ಬೆಳಗಾವಿ: ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲಿಕರ ನಡುವಿನ ದರ ನಿಗದಿ ವಿವಾದಕ್ಕೆ ತಾತ್ಕಾಲಿಕ ಪರಿಹಾರ ದೊರೆತಿದ್ದು, ಪ್ರತಿ ಟನ್ ಕಬ್ಬಿಗೆ 3,600 ರೂ. ನೀಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಬುಧವಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತ ಮುಖಂಡರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಆಶ್ರಿತ ಕಬ್ಬು ಬೆಳೆದ ರೈತರು ಈ ದರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಇತರ ರೈತ ಸಂಘಟನೆಗಳೊಂದಿಗೆ ಸಭೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ಎಲ್ಲರೂ ಒಪ್ಪಿಗೆ ಸೂಚಿಸಿದ್ದು, ಗುರುವಾರದಿಂದ ಸಕ್ಕರೆ ಕಾರ್ಖಾನೆ ಆರಂಭಿಸಲು ತೀರ್ಮಾನಿಸಲಾಗಿದೆ ಎಂದರು.
ಚೂನ್ನಪ್ಪ ಪೂಜೇರಿ ನೇತೃತ್ವದ ರೈತ ಹೋರಾಟಗಾರರು ಜೈಲ್ ಭರೋ ಚಳವಳಿ ಹಾಗೂ ಪಾದಯಾತ್ರೆ ಮೊಟಕುಗೊಳಿಸಿ, ಕಾರ್ಖಾನೆಗಳ ಆರಂಭಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರದ ಎಸ್ಎಪಿ ಬೇಡಿಕೆ ಕುರಿತು ಒಂದು ವರ್ಷದ ಬಳಿಕ ಪರಿಶೀಲನೆ ನಡೆಸುವ ಪ್ರಸ್ತಾಪವಿದೆ. 3,600 ರೂ. ದರವು ಬೆಳಗಾವಿ ಜಿಲ್ಲೆಗೆ ಮಾತ್ರ ಸೀಮಿತವಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.




















