ಗದಗ: ವೈದ್ಯಕೀಯ ವಿಜ್ಞಾನವು ಕ್ಷಿಪ್ರವಾಗಿ ಬೆಳೆಯುತ್ತಿರುವ ಈ ಕಾಲಘಟ್ಟದಲ್ಲಿ ಆಯುರ್ವೇದ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ಆಯುರ್ವೇದ ಶಿಕ್ಷಣವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸುವುದು ಇಂದಿನ ಅಗತ್ಯ ಎಂದು ರಾಜ್ಯಪಾಲ ಥಾವರ್‌ಚಂದ ಗೆಹ್ಲೋಟ್ ಪ್ರತಿಪಾದಿಸಿದರು.
ಗಜೇಂದ್ರಗಡದ ಟಿ.ಟಿ.ಡಿ. ಕಲ್ಯಾಣ ಮಂಟಪದ ಆವರಣದಲ್ಲಿ ಗುರುವಾರ ಭಗವಾನ್ ಮಹಾವೀರ್ ಜೈನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಘಟಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ಪ್ರಾಚೀನ ವೈದ್ಯಪದ್ಧತಿಯಾಗಿರುವ ಆಯುರ್ವೇದವು ಕೇವಲ ರೋಗಗಳನ್ನು ಗುಣಪಡಿಸುವ ವೈದ್ಯಕೀಯ ಪದ್ಧತಿಯಲ್ಲ; ಆರೋಗ್ಯಕರ ಜೀವನಶೈಲಿಯನ್ನು ರೂಪಿಸುವ ವೈಜ್ಞಾನಿಕ ಜೀವನದರ್ಶನ. ಪ್ರಾಚೀನ ಜ್ಞಾನವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಮೂಲಕ ಆಯುರ್ವೇದವನ್ನು ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಪರಿಚಯಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕವು ಆಯುರ್ವೇದ, ಯೋಗ ಹಾಗೂ ಪ್ರಾಕೃತಿಕ ಚಿಕಿತ್ಸೆ ಕ್ಷೇತ್ರದಲ್ಲಿ ದೇಶದಲ್ಲೇ ವಿಶಿಷ್ಟ ಸ್ಥಾನವನ್ನು ಹೊಂದಿದೆ. ರಾಜ್ಯದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಯುವಜನತೆಗೆ ಉತ್ತಮ ಭವಿಷ್ಯ ನಿರ್ಮಿಸುತ್ತಿವೆ. ಭಾರತೀಯ ಸಂಸ್ಕೃತಿಯಲ್ಲಿ ವೈದ್ಯರನ್ನು ದೇವರ ಸ್ವರೂಪವೆಂದು ಪರಿಗಣಿಸಲಾಗಿದೆ. ಮಹರ್ಷಿ ಚರಕರು ವೈದ್ಯರ ಜೀವನದ ಉದ್ದೇಶ ಸೇವೆಯಾಗಿರಬೇಕೆಂದು ಬೋಧಿಸಿದ್ದಾರೆ. ಆಯುರ್ವೇದ ವೈದ್ಯರು ಈ ಮೌಲ್ಯಗಳನ್ನು ತಮ್ಮ ಜೀವನ ಹಾಗೂ ವೃತ್ತಿಯಲ್ಲಿ ಅಳವಡಿಸಿಕೊಂಡು ಸೇವಾಭಾವದಿಂದ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಶೋಕಕುಮಾರ ಬಾಗಮಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಜಿತಕುಮಾರ ಬಾಗಮಾರ, ಕಾಲೇಜಿನ ಪ್ರಾಚಾರ್ಯ ಡಾ. ನಾರಾಯಣರಾವ್ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.






















