BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ಇತ್ತೀಚೆಗೆ ನಡೆದ ಬಣ್ಣ ಬಳಿಯುವ ಟಾಸ್ಕ್ ವೇಳೆ ಸ್ಪರ್ಧಿ ಗಾನವಿ ಕುತ್ತಿಗೆಯ ಮೇಲೆ ಪ್ರಶಾಂತ್ ಮೊಣಕಾಲು ಊರಿದ್ದಾರೆ ಎನ್ನಲಾದ ವಿವಾದ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಟಾಸ್ಕ್ ವೇಳೆ ಗಾನವಿ ಪ್ರಜ್ಞೆ ತಪ್ಪಿದಂತೆ ನಟಿಸಿದ್ದು ಮತ್ತು ತಮಗೆ ತೀವ್ರ ನೋವಾಗಿದೆ ಎಂದು ಅತ್ತಿದ್ದು ದೊಡ್ಡ ರಂಪಾಟವನ್ನೇ ಸೃಷ್ಟಿಸಿತ್ತು. ಶನಿವಾರದ ವೀಕೆಂಡ್ ಸಂಚಿಕೆಯಲ್ಲಿ ಈ ಗಂಭೀರ ವಿಚಾರವನ್ನು ಕೈಗೆತ್ತಿಕೊಂಡ ನಿರೂಪಕ ಕಿಚ್ಚ ಸುದೀಪ್, ವಿಡಿಯೋ ತುಣುಕುಗಳನ್ನು ಸ್ಲೋ ಮೋಷನ್ನಲ್ಲಿ ಪರಿಶೀಲಿಸಿ ಅಸಲಿ ಸತ್ಯವನ್ನು ಹೊರಹಾಕಿದ್ದಾರೆ.
ಪ್ರಾರಂಭದಲ್ಲಿ ಪ್ರಶಾಂತ್ ಬೇಕೆಂದೇ ಕುತ್ತಿಗೆ ಮೇಲೆ ಕಾಲಿಟ್ಟಿದ್ದಾರೆ ಎಂದು ಕೆಲವರು ಆರೋಪಿಸಿದರೂ, ಸಂಪೂರ್ಣ ವಿಡಿಯೋ ಪರಿಶೀಲಿಸಿದಾಗ ಅಸಲಿ ಸಂಗತಿ ಬಯಲಾಯಿತು. ಟಾಸ್ಕ್ ವೇಳೆ ಗಾನವಿ ಸ್ವತಃ ಪ್ರಶಾಂತ್ ಅವರ ಕಾಲು ಹಿಡಿದು ಎಳೆದಿದ್ದರಿಂದಲೇ ಪ್ರಶಾಂತ್ ಮುಂದೆ ಬಿದ್ದಿರುವುದು ಸ್ಪಷ್ಟವಾಯಿತು. ಬಿದ್ದ ಮೇಲೂ ಗಾನವಿ ಕಾಲು ಬಿಡದ ಕಾರಣ ಪ್ರಶಾಂತ್ಗೆ ಕೂಡಲೇ ಏಳಲು ಸಾಧ್ಯವಾಗಿರಲಿಲ್ಲ ಎಂಬುದನ್ನು ಸುದೀಪ್ ವಿವರಿಸಿದರು. ಅಲ್ಲದೆ, ಪ್ರಶಾಂತ್ ಉದ್ದೇಶಪೂರ್ವಕವಾಗಿ ಆ ಕೃತ್ಯ ಎಸಗಿಲ್ಲ ಎಂದು ಸ್ಪಷ್ಟಪಡಿಸಿ, ಕೊನೆಗೆ ಪ್ರಶಾಂತ್ ಅವರಿಂದ ಗಾನವಿ ಕ್ಷಮೆ ಕೂಡ ಯಾಚಿಸುವಂತೆ ಮಾಡಿದರು.
ಇನ್ನು ಇದೇ ಸಂದರ್ಭದಲ್ಲಿ ಟಾಸ್ಕ್ ವೇಳೆ ಸ್ಪರ್ಧಿಗಳು ಅತಿಯಾದ ಆಕ್ರಮಣಕಾರಿ ಧೋರಣೆ ತೋರುವುದು ಹಾಗೂ ಗಾನವಿ ನಟನೆಯ ಬಗ್ಗೆಯೂ ವೀಕ್ಷಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಒಟ್ಟಿನಲ್ಲಿ ಸುದೀಪ್ ಅವರ ಈ ಸ್ಪಷ್ಟನೆಯಿಂದ ಪ್ರಶಾಂತ್ ಮೇಲಿದ್ದ ಗಂಭೀರ ಆರೋಪ ಕಳಚಿಬಿದ್ದಿದ್ದು, ಸುದೀಪ್ ಅವರ ನಿಷ್ಪಕ್ಷಪಾತ ವಿಚಾರಣೆ ವಿವಾದಕ್ಕೆ ಸಂಪೂರ್ಣ ತೆರೆ ಎಳೆದಿದೆ.






















