಪಂದಿಸಿದ ಕುಟುಂಬಸ್ಥರು ಯಾವುದೇ ಹಿಂಜರಿಕೆ ತೋರದೆ ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದರು. ಅವರ ಈ ನಿರ್ಧಾರದಿಂದ ಹಲವು ಜೀವಗಳಿಗೆ ನೆರವಾಗುವ ಅವಕಾಶ ಸೃಷ್ಟಿಯಾಯಿತು. ಅಂಗಾಂಗ ದಾನದ ಪ್ರಕ್ರಿಯೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ರೋಗಿಯನ್ನು ತಕ್ಷಣವೇ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ಸ್ಥಳಾಂತರಿಸುವ ಅಗತ್ಯವಿತ್ತು.
ಇದನ್ನೂ ಓದಿ: 20 ದಿನಗಳ ಉಪವಾಸ: ಸೋನಮ್ ವಾಂಗ್ಚುಕ್ ಆಸ್ಪತ್ರೆಗೆ ದಾಖಲು
ಜೀರೋ ಟ್ರಾಫಿಕ್ ವ್ಯವಸ್ಥೆ : ರೋಗಿಯ ತ್ವರಿತ ಸ್ಥಳಾಂತರಕ್ಕಾಗಿ ಎಚ್‌ಎಸ್‌ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಾಜೆಕ್ಟ್ ಡೈರೆಕ್ಟರ್ ಹಾಗೂ ಮಧುಮೇಹ ತಜ್ಞ ಡಾ. ನವೀನ್ ವಿ. ಚರಂತಿಮಠ ಅವರು ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆಯ ನೆರವು ಕೋರಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೊಯಲ್ ಅವರು ಆಂಬುಲೆನ್ಸ್‌ಗೆ ಯಾವುದೇ ತೊಂದರೆಯಾಗದಂತೆ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿ, ಅಂಗಾಂಗಗಳನ್ನು ಸಮಯಕ್ಕೆ ಸರಿಯಾಗಿ ಸಾಗಿಸಲು ಸಹಕರಿಸಿದರು.
ಆಸ್ಪತ್ರೆ ಮತ್ತು ಪೊಲೀಸರಿಗೆ ಅಭಿನಂದನೆ : ಈ ಮಾನವೀಯ ಕಾರ್ಯಕ್ಕೆ ಕೈಜೋಡಿಸಿದ ಕುಟುಂಬದ ಸದಸ್ಯರು, ವೈದ್ಯರು ಹಾಗೂ ಪೊಲೀಸ್ ಇಲಾಖೆಯ ಕಾರ್ಯವನ್ನು ವಿವಿಧ ಗಣ್ಯರು ಶ್ಲಾಘಿಸಿದ್ದಾರೆ. ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ್ ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ. ಸಜ್ಜನ (ಬೇವೂರ), ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಡಾ. ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ. ಶ್ರೀರಾಮ ಕೋರಾ, ಉಪಪ್ರಾಚಾರ್ಯ ಡಾ. ಸಿ.ಎಸ್. ಹಿರೇಮಠ ಹಾಗೂ ಡಾ. ನವೀನ್ ಚರಂತಿಮಠ ಅವರು ಕುಟುಂಬದ ನಿರ್ಧಾರವನ್ನು ಶ್ಲಾಘಿಸಿ ಅಭಿನಂದಿಸಿದ್ದಾರೆ.
ಇದನ್ನೂ ಓದಿ: ವಾಂಗ್ಚುಕ್ ಬಳಿಕ ಅಭಿಜೀತ್ ದೀಪ್ಕೆ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ
ಅಂಗಾಂಗ ದಾನದ ಮಹತ್ವ : ಅಂಗಾಂಗ ದಾನವು ಒಬ್ಬ ವ್ಯಕ್ತಿಯ ಜೀವನದ ಅಂತಿಮ ಘಟ್ಟದಲ್ಲೂ ಅನೇಕ ಮಂದಿಗೆ ಹೊಸ ಜೀವನ ನೀಡುವ ಅತ್ಯುನ್ನತ ಮಾನವೀಯ ಸೇವೆಯಾಗಿದೆ. ತಜ್ಞರ ಪ್ರಕಾರ, ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಯ ಅಂಗಾಂಗಗಳನ್ನು ಸಮಯಕ್ಕೆ ಸರಿಯಾಗಿ ದಾನ ಮಾಡಿದರೆ ಅನೇಕ ರೋಗಿಗಳ ಜೀವ ಉಳಿಸಲು ಸಾಧ್ಯವಾಗುತ್ತದೆ.
ಈ ಘಟನೆ ಸಮಾಜದಲ್ಲಿ ಅಂಗಾಂಗ ದಾನದ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಜೊತೆಗೆ, ಮಾನವೀಯ ಮೌಲ್ಯಗಳಿಗೆ ಉತ್ತಮ ಉದಾಹರಣೆಯಾಗಿದೆ.





















