ಬೆಂಗಳೂರು: ಮಹಿಳಾ ಸಚಿವರ ಆಯ್ಕೆಯ ವಿಚಾರವನ್ನು ದೆಹಲಿಯ ನಮ್ಮ ಹೈಕಮಾಂಡ್ ಅವರ ಗಮನಕ್ಕೆ ತಂದಿದ್ದೇನೆ. ಈ ಪ್ರಕ್ರಿಯೆ ನಾಳೆ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ವಿಚಾರವಾಗಿ ಚರ್ಚಿಸಲು ನನ್ನನ್ನು ದೆಹಲಿಗೆ ಆಹ್ವಾನಿಸುತ್ತೇನೆ ಎಂದಿದ್ದಾರೆ. ಇದು ಆಗಬೇಕಾದ ಕೆಲಸ. ಖಂಡಿತ ಮಾಡುತ್ತೇವೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮೇಕೆದಾಟು ಯೋಜನೆ ಕುರಿತು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಮಾಡಿದ್ದೇನೆ. ತಮಿಳುನಾಡು ಸರ್ಕಾರಕ್ಕೆ ಸತ್ಯದ ಅರಿವಾಗಿದೆ. ಆದರೂ ಅವರು ವಿರೋಧಿಸುತ್ತಿದ್ದಾರೆ. ಅದು ಅವರ ಹಕ್ಕು. ಅವರ ದನಿಯನ್ನು ತಡೆಯಲು ಸಾಧ್ಯವಿಲ್ಲ. ಅವರ ಬಳಿಯೂ ಕಾನೂನು ತಜ್ಞರ ತಂಡವಿದೆ. ಮೇಕೆದಾಟು ವಿಚಾರವಾಗಿ ನಾವು ನಮ್ಮ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ಪ್ರಧಾನಿಗಳೊಂದಿಗಿನ ಒಡನಾಟದ ಕುರಿತು ನಾನು ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಧಾನ ಮಂತ್ರಿ ಸ್ಥಾನಕ್ಕೆ ಎಷ್ಟು ಗೌರವ ಕೊಡಬೇಕೋ ಅದನ್ನು ಕೊಡಬೇಕು. ಅವರು ಒಂದು ರಾಜ್ಯದ ಮುಖ್ಯಮಂತ್ರಿಗೆ ಎಷ್ಟು ಗೌರವ ಕೊಡಬೇಕೋ ಅದನ್ನು ಕೊಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ನಾವು ಸ್ಪರ್ಧೆ ಮಾಡೋಣ. ಆದರೆ, ಈಗ ಒಟ್ಟಾಗಿ ಜನರ ಅಭಿವೃದ್ಧಿ ಕೆಲಸ ಮಾಡೋಣ ಅಂತ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಉಪಚನಾವಣೆಗೆ ಸಿದ್ದ; ಹಿರಿಯೂರಲ್ಲಿ ಪ್ರಜಾಸೇವೆ: ಹಿರಿಯೂರು ಉಪಚುನಾವಣೆಗೆ ನಾವೆಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಚುನಾವಣೆ ಯಾವಾಗ ಘೋಷಣೆ ಆಗುತ್ತದೆ ಎನ್ನುವುದು ತಿಳಿದಿಲ್ಲ. ಈ ಶನಿವಾರ ಹಿರಿಯೂರಿನಲ್ಲಿ ನಾನೇ ಖುದ್ದು ಪ್ರಜಾಸೇವೆ ಕಾರ್ಯಕ್ರಮ ಮಾಡಿ, ಜನರ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದರು.
ಆಸ್ತಿಗಳ ಮಾರ್ಗಸೂಚಿ ದರ ಏರಿಕೆ ಬಗ್ಗೆ ಮಾಹಿತಿ ಇಲ್ಲ: ಆಸ್ತಿಗಳ ಮಾರ್ಗಸೂಚಿ ದರ ಏರಿಕೆಯ ಕುರಿತು ಈ ತನಕ ನನ್ನ ಗಮನಕ್ಕೆ ಯಾವುದೇ ಮಾಹಿತಿ ಬಂದಿಲ್ಲ. ಬಹುಶಃ ಇಲಾಖೆ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿರಬಹುದು. ಆ ವಿಚಾರ ನನ್ನ ಬಳಿ ಬಂದಾಗ ನೋಡೋಣ ಎಂದು ಹೇಳಿದರು.
ನಾಳೆ ದೆಹಲಿಗೆ ಪಯಣ: ಹೊಸಮನೆ ಪೂರ್ಣವಾಗಿಲ್ಲ. ದಿನ ಚೆನ್ನಾಗಿದೆ ಎನ್ನುವ ಒಂದೇ ಕಾರಣಕ್ಕೆ ನಾಳೆ ಮನೆ ಮಟ್ಟಿಗೆ ಪೂಜೆ ಮಾಡುತ್ತಿದ್ದೇವೆ. ಯಾರನ್ನೂ ಕರೆಯುತ್ತಿಲ್ಲ. ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಇರುವುದರಿಂದ ಮಧ್ಯಾಹ್ನ 12 ಗಂಟೆಗೆ ದೆಹಲಿಗೆ ಹೋಗುತ್ತಿದ್ದೇನೆ ಎಂದರು.



















