SK Home Ad
Home ಅಂಕಣ ಅಂಕಣ ಬರಹ | ಬರದ ಬರೆಯ ನಡುವೆ `ಬರ ರಾಜಕೀಯ’

ಅಂಕಣ ಬರಹ | ಬರದ ಬರೆಯ ನಡುವೆ `ಬರ ರಾಜಕೀಯ’

0
2

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ರಾಜ್ಯದಲ್ಲೀಗ ಅನಾವೃಷ್ಟಿ. ಸೋನೆ ಮಳೆಯೂ ಕಾಣೆಯಾಗಿದೆ… ಮುಂಗಾರೂ ವಿಫಲವಾಗಿದೆ. ಹಿಂಗಾರಿನ ಭರವಸೆ ಉಳಿದಿಲ್ಲ. `ಸ್ವಾತಿ ಮುತ್ತಿನ ಮಳೆ ಹನಿಯೇ..’ ಎಂದು ಈಗ ಸಿನೆಮಾದಲ್ಲಷ್ಟೇ ಹಾಡು ಕೇಳುವ ಕಾಲ. ಜೆನ್ ಝೀ ಗಳಿಗೆ ಮಳೆಗಾಲದ ಪ್ರಖರತೆ, ಬರದ ಕರಾಳ ಛಾಯೆ, ಇವ್ಯಾವುಗಳ ಕಲ್ಪನೆ ಇಲ್ಲದೇ ತುಂತುರು ಮಳೆಯಲ್ಲಿ ರೀಲ್ಸ್ ಕುಣಿತ ನಡೆಸುತ್ತಿದ್ದಾರೆ.

ಇತ್ತ, ಹಳ್ಳಿಗಳಲ್ಲಿ ಕುಡಿಯಲು ನೀರಿಲ್ಲದ, ಉಣ್ಣಲು ಕೂಳಿಲ್ಲದ ದಯನೀಯ ಸ್ಥಿತಿ. ಬಿತ್ತಲು ರೈತರಿಗೆ ಈಗ ಬೀಜ- ರಟ್ಟೆಗೆ ಕೆಲಸ ಇಲ್ಲದೇ ಕೃಷಿ ಚಟುವಟಿಕೆಗಳು ಗರ ಬಡಿದುಕೊಂಡ ದಾರುಣ ಸನ್ನಿವೇಶ !

ಈ ದುರಂತದ ನಡುವೆ ರಾಜ್ಯದಲ್ಲೀಗ ಬರ ರಾಜಕೀಯ' ಜೋರಾಗಿದೆ.ರಾಜಕೀಯ ಬರ’ ಈ ರಾಜ್ಯದಲ್ಲಿ ಸದಾ ದಟೈಸುತ್ತಿರುವುದು ವಿಶೇಷವಲ್ಲ. ಧ್ವನಿ ಕಳೆದುಕೊಂಡ ಜನಪ್ರತಿನಿಧಿಗಳು, ಅನ್ಯಾಯವಾಗುತ್ತಿದ್ದರೂ ತೆಪ್ಪಗಿರುವ ಪಕ್ಷ ರಾಜಕೀಯ, ಕೇಂದ್ರದವರು ರಾಜ್ಯದತ್ತ, ರಾಜ್ಯದವರು ಕೇಂದ್ರದತ್ತ ಟೀಕೆ-ಪ್ರಹಾರ, ಆರೋಪ-ಪ್ರತ್ಯಾರೋಪಗಳೆಲ್ಲ ಈಗ ಮೇಲಾಟವಾಗುತ್ತಿರುವುದಕ್ಕೆ ರಾಜಕಾರಣಿಗಳ `ರಾಜಕೀಯ ಬರ’ ಢಾಳಾಗಿ ಗೋಚರಿಸುತ್ತಿದೆ!

ಕೋಲಾರದ ಬೇತಮಂಗಲದಿಂದ ರೋಣ ಮುಂಡರಗಿಯವರೆಗೆ, ಬೀದರ್‌ನ ಭಾಲ್ಕಿಯಿಂದ ಕನಕಪುರದವರೆಗೆ ಈಗ ಒಂದೇ ಕೂಗು. ಒಂದೇ ಹೋರಾಟ. ನಮ್ಮ ತಾಲ್ಲೂಕನ್ನು `ಬರ ಪೀಡಿತ ಪ್ರದೇಶ’ ಎಂದು ಘೋಷಿಸಿ ಎಂಬುದು.

ರಾಜ್ಯದಲ್ಲಿ ಬಹುತೇಕ ಕಡೆ ವಾಡಿಕೆಯ ಶೇ 34ರಷ್ಟೂ ಮಳೆ ಬಿದ್ದಿಲ್ಲ. ಅದರಲ್ಲೂ ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಹಲವು ತಾಲ್ಲೂಕುಗಳಲ್ಲಿ 10 ಮಿಮೀಯಷ್ಟೂ ಮಳೆ ಸುರಿದಿಲ್ಲ. ಈ ಇಪ್ಪತ್ತೊಂದನೇ ಶತಮಾನದ ಇಪ್ಪತ್ತೈದು ವರ್ಷಗಳಲ್ಲಿ ರಾಜ್ಯ ಮೂರನೇ ಸಾರಿ ಕರಾಳ ಬರದ ಬವಣೆಗೆ ಸಿಲುಕಿದೆ!.

1978, ಅದಕ್ಕೂ ಪೂರ್ವದ 1938ರ ಬರಗಾಲದಷ್ಟು ಕಠೋರ ಕರಾಳ ದುಸ್ಥಿತಿಗಿಂತಲೂ ಈ ಸಾರೆ ಕಠೋರ-ಕರಾಳ ಪರಿಸ್ಥಿತಿ ನಿರ್ಮಾಣವಾದೀತೇನೋ ಎಂದು ಹವಾಮಾನ ತಜ್ಞರೇ ಕಳವಳದಿಂದ ಹೇಳುತ್ತಿದ್ದಾರೆ.

ಈಗ ಎದ್ದಿರುವ ಪ್ರಶ್ನೆ, ಈ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ? ಕೇಂದ್ರಕ್ಕೆ ಬರ ಅಧ್ಯಯನ ತಂಡ ಕಳುಹಿಸಿಕೊಡಿ ಎಂದು ಸ್ವತಃ ಮುಖ್ಯಮಂತ್ರಿ ತಿಂಗಳ ಹಿಂದೆ ಪತ್ರ ಬರೆದರು. ಆಗ ಶುರುವಾಯಿತು ಮೂರೂ ಪಕ್ಷಗಳಿಂದ ಬರ ಅಧ್ಯಯನ ತಂಡಗಳ ರಚನೆ! ಮುಖ್ಯಮಂತ್ರಿಗಳು, ಮಂತ್ರಿಗಳು ವಿಮಾನ, ಹೆಲಿಕಾಪ್ಟರ್‌ಗಳಲ್ಲಿ ಆಗಮಿಸಿ ಒಂದೆರಡು ತಾಲ್ಲೂಕುಗಳ ಹೊಲಗಳಲ್ಲಿ ಮಿಂಚಿನ ಸಂಚಾರ ನಡೆಸಿ `ಬಹಳ ಕರಾಳವಾವಗಿದೆ ಸ್ಥಿತಿ’ ಎಂದು ಒಣಗಿದ ರಾಗಿ, ಹೆಸರು, ಜೋಳದ ತೆನೆಗಳೊಟ್ಟಿಗೆ ರೈತರ ಕಣ್ಣೀರು ಒರೆಸುವ ಫೋಟೋಗಳು ಕ್ಲಿಕ್ ಆದವು!!

ನಾವೇನು ಕಮ್ಮಿ ಎಂದು ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ನಾಯಕರು ಶಾಸಕರುಗಳ ನೇತೃತ್ವದಲ್ಲಿ ತಂಡ ರಚಿಸಿಕೊಂಡು ಅಲ್ಲಲ್ಲಿ ಸಂಚರಿಸುತ್ತ, ಹಾಗೇ ಬಳ್ಳಾರಿ ಪಾದಯಾತ್ರೆಯಲ್ಲಿ ರೈತರ ಹೊಲದಲ್ಲೇ ಊಟ ಮಾಡುತ್ತ, ಇಡೀ ರಾಜ್ಯವನ್ನೇ ಬರಪೀಡಿತ ಪ್ರದೇಶ ಎಂದು ಘೋಷಿಸಿ; ಸರ್ಕಾರದ ಗ್ಯಾರಂಟಿಗಾಗಿ ಖಜಾನೆ ಬರಿದಾಗಿದೆ ಎಂದು ಟೀಕಿಸಿದರು.

ಇತ್ತ, ಜೆಡಿಎಸ್ ತನ್ನ ಯುವ ನಾಯಕನ ನೇತೃತ್ವದಲ್ಲಿ ಇಪ್ಪತ್ತೈದು ತಂಡಗಳನ್ನು ಹಳ್ಳಿಗಳಿಗೆ ಕಳುಹಿಸಿ, ಬಹಳ ಭೀಕರವಾಗಿದೆ; ಸರ್ಕಾರ ನಿಷ್ಕ್ರೀಯವಾಗಿ. ಅಲ್ಲೋಲ ಕಲ್ಲೋಲ ಆಗುತ್ತದೆ' ಎಂದೆಲ್ಲ ವೀರಾವೇಶದಿಂದ ಬರ ಪೀಡಿತ ಪ್ರದೇಶಗಳ ಘೋಷಣೆಯಲ್ಲೂ ರಾಜಕೀಯ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಗು ಮತ್ತು ಅಸಹ್ಯ ಬರುತ್ತದೆ ಈಬರ ಶೋ’ ನೋಡಿ!

ಸರ್ಕಾರವೇನೋ ಮಂತ್ರಿಗಳನ್ನು ಜಿಲ್ಲೆಗಳಿಗೋ, ತಾಲ್ಲೂಕು ಕೇಂದ್ರಗಳಿಗೋ ಕಳುಹಿಸಿ ಗೇರ್ ಅಪ್ ಮಾಡುವುದು ಅಗತ್ಯ ಆಡಳಿತಾತ್ಮಕ ಹೆಜ್ಜೆ. ರಾಜ್ಯ ಸರ್ಕಾರ 101 ತಾಲ್ಲೂಕುಗಳನ್ನು ಮೊದಲ ಹಂತದಲ್ಲಿ ಘೋಷಣೆ ಮಾಡಿದೆ. ಆ ನಂತರ ಇನ್ನೂ ಇಪ್ಪತ್ತೈದು ತಾಲ್ಲೂಕುಗಳನ್ನು ಆಗಸ್ಟ್ ಅಂತ್ಯದ ವೇಳೆಗೆ ಸೇರ್ಪಡೆ ಮಾಡಿದೆ. ಆದರೆ ಈಗ 200ಕ್ಕೂ ಹೆಚ್ಚು ತಾಲ್ಲೂಕುಗಳು (ಮಲೆನಾಡು-ಕರಾವಳಿಯ ಕೆಲ ತಾಲ್ಲೂಕು, ಪ್ರದೇಶಗಳನ್ನು ಹೊರತುಪಡಿಸಿ) ಸೇರಿದಂತೆ ಬಹುತೇಕ ರಾಜ್ಯವೇ ಅನಾವೃಷ್ಟಿಯೇ ಕಪಿಮುಷ್ಟಿಗೆ ಸಿಲುಕಿದೆ ಎಂಬುದು ವಾಸ್ತವವೂ ಹೌದು.

ಮುಖ್ಯಮಂತ್ರಿಗಳೇನೋ ಪ್ರಧಾನಿಗೆ ಪತ್ರ ಬರೆದು ಕೇಂದ್ರ ಅಧ್ಯಯನ ತಂಡ ಕಳುಹಿಸಿ ಬರ ಪರಿಸ್ಥಿತಿ ನಿಭಾಯಿಸಲು ನೆರವು ನೀಡಿ; ಸಂಕಷ್ಟ ಪರಿಹಾರ ನಿದಿಯ ಅಡಿ ಸಹಕರಿಸಿ, ನೀರು, ಮೇವು, ಕೂಲಿ, ಆಹಾರ ಧಾನ್ಯ ಇವುಗಳನ್ನು ಒದಗಿಸಲು ನೆರವು ಕೊಡಿ ಎಂದೇನೋ ಕೋರಿದ್ದಾರೆ.

ಕೇಂದ್ರ ಸರ್ಕಾರ `ಬರ ನಿರ್ವಹಣಾ ಕೈಪಿಡಿ-2020′ (ಮ್ಯಾನ್ಯುವಲ್ ಫಾರ್ ಡ್ರಾಟ್ ಮ್ಯಾನೇಜ್‌ಮೆಂಟ್) ಮಾರ್ಗಸೂಚಿಯನ್ನು ಪ್ರಕಟಿಸಿದೆ. ಅದರಲ್ಲಿ ಒಂದು ಪ್ರದೇಶ, ತಾಲ್ಲೂಕು ಅಥವಾ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಿಸಲು ಕಠಿಣವಾದ ವೈಜ್ಞಾನಿಕ ಮಾನದಂಡವನ್ನು ವಿಧಿಸಿದೆ. ಬರ ಘೋಷಣೆಯ ಮೊದಲ ಹೆಜ್ಜೆಯೇ ಮಳೆಯ ಪ್ರಮಾಣ.

ನಿಗದಿತ ಕಾಲದಲ್ಲಿ ಮಳೆಯಾಗದಿರುವುದು, ಸಾಮಾನ್ಯ ಮಳೆಗಿಂತ ಶೇ 20ರಿಂದ 59ಕ್ಕಿಂತ ಹೆಚ್ಚು ಮಳೆ ಕೊರತೆಯಾಗಿರುವುದು, ಮಳೆ ಕೊರತೆ ಅನ್ನಿಸಿದರೂ ಆಗಾಗ ಹದ ನೀಡುತ್ತ, ಶುಷ್ಕ ಹವೆ ಇಲ್ಲದೇ ಮಣ್ಣಿನ ತೇವಾಂಶ, ಉತ್ತಿ ಬಿತ್ತಿದ ಬೆಳೆಗೆ ಪೂರಕವಾದ ವಾತಾವರಣ ಇದ್ದರೆ ಅದಕ್ಕೆ ಬರ ಪೀಡಿತ ಪ್ರದೇಶ ಎಂದು ಘೋಷಿಸಲಾಗದು. ಹಾಗೆಯೇ ಒಟ್ಟು ಬಿತ್ತನೆಯ ಗುರಿಯಲ್ಲಿ ಶೇ 33ಕ್ಕಿಂತ ಕಡಿಮೆಯಾದರೆ ಉಪಗ್ರಹ ಆಧಾರಿತ ಚಿತ್ರಗಳಲ್ಲಿ, ಹಸಿರು ಮತ್ತು ಸಸ್ಯಗಳು ಮಾಯವಾಗಿ ಒಣಗಿದ ರೀತಿ ಕಂಡು ಬಂದರೆ, ಅಂತರ್ಜಲಮಟ್ಟ ಕುಸಿದಿದ್ದರೆ, ಶೇ 33ಕ್ಕಿಂತ ಕಡಿಮೆ ಬೆಳೆ ನಷ್ಟವಾದರೆ ಬರ ಪೀಡಿತ ಪ್ರದೇಶ ಎಂದು ಘೋಷಿಸಬಹುದಂತೆ.

ಇವೆಲ್ಲವುಗಳ ಅರಿವಿದ್ದೂ ಕೂಡ ರಾಜ್ಯದ ಮಂತ್ರಿ ಮಹೋದಯರಿಂದ, ಪ್ರತಿ ಪಕ್ಷದ ನಾಯಕರು, ಶಾಸಕರು, ಮರಿ ಪುಢಾರಿಗಳೆಲ್ಲ ನಮ್ಮ ತಾಲ್ಲೂಕನ್ನು ಬರ ಪೀಡಿತ' ಎಂದು ಘೋಷಿಸಿ ಎಂದು ಮೆರವಣಿಗೆ, ಧರಣಿ, ಪಾದಯಾತ್ರೆ ನಡೆಸುತ್ತಬರ ರಾಜಕೀಯದ ಪೈಪೋಟಿಗೆ ಇಳಿದಿದ್ದಾರೆ.

ಬರದ ಹಾಗೂ ಅತಿವೃಷ್ಟಿಯ ರಾಜಕೀಯ ಹೇಗಿದೆ ಎಂದರೆ ಸ್ವತಃ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅವರದ್ದೇ ಪಕ್ಷದ ಕೇಂದ್ರ ಸರ್ಕಾರದಿಂದ ದಮ್ಮಡಿ ಕಾಸು ತರಲಾಗದೇ ಬಸವಳಿದು ಹೋಗಿದ್ದರು !!

ರಾಜ್ಯದ ಬೊಕ್ಕಸದಿಂದ, ಸಾಲ ಸೋಲ ಮಾಡಿ, ಹಣ ಹೊಂದಿಸಲು ಯತ್ನಿಸಿ, ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿ ಜನರನ್ನು ಸಂತೈಸಿದ್ದರು. ಅದೇ ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅತಿವೃಷ್ಟಿ-ಅನಾವೃಷ್ಟಿ ಪ್ರಧಾನಿ ವಾಜಪೇಯಿ ಸಾಂತ್ವನ-ನೆರವಿನ ಹಸ್ತ ಚಾಚಿದ್ದರು. ಒಂದು ಮುತ್ಸದ್ದಿತನ, ಇನ್ನೊಂದು ಸಣ್ಣತನದ ಆಂತರಿಕ ರಾಜಕೀಯ. ಈಗ ಸೇಡಿನ ರಾಜಕೀಯ !!

ಕಳೆದ ವರ್ಷದ ತೀವ್ರ ಅನಾವೃಷ್ಟಿಗೆ ಎನ್.ಡಿ.ಆರ್.ಎಫ್ ನಿಧಿಯಿಂದ ಮೊನ್ನೆ 3454.33 ಕೋಟಿ ರೂ. ಎಲ್ಲ ರಾಜ್ಯಗಳಂತೇ ಕರ್ನಾಟಕಕ್ಕೂ (ಸರ್ವೋಚ್ಚನ್ಯಾಯಾಲಯದ ಮೆಟ್ಟಿಲೇರಿ) ಕೇಂದ್ರ ನೀಡಿದೆ ನಿಜ. ಈ ಬಾರಿಯ ಬರ ಸ್ಥಿತಿಗೆ ಮತ್ತೆ `ಬರ ರಾಜಕೀಯ’ !

ಪ್ರಸ್ತುತ ಪರಿಸ್ಥಿತಿ ನೋಡಿದರೆ ಶಿವಕುಮಾರ್ ನೇತ್ವತ್ವದ ಸರ್ಕಾರ ಬರ ಪರಿಸ್ಥಿತಿ ನಿಭಾಯಿಸಲು ಸಾಕಷ್ಟು ಹೆಣಗಾಡಬೇಕಿದೆ. ಇಡೀ ರಾಜ್ಯವೇ ಬರದಲ್ಲಿ ಸಿಲುಕಿರುವುದರಿಂದ ನೆಲದ ಆರೋಗ್ಯ, ನೆಲದ ಸಂರಕ್ಷಣೆ, ಜಲಾಶಯಗಳು, ಜಲಮೂಲಗಳ ನಿರ್ವಹಣೆ, ಕೆರೆ ಕೊತ್ತಲಗಳ ಉಳಿವು, ಜನ ಜಾನುವಾರುಗಳ ಸಂರಕ್ಷಣೆ, ಮಾನವ ಸಂಪನ್ಮೂಲದ ಸದ್ಬಳಕೆ, ಎಲ್ಲಕ್ಕೂ ಹೆಚ್ಚಾಗಿ ಕುಡಿಯುವ ನೀರು ಮತ್ತು ಗುಳೆ ಹೋಗುವುದನ್ನು ತಪ್ಪಿಸುವ ಕೆಲಸಕ್ಕೆ ಪ್ರಾಧಾನ್ಯತೆ ನೀಡಬೇಕಾಗಿದೆ.

ಬೆಳೆ ವಿಮೆ, ಪ್ರಕೃತಿ ವಿಕೋಪ ವಿಮೆ ಇವುಗಳ ಹೆಸರಿನಲ್ಲಿ ಖಾಸಗಿ ವಿಮಾ ಕಂಪನಿಗಳು ನೂರಾರು- ಸಾವಿರಾರು ಕೋಟಿ ರೂಪಾಯಿಗಳನ್ನು ದೋಚುತ್ತಿವೆ. ಪ್ರತಿ ವರ್ಷ ವಿಮಾ ಕಂತು ತುಂಬುವ ರೈತ, ತನ್ನ ಪಾಲು ಒದಗಿಸುವ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಮರಳಿ ರೈತರಿಗೆ ಸಿಗುವುದು ಬಿಡಿಗಾಸು ಮಾತ್ರ. ಅದರ ಮಾನದಂಡವೋ ಯಾರಿಗೂ ಪರಿಹಾರ ಸಿಗಬಾರದು..! ನೂರಾರು ಖಾಸಗಿ ವಿಮಾ ಕಂಪನಿಗಳು ಕಳೆದ ಏಳೆಂಟು ವರ್ಷಗಳಲ್ಲಿ ಹುಟ್ಟಿ ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡಿವೆ. ಅದಕ್ಕಾಗಿಯೇ ಈ ಹಿಂದಿನಂತೆ ಸರ್ಕಾರಿ ವಿಮಾ ಕಂಪನಿಗಳಿಗೆ ಮಾತ್ರ ಬೆಳೆ ವಿಮೆ, ಪ್ರಕೃತಿ ವಿಮೆ, ಹವಾಮಾನ ವೈಪರಿತ್ಯ ವಿಮೆ ಪರವಾನಗಿ ಕೊಡಿ ಎಂದು ಆರ್ಥಿಕ ತಜ್ಞರು, ಪ್ರಾಜ್ಞರು ಒತ್ತಾಯಿಸುತ್ತಿರುವುದು.

ಈ ಸಾರೆಯ ಪರಿಸ್ಥಿತಿಯಂತೂ ವಿಭಿನ್ನ. ಬೆಳೆ ಇಲ್ಲ. ದುಡಿಮೆಯೂ ಇಲ್ಲ. ರೈತರ ಸಾಲ ಮನ್ನಾ ಮಾಡಿ ಎಂದು ನಾಡು ಆಗ್ರಹಿಸುತ್ತಿದೆ. ಖಾಸಗಿ ಸಾಲ ಬಿಡಿ. ಸರ್ಕಾರಿ, ಸಹಕಾರಿ ಸಂಘಟನೆಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡಿ. ಹಿಂದೆ ಪ್ರದಾನಿ ಮನಮೋಹನ ಸಿಂಗ್ 75 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದರು.

ಝೀ ಎಂಟರ್‌ಟೈನ್‌ಮೆಂಟ್‌ನ ಸುಭಾಷ್‌ಚಂದ್ರ ಅಂಥವರ ನಾಲ್ಕೈದು ಮಂದಿಯ ಸಾಲದ ಮನ್ನಾ ಮೊತ್ತದಲ್ಲಿ ಕೋಟ್ಯಂತರ ರೈತರ ಸಾಲ ಮನ್ನಾ ಆಗುತ್ತಿತ್ತು. ಆದರೆ ಪ್ರಶ್ನಿಸುವವರು ಯಾರು? ಕೇಂದ್ರದ ಅನಾವೃಷ್ಟಿ ಮಾನದಂಡ ಬದಲಾಗಬೇಕು. ಅದಕ್ಕಾಗಿ ಇಲ್ಲಿ ಪಾದಯಾತ್ರೆ ನಡೆಸುವುದಕ್ಕಿಂತ ಸಂಸತ್ತಿನಲ್ಲಿ ಪ್ರಶ್ನಿಸಿ ಪರಿಹರಿಸಬೇಕಲ್ಲವೇ? ರಾಜ್ಯದ ಅನ್ಯಾದ ಬಗ್ಗೆ ಸಂಸತ್ತಿನಲ್ಲಿ ಬಾಯಿ ಬಿಡಬೇಕು. ರಾಜ್ಯದ ಹದಿನೈದು ಸಂಸದರು ಒಟ್ಟಾಗಿ ಎದ್ದು ನಿಂತರೆ ಸಾಕು. ಯಾವ ಸರ್ಕಾರ ಬಾಗದಿರದು ಹೇಳಿ!? ಬರ ಪರಿಸ್ಥಿತಿಯ ಕುರಿತೇ ಚರ್ಚಿಸಲು ಸೆ. 21ರಿಂದ ಮೂರು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದೆ. ಇದರಲ್ಲಿ ಮತ್ತೆ ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡಿ ಹೂಂಕರಿಸುವುದು, ಪ್ರತಿಪಕ್ಷಗಳು ರಾಜ್ಯ ಸರ್ಕಾರವನ್ನು ಟೀಕಿಸುವುದು ಇಷ್ಟೇ ನಡೆಯುತ್ತದೆಯೇ ವಿನಾ, ಜನರ ಕಣ್ಣೀರು ಒರೆಸುವ, ಒಂದು ವಾಸ್ತವಿಕ ನಿರ್ಧಾರ-ನಿರ್ಣಯ- ಇಚ್ಛಾಶಕ್ತಿ ಖಂಡಿತ ಪ್ರದರ್ಶನವಾಗಲಿಕ್ಕಿಲ್ಲ. ಏಕೆಂದರೆ ಈಗಿರುವುದು ಬರದ ಜೊತೆಗೆ ಬರ ರಾಜಕೀಯ'; ಜೊತೆಗೆರಾಜಕೀಯ (ಮುತ್ಸದ್ದಿತನದ) ಬರ’ ಅಲ್ಲವೇ !?