SK Home Ad
Home ನಮ್ಮ ಜಿಲ್ಲೆ ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ ಬಸ್ ಟಿಕೆಟ್ ದರ ದಿಢೀರ್ ಏರಿಕೆ:  KSRTC, BMTC ಪ್ರಯಾಣಿಕರಿಗೆ ಸರ್ಕಾರದ ಬಿಗ್...

ಮಧ್ಯರಾತ್ರಿಯಿಂದಲೇ ಜಾರಿಯಾಗುವಂತೆ ಬಸ್ ಟಿಕೆಟ್ ದರ ದಿಢೀರ್ ಏರಿಕೆ:  KSRTC, BMTC ಪ್ರಯಾಣಿಕರಿಗೆ ಸರ್ಕಾರದ ಬಿಗ್ ಶಾಕ್ !

0
7

ಹಾಲಿನ ಬೆಲೆ ಏರಿಕೆಯ ಬಿಸಿ ಆರುವ ಮುನ್ನವೇ ರಾಜ್ಯದ ಜನಸಾಮಾನ್ಯರ ಮೇಲೆ ಸರ್ಕಾರ ಮತ್ತೊಂದು ಆರ್ಥಿಕ ಹೊರೆ ಹೊರಿಸಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಪ್ರಯಾಣ ದರವನ್ನು ದಿಢೀರ್ ಪರಿಷ್ಕರಿಸಲಾಗಿದ್ದು, ಪರಿಷ್ಕೃತ ದರಗಳು ಇಂದು ಮಧ್ಯರಾತ್ರಿಯಿಂದಲೇ ಅಧಿಕೃತವಾಗಿ ಜಾರಿಗೆ ಬರಲಿವೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಘೋಷಿಸಿದ್ದಾರೆ.

ನೂತನ ಪರಿಷ್ಕರಣೆಯಂತೆ ಬಿಎಂಟಿಸಿ ಸಾಮಾನ್ಯ ಬಸ್‌ಗಳಲ್ಲಿ ಈ ಹಿಂದೆ ₹6 ಇದ್ದ ಆರಂಭಿಕ ಕನಿಷ್ಠ ಸ್ಟೇಜ್ ದರವನ್ನು ರೂ.10 ಕ್ಕೆ ಏರಿಸಲಾಗಿದೆ. ಗರಿಷ್ಠ ಹಂತದ ದರ ರೂ.35 ರಿಂದ ರೂ.45 ಕ್ಕೆ ಜಿಗಿದಿದ್ದರೆ, ವಾಯುವಜ್ರ ಎಸಿ ಬಸ್‌ಗಳ ಗರಿಷ್ಠ ಹಂತದ ದರ ರೂ.75 ರಿಂದ ರೂ.90 ಕ್ಕೆ ಹೆಚ್ಚಾಗಿದೆ.

ಕೆಎಸ್‌ಆರ್‌ಟಿಸಿ ಸಾಮಾನ್ಯ ಸಾರಿಗೆಯಲ್ಲಿ ನೆಲಮಂಗಲ ಮತ್ತು ಹೊಸಕೋಟೆಗೆ ರೂ.35 ಇದ್ದ ದರ ರೂ.44 ಕ್ಕೆ ಏರಿಕೆಯಾಗಿದೆ. ವೇಗದೂತ ಬಸ್‌ಗಳಲ್ಲಿ ತುಮಕೂರು ಮತ್ತು ಕೋಲಾರಕ್ಕೆ ರೂ.81 ಇದ್ದ ಟಿಕೆಟ್ ರೂ.100, ಮೈಸೂರಿಗೆ ರೂ.160 ಇದ್ದದ್ದು ರೂ.197 ಹಾಗೂ ಚಿಕ್ಕಮಗಳೂರಿಗೆ ರೂ.295 ರಿಂದ ರೂ.363 ಕ್ಕೆ ತಲುಪಿದ್ದು, ದೂರದ ಊರುಗಳಿಗೆ ಸಂಚರಿಸುವ ಪ್ರಯಾಣಿಕರ ಜೇಬಿಗೆ ನೇರ ಕತ್ತರಿ ಬಿದ್ದಿದೆ.

ಸುದ್ದಿಗೋಷ್ಠಿಯಲ್ಲಿ ದರ ಏರಿಕೆಯನ್ನು ಸಮರ್ಥಿಸಿಕೊಂಡ ಸಚಿವ ಬೈರತಿ ಸುರೇಶ್, “ಶಕ್ತಿ ಯೋಜನೆಯಿಂದ ನಿಗಮಗಳಿಗೆ ಯಾವುದೇ ಆರ್ಥಿಕ ನಷ್ಟವಾಗಿಲ್ಲ, ಆ ವೆಚ್ಚವನ್ನು ಸರ್ಕಾರವೇ ಪೂರ್ಣವಾಗಿ ಭರಿಸುತ್ತಿದೆ. ಆದರೆ ಕಳೆದ ಹಲವು ವರ್ಷಗಳಿಂದ ಡೀಸೆಲ್ ದರ ಲೀಟರ್‌ಗೆ ರೂ.10ಕ್ಕೂ ಹೆಚ್ಚು ಹೆಚ್ಚಾಗಿದ್ದು, ವಾರ್ಷಿಕ ರೂ.5,694 ಕೋಟಿ ಕೇವಲ ಡೀಸೆಲ್‌ಗೆ ವ್ಯಯವಾಗುತ್ತಿದೆ. ಇದರೊಂದಿಗೆ ನೌಕರರ ವೇತನ ಹೆಚ್ಚಳ, ಭವಿಷ್ಯ ನಿಧಿ (PF) ಹಾಗೂ ನಿವೃತ್ತಿ ಸೌಲಭ್ಯಗಳ ಸಾವಿರಾರು ಕೋಟಿ ಬಾಕಿ ಸಾಲವನ್ನು ತೀರಿಸಿ ಸಂಸ್ಥೆಯನ್ನು ಉಳಿಸಿಕೊಳ್ಳಲು ಈ ಅನಿವಾರ್ಯ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ವಿವರಣೆ ನೀಡಿದ್ದಾರೆ.