SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ನ್ಯಾಯ ಕೊಡಿಸುವವರಿಗೇ ಇಲ್ಲವೇ ರಕ್ಷಣೆ? ವಕೀಲರ ಆಕ್ರೋಶ

ನ್ಯಾಯ ಕೊಡಿಸುವವರಿಗೇ ಇಲ್ಲವೇ ರಕ್ಷಣೆ? ವಕೀಲರ ಆಕ್ರೋಶ

0
6

ಚಿತ್ರದುರ್ಗ: ರಾಜ್ಯದಲ್ಲಿ ವಕೀಲರ ಮೇಲೆ ಹೆಚ್ಚುತ್ತಿರುವ ಹಲ್ಲೆ, ಬೆದರಿಕೆ ಹಾಗೂ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಸರ್ಕಾರ ಕೂಡಲೇ ಸಮಗ್ರ ಹಾಗೂ ಬಲಿಷ್ಠ ಕಾನೂನು ಜಾರಿಗೆ ತರಬೇಕು ಎಂದು ಚಳ್ಳಕೆರೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ಅಶ್ವತ ನಾಯಕ ಆಗ್ರಹಿಸಿದರು.

ತಾಲೂಕು ಕಚೇರಿ ಮುಂಭಾಗದಲ್ಲಿ ವಕೀಲರ ಮೇಲಿನ ದೌರ್ಜನ್ಯ ಖಂಡಿಸಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹಾಗೂ ಬೆಂಗಳೂರು ವಕೀಲರ ಸಂಘದ ಕರೆಯ ಮೇರೆಗೆ ಮಂಗಳವಾರ ಚಳ್ಳಕೆರೆ ತಾಲೂಕು ವಕೀಲರ ಸಂಘದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ನ್ಯಾಯಾಂಗ ವ್ಯವಸ್ಥೆಯಲ್ಲಿ ವಕೀಲರು ಪ್ರಮುಖ ಪಾತ್ರ ವಹಿಸುತ್ತಿದ್ದು, ಸಾರ್ವಜನಿಕರಿಗೆ ನ್ಯಾಯ ಒದಗಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇಂತಹ ಜವಾಬ್ದಾರಿಯುತ ವೃತ್ತಿಯಲ್ಲಿರುವವರ ಮೇಲೆಯೇ ಹಲ್ಲೆ ಮತ್ತು ಬೆದರಿಕೆ ಘಟನೆಗಳು ನಡೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ವಕೀಲರ ಸುರಕ್ಷತೆ ಹಾಗೂ ವೃತ್ತಿಯ ಘನತೆಗೆ ಧಕ್ಕೆ ಉಂಟಾಗದಂತೆ ಸರ್ಕಾರ ಸೂಕ್ತ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಈಗಿರುವ ಕಾನೂನುಗಳನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ವಕೀಲರ ಹಿತಾಸಕ್ತಿ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ಒಂದು ದಿನ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರ ವಕೀಲರ ಸಮಸ್ಯೆಗಳಿಗೆ ಸ್ಪಂದಿಸಿ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷೆ ಬಿ.ಟಿ. ಶ್ಯಾಮಲ, ಪ್ರಧಾನ ಕಾರ್ಯದರ್ಶಿ ಪರಮೇಶ್ವರಪ್ಪ, ಹೆಚ್. ನಾಗರಾಜ್, ಬಸವರಾಜೇಶ್ವರಿ, ರವೀಂದ್ರ, ತಿಪ್ಪೇಸ್ವಾಮಿ, ಜಯಣ್ಣ, ಮಂಜುನಾಥ, ಓಂಕಾರಿ ತಿಪ್ಪೇಸ್ವಾಮಿ, ದೊರೆ ನಾಗರಾಜ್, ಕುರುಡಿಹಳ್ಳಿ ಶ್ರೀನಿವಾಸ್, ವಿಶ್ವನಾಥ, ಸುಮಲತಾ, ಮಮತಾ, ಪವಿತ್ರ, ಮಂಜುನಾಥ್ ಆಚಾರ್, ಪರಶುರಾಮ್, ಅರ್ಚನಾ, ಶೋಭಾ ಸೇರಿದಂತೆ ಸಂಘದ ಹಲವು ವಕೀಲರು ಇದ್ದರು.