SK Home Ad
Home ಸುದ್ದಿ ರಾಜ್ಯ ಕೆಎಎಸ್ ಪರೀಕ್ಷೆ: ಡ್ರೆಸ್‌ಕೋಡ್ ಪಾಲಿಸದ ಅಭ್ಯರ್ಥಿಗಳ ಪರದಾಟ

ಕೆಎಎಸ್ ಪರೀಕ್ಷೆ: ಡ್ರೆಸ್‌ಕೋಡ್ ಪಾಲಿಸದ ಅಭ್ಯರ್ಥಿಗಳ ಪರದಾಟ

0
59

ಬೆಂಗಳೂರು: ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಪರೀಕ್ಷೆ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿರುವ ಅಧಿಕಾರಿಗಳು, ಅಭ್ಯರ್ಥಿಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ.

ಮಲ್ಲೇಶ್ವರಂ 18ನೇ ಕ್ರಾಸ್‌ನಲ್ಲಿರುವ ಪದವಿಪೂರ್ವ ಕಾಲೇಜು ಸೇರಿದಂತೆ ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸರು ಮುಂಚಿತವಾಗಿಯೇ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಗರಿಷ್ಠ 24 ಅಭ್ಯರ್ಥಿಗಳಿಗೆ ಮಾತ್ರ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಎಲ್ಲ ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ತಡೆಯಲು ಜಾಮರ್‌ಗಳನ್ನೂ ಅಳವಡಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ಪ್ರತಿಯೊಬ್ಬ ಅಭ್ಯರ್ಥಿಯನ್ನೂ ತಪಾಸಣೆ ನಡೆಸಿದ ಬಳಿಕವೇ ಒಳಗೆ ಬಿಡಲಾಗುತ್ತಿದೆ.

ಇನ್ನೊಂದೆಡೆ, ಪರೀಕ್ಷಾ ಮಾರ್ಗಸೂಚಿ ಪಾಲಿಸದ ಕೆಲವು ಅಭ್ಯರ್ಥಿಗಳು ಕೇಂದ್ರಗಳ ಎದುರು ಮುಜುಗರದ ಪರಿಸ್ಥಿತಿ ಎದುರಿಸಬೇಕಾಯಿತು. ಮಲ್ಲೇಶ್ವರಂ ಸರ್ಕಾರಿ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಫುಲ್ ಶರ್ಟ್ ಧರಿಸಿ ಬಂದ ಅಭ್ಯರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ.

ಈ ವೇಳೆ ಅಭ್ಯರ್ಥಿಯೊಬ್ಬರು ತಂದೆಯೊಂದಿಗೆ ಹೊರಗೆ ತೆರಳಿ ಬಟ್ಟೆ ಬದಲಾಯಿಸಿಕೊಂಡು ಮರಳಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ. ಮತ್ತೊಬ್ಬ ಅಭ್ಯರ್ಥಿ ಕೊನೆಯ ಕ್ಷಣದಲ್ಲಿ ಶರ್ಟ್ ಕತ್ತರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಶರ್ಟ್ ಇಲ್ಲದೆ ಬನಿಯನ್‌ನಲ್ಲೇ ಪರೀಕ್ಷೆ ಬರೆಯಲು ತೆರಳಿದ್ದಾರೆ.

ಪರೀಕ್ಷಾ ಮಾರ್ಗಸೂಚಿಯಲ್ಲಿನ ವಸ್ತ್ರಸಂಹಿತೆ ಪಾಲಿಸದೆ ಬಂದ ಕೆಲ ಅಭ್ಯರ್ಥಿಗಳು ಕೊನೆಯ ಕ್ಷಣದಲ್ಲಿ ಪರದಾಡುವಂತಾಯಿತು. ಬಿಗಿ ಭದ್ರತೆ ಒಂದೆಡೆಯಾದರೆ, ಡ್ರೆಸ್‌ಕೋಡ್ ವಿಚಾರವೂ ಪರೀಕ್ಷಾ ಕೇಂದ್ರಗಳಲ್ಲಿ ಗಮನ ಸೆಳೆಯಿತು.