ಬಾಗಲಕೋಟೆ: ಜೂನ್ 29ರಂದು ತೇರದಾಳದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬಿಜೆಪಿ ನಗರ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಶಾಸಕ ಸಿದ್ದು ಸವದಿ ಅವರು ಮಾತನಾಡುವಾಗ “ಧೋಬಿ ಕಾ ಕುತ್ತಾ, ನ ಘರ್ ಕಾ ನ ಘಾಟ್ ಕಾ” ಎಂಬ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಯನ್ನು ಮಡಿವಾಳ (ಧೋಬಿ) ಸಮುದಾಯಕ್ಕೆ ಅವಮಾನ ಮಾಡುವ ರೀತಿಯಲ್ಲಿದೆಯೆಂದು ಆರೋಪಿಸಿರುವ ಸಮಾಜದ ಮುಖಂಡರು ಮತ್ತು ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಶಾಸಕರು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದರು.
ಬಿಜೆಪಿಯಲ್ಲಿದ್ದುಕೊಂಡು ಕಾಂಗ್ರೆಸ್ ಪರ ಅನಧಿಕೃತ ಚಟುವಟಿಕೆ ಹಾಗೂ ಆಗಾಗ್ಗೆ ಪಕ್ಷಾಂತರಗೊಳ್ಳುವವರ ವಿರುದ್ಧ ಮಾತನಾಡುವಾಗ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಹಲವು ಕಡೆಗಳಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಮಡಿವಾಳ ಸಮಾಜದ ಮುಖಂಡರು, ಶತಮಾನಗಳಿಂದ ಸಮಾಜದ ಸ್ವಚ್ಛತೆ ಮತ್ತು ಸೇವೆಯಲ್ಲಿ ತೊಡಗಿರುವ ಸಮುದಾಯದ ಹೆಸರನ್ನು ರಾಜಕೀಯ ಟೀಕೆ ಅಥವಾ ವ್ಯಂಗ್ಯಕ್ಕೆ ಬಳಸುವುದು ಸಮಂಜಸವಲ್ಲ ಎಂದು ಸಮಾಜದ ಹಿರಿಯರು ಅಭಿಪ್ರಾಯಪಟ್ಟಿದ್ದಾರೆ.
ಮಡಿವಾಳ ಸಮಾಜದ ಆಕ್ರೋಶ: ಮಡಿವಾಳ ಸಮಾಜದ ಮುಖಂಡರ ಪ್ರಕಾರ, “ಧೋಬಿ ಕಾ ಕುತ್ತಾ” ಎಂಬ ಗಾದೆಯನ್ನು ರಾಜಕೀಯ ಭಾಷಣದಲ್ಲಿ ಬಳಸಿರುವುದು ಸಮಾಜದ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಜನಪ್ರತಿನಿಧಿಗಳು ತಮ್ಮ ಭಾಷಣದಲ್ಲಿ ಎಲ್ಲ ಸಮುದಾಯಗಳ ಗೌರವವನ್ನು ಕಾಪಾಡುವ ಹೊಣೆಗಾರಿಕೆಯನ್ನು ಹೊಂದಿರಬೇಕು. ಯಾವುದೇ ಸಮುದಾಯದ ಹೆಸರನ್ನು ನಕಾರಾತ್ಮಕ ಉದಾಹರಣೆಯಾಗಿ ಬಳಸುವುದನ್ನು ತಪ್ಪಿಸಬೇಕೆಂದು ಅವರು ಆಗ್ರಹಿಸಿದ್ದರು. ಇದಲ್ಲದೆ, ಬುಧವಾರ ಸಮಾಜದ ಸದಸ್ಯರು ಈ ವಿಚಾರವಾಗಿ ಶಾಸಕರಿಂದ ಸ್ಪಷ್ಟನೆ ಹಾಗೂ ಸಾರ್ವಜನಿಕ ಕ್ಷಮೆಯಾಚನೆಗೆ ಒತ್ತಾಯಿಸಿದರು.
ಶಾಸಕ ಸಿದ್ದು ಸವದಿ ಸ್ಪಷ್ಟನೆ: ವಿವಾದದ ಕುರಿತು ಪ್ರತಿಕ್ರಿಯಿಸಿದ ಶಾಸಕ ಸಿದ್ದು ಸವದಿ, “ನನ್ನ ಹೇಳಿಕೆಯ ಉದ್ದೇಶ ಯಾವುದೇ ಸಮಾಜವನ್ನು ಅವಮಾನಿಸುವುದಾಗಿರಲಿಲ್ಲ. ನಾನು ಸಾಮಾನ್ಯವಾಗಿ ಬಳಕೆಯಲ್ಲಿರುವ ಗಾದೆಯನ್ನು ರಾಜಕೀಯ ಸಂದರ್ಭದಲ್ಲಷ್ಟೇ ಬಳಸಿದ್ದೆ. ಆದರೂ ನನ್ನ ಮಾತಿನಿಂದ ಮಡಿವಾಳ ಸಮಾಜದ ಯಾರಿಗಾದರೂ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಹಾಗೂ ಹೃತ್ಪೂರ್ವಕವಾಗಿ ಕ್ಷಮೆಯಾಚಿಸುತ್ತೇನೆ” ಎಂದು ತಿಳಿಸಿದ್ದಾರೆ.
ರಾಜಕೀಯ ವಲಯದಲ್ಲಿ ಚರ್ಚೆ: ಈ ಬೆಳವಣಿಗೆ ಸ್ಥಳೀಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಜನಪ್ರತಿನಿಧಿಗಳು ಸಾರ್ವಜನಿಕ ಭಾಷಣಗಳಲ್ಲಿ ಬಳಸುವ ಪದಗಳ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕೆಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ವಿವಾದದ ನಂತರ ಶಾಸಕ ಸವದಿ ನೀಡಿರುವ ಕ್ಷಮೆಯಾಚನೆ ಪರಿಸ್ಥಿತಿಯನ್ನು ತಣ್ಣಗಾಗಿಸುವ ಪ್ರಯತ್ನವೆಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ.





















