SK Home Ad
Home ಅಂಕಣ ಅಂಕಣ ಬರಹ | `ಕಸ್ತೂರಿ’ಯ ನೆರಳು, ಸಹ್ಯಾದ್ರಿ ಮಲಮಕ್ಕಳ ಅಳಲು

ಅಂಕಣ ಬರಹ | `ಕಸ್ತೂರಿ’ಯ ನೆರಳು, ಸಹ್ಯಾದ್ರಿ ಮಲಮಕ್ಕಳ ಅಳಲು

0
2

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

ರಾಜ್ಯದ ಮಲೆನಾಡು ಮತ್ತು ಕರಾವಳಿ ಭಾಗದ ಜನತೆ ಆತಂಕಗೊಂಡಿದ್ದಾರೆ. ಪಶ್ಚಿಮ ಘಟ್ಟದ ಸಂರಕ್ಷಣೆ ಮತ್ತು ಪರಿಸರ ಸೂಕ್ಷ್ಮತೆ ಕುರಿತು ಡಾ. ಕಸ್ತೂರಿ ರಂಗನ್ ಸಮಿತಿ ಸಲ್ಲಿಸಿರುವ ವರದಿಯ ಅನುಷ್ಠಾನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಏಳನೇ ಕರಡು ಅಧಿಸೂಚನೆಯನ್ನು ಜಾರಿಗೊಳಿಸಿರುವುದೇ ಸಹ್ಯಾದ್ರಿಯ ಈಗಿನ ತಳಮಳಕ್ಕೆ ಕಾರಣ!

ಕರ್ನಾಟಕದ ಹತ್ತು ಜಿಲ್ಲೆಗಳ 44,448 ಚದರ ಕಿಮೀ ವ್ಯಾಪ್ತಿಯ ಪ್ರದೇಶದಲ್ಲಿ 1439 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸಿ ಅಲ್ಲಿ ಪರಿಸರ ನಾಶಕ್ಕೆ ಶಾಶ್ವತ ತಡೆಹಾಕಬೇಕು; ಅರಣ್ಯಕ್ಕೆ ಧಕ್ಕೆಯಾಗುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದು ಮತ್ತು ಜನವಸತಿಯನ್ನು ನಿರ್ಬಂಧಿಸಬೇಕು ಎಂದು ವರದಿ ಹೇಳಿರುವುದು ಇಲ್ಲಿ ತಲೆತಲಾಂತರಗಳಿಂದ ಬದುಕಿ ಬಾಳುತ್ತಿರುವ ಜನರ ಆತಂಕಕ್ಕೆ ಕಾರಣ.

ಕಸ್ತೂರಿ ರಂಗನ್ ಸಮಿತಿ ವರದಿ ಸಲ್ಲಿಸಿದ್ದು 2013ರಲ್ಲೇ. ಕಳೆದ ಹದಿಮೂರು ವರ್ಷಗಳಿಂದ ಈ ವರದಿ ಅನುಷ್ಠಾನದ ಪ್ರಶ್ನೆ ಬಂದಾಗಲೆಲ್ಲ ಆರು ರಾಜ್ಯಗಳ ಪಶ್ಚಿಮ ಘಟ್ಟದ ನಿವಾಸಿಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಏಳು ಡ್ರಾಫ್ಟ್ ನೋಟಿಫಿಕೇಶನ್‌ಗಳನ್ನು ಕೇಂದ್ರ ಸರ್ಕಾರ ಹೊರಡಿಸಿದೆ ಎಂದರೆ ಜನರ ಆಕ್ರೋಶ ಅರಣ್ಯ ರೋದನವೇ ಆದೀತು ಎನಿಸುವುದಿಲ್ಲವೇ? ಜುಲೈ 27ರಂದು ಕೇಂದ್ರ ಕಸ್ತೂರಿ ರಂಗನ್ ವರದಿ ಶಿಫಾರಸು, ಎಲ್ಲ ಮಗ್ಗಲುಗಳುಳ್ಳ ಕರಡು ಅಧಿಸೂಚನೆಯನ್ನು ಹೊರಡಿಸುವುದರ ಜೊತೆಗೆ, ಕರ್ನಾಟಕದ ಹತ್ತು ಜಿಲ್ಲೆಗಳ 1439 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದೆ. ಹಾಗೇ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಪುದುಚೇರಿ, ಗೋವಾ ರಾಜ್ಯಗಳ ಸೂಕ್ಷ್ಮ ವಲಯವೂ ಸೇರಿದೆ.

ಕಸ್ತೂರಿ ರಂಗನ್ ಶಿಫಾರಸುಗಳ ಕರಡು ಅಧಿಸೂಚನೆಗಳು ಪ್ರಕಟವಾದಾಗಲೆಲ್ಲ ಜನಪ್ರತಿನಿಧಿಗಳ ಆಕ್ರೋಶ- ಆವೇಶ ಮುಗಿಲು ಮುಟ್ಟುತ್ತದೆ. ಕರ್ನಾಟಕ ವಿಧಾನಸಭೆಯೇ ಮೂರು ಸಲ ಕಸ್ತೂರಿ ರಂಗನ್ ವರದಿ ಕುರಿತು ಉಭಯ ಮಂಡಲಗಳಲ್ಲಿ ಚರ್ಚೆ ನಡೆದು, ಸಂಪುಟದಲ್ಲಿ ತಿರಸ್ಕರಿಸಿ ನಿರ್ಣಯ ಅಂಗೀಕರಿಸಿವೆ. ಈಗ ಏಳನೇ ಕರಡು ಪ್ರಕಟವಾಗಿದೆ. ಅಂದರೆ ರಾಜ್ಯಗಳ ಕೂಗಿಗೆ ಕೇಂದ್ರ ಸರ್ಕಾರ ಮತ್ತು ಈ ಎಲ್ಲ ಸ್ವಾಯತ್ತ ಸಂಸ್ಥೆಗಳು ಕಿವುಡಾಗಿವೆ ಎನ್ನುವುದು ಸ್ಪಷ್ಟ.

ಕೆಲ ತಿಂಗಳ ಹಿಂದಷ್ಟೇ ನಡೆದ ಬೆಳಗಾವಿ ಅಧಿವೇಶನದಲ್ಲಿ ಅಂದಿನ ಅರಣ್ಯ ಸಚಿವ ಈಶ್ವರ ಖಂಡ್ರೆ `ತಲೆತಲಾರಂತರದಿಂದ ಕೃಷಿ ಮಾಡಿಕೊಂಡು ಬಂದಿರುವ ಜನರಿಗೆ ಯಾವ ಆತಂಕವೂ ಬೇಕಿಲ್ಲ; ಅವರನ್ನು ನಾವು ಒಕ್ಕಲೆಬ್ಬಿಸಲ್ಲ’ ಎಂದು ಸಮಾಧಾನ ಮಾದಿದ್ದರು. ಈಗ ನೂತನ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಇದಕ್ಕಾಗಿಯೇ ಸೆಪ್ಟೆಂಬರ್ 21ರಿಂದ 23ರವರೆಗೆ ವಿಶೇಷ ಅಧಿವೇಶನ ನಡೆಯಲಿದೆ.!

ಕೇವಲ ಕರ್ನಾಟಕ ಒಂದೇ ಅಲ್ಲ. 1600 ಕಿಮೀ ವ್ಯಾಪ್ತಿ ಪ್ರದೇಶದಲ್ಲಿ ಹರಡಿರುವ ಪಶ್ಚಿಮ ಘಟ್ಟ ಪ್ರದೇಶದ ನಿತ್ಯ ಹರಿದ್ವರ್ಣದ ಕಾಡುಗಳು, ಪರ್ವತಗಳು, ಕಾವೇರಿ, ಕೃಷ್ಣಾ, ತುಂಗಾ, ನರ್ಮದಾ, ಕಾಳಿ ಸೇರಿದಂತೆ ಬೃಹತ್ ನದಿಗಳ ಉಗಮ ಸ್ಥಾನ ಎಲ್ಲವಕ್ಕೂ ಹಾನಿಯಾಗಿವೆ. ಈಗ ಶೇ. 34ರಷ್ಟೂ ಅರಣ್ಯ ಅಲ್ಲಿ ಉಳಿದಿಲ್ಲ. ಹಾಗಾಗಿ ಭವಿಷ್ಯತ್ತಿನ ಪೀಳಿಗೆಗಾಗಿ ಪಶ್ಚಿಮ ಘಟ್ಟವನ್ನು ಸಂರಕ್ಷಿಸುವುದರೊಂದಿಗೆ, ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎನ್ನುತ್ತದೆ.

ನಿಜ. ಪಶ್ಚಿಮ ಘಟ್ಟ ಮತ್ತು ಅರಣ್ಯ ಪ್ರದೇಶ ನಾಶವಾಗಿರುವುದು ಯಾರಿಂದ? ಯಾರಿಗಾಗಿ? ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಲವಿದ್ಯುತ್, ರಕ್ಷಣೆ, ಗಣಿಗಾರಿಕೆ, ಅಣುವಿದ್ಯುತ್, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಟೌನ್‌ಶಿಪ್‌ಗಳು, ಕೈಗಾರಿಕೆಗಳು, ಅರಣ್ಯ ಮತ್ತು ಘಟ್ಟ ಪ್ರದೇಶಗಳ ಖನಿಜ ಅವಲಂಬಿಸಿರುವ ಉದ್ಯಮಗಳು, ಬೃಹನ್ ನಗರಗಳಿಗೆ ಅಗತ್ಯವಾಗಿರುವ ಸೌಕರ್ಯಗಳ ಯೋಜನೆಗಳು ಇವೆಲ್ಲಕ್ಕೂ ಪಶ್ಚಿಮ ಘಟ್ಟವನ್ನೇ ಬಗೆಯಲಾಗಿದೆ. ಹೀಗಿರುವಾಗ ಪಶ್ಚಿಮ ಘಟ್ಟಗಳ ಸಂರಕ್ಷಣೆ ಮತ್ತು ಅದರ ಉಳಿವು ಯಾರಿಂದ ಆಗಬೇಕು?

ಡಾ. ಮಾಧವ್ ಗಾಡ್ಗೀಳ್ ವರದಿ ಮತ್ತು ಕಸ್ತೂರಿ ರಂಗನ್ ವರದಿ ಇವು ಕೂಡ ದೋಷಪೂರಿತವಾಗಿರುವುದು, `ಜನರಿಂದಲೇ ಕಾಡು ನಾಶ’ ಎನ್ನುವುದರಲ್ಲಿ! ಜನ ಕೃಷಿಯನ್ನು ಮಾಡುತ್ತಿರುವುದರ ಜೊತೆಗೆ, ಅರಣ್ಯ ಉತ್ಪನ್ನಗಳನ್ನೂ ಅವಲಂಬಿಸಿದ್ದಾರೆ. ಹಲವು ತಜ್ಞರ ವರದಿ ಕೂಡ ಕಾಡಂಚಿನ ಜನರಿಂದಲೇ ಕಾಡು ಸಂರಕ್ಷಣೆಯಾಗಿದೆ ಎನ್ನುತ್ತವೆ.

ಈಗ ಕಳೆದ ಹತ್ತು ವರ್ಷಗಳಿಂದ ಭೂಕುಸಿತದಂತ ಅವಾಂತರಗಳು ಪಶ್ಚಿಮ ಘಟ್ಟದಲ್ಲಿ ಆಗಿರುವುದನ್ನು ಗಮನಿಸಿದರೆ ಅವೆಲ್ಲವೂ ಸರ್ಕಾರಿ ಯೋಜನೆಗಳ ಅನುಷ್ಠಾನ ಮತ್ತು ಯದ್ವಾತದ್ವಾ ಇವುಗಳ ಜಾರಿಯಿಂದ ಸಂಭವಿಸಿರುವುದು ಸ್ಪಷ್ಟ. ಅನಿಯಂತ್ರಿತವಾದ ಅನಗತ್ಯ ಅಭಿವೃದ್ಧಿ ಯೋಜನೆಗಳು ಇಲ್ಲೆಲ್ಲ ಬೇಕಾಗಿದ್ದವೇ?

ಇವೆಲ್ಲ ಈಗ ಚರ್ಚಿಸಲ್ಪಟ್ಟಂಥವೇ. ಕರ್ನಾಟಕ ಮೂರು ಸಾರೆ ಕಸ್ತೂರಿ ರಂಗನ್ ವರದಿ ತಿರಸ್ಕರಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದೆ. ಕೇರಳ ಇದಕ್ಕಾಗಿ ಪರ್ಯಾಯ ಸಲಹೆಗಳನ್ನೂ ಕೂಡ ನೀಡಿದೆ. ಯಾವುದೇ ಜನವಸತಿ ಮತ್ತು ಹಳ್ಳಿಗಳನ್ನು, ಕೃಷಿಭೂಮಿಯನ್ನು ಒಕ್ಕಲೆಬ್ಬಿಸುವುದಿಲ್ಲ. ಆದರೆ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಹೊಸ ಉದ್ಯಮ, ಗಣಿಗಾರಿಕೆಯನ್ನು ನಿಷೇಧಿಸಲಾಗುವುದು. ಜನರ ಸಹಭಾಗಿತ್ವದಲ್ಲೇ ಅರಣ್ಯ ಅಭಿವೃದ್ಧಿಗೆ ಯೋಜನೆ ರೂಪಿಸುವುದು. ಗ್ರಾಮ ಸಭೆಗಳ ಮೂಲಕ ಅರಣ್ಯ ಸಂರಕ್ಷಣೆ ಕುರಿತು ಚರ್ಚಿಸುವುದು ಮತ್ತು ಅರಣ್ಯ ಯೋಜನೆಗಳನ್ನು ಅನುಷ್ಠಾನ ಗೊಳಿಸುವುದು ಅರಣ್ಯಾಧಿಕಾರಿಗಳಲ್ಲ, ಆಯಾ ಗ್ರಾಮಗಳ ಗ್ರಾಮ ಸಮಿತಿಗಳು ಎಂದು ಕೇರಳ ನಿರ್ಣಯ ತೆಗೆದುಕೊಂಡು ಶಿಫಾರಸು ಮಾಡಿದೆ. ಈ ಮಾದರಿಯಲ್ಲೇ ಏಕೆ ಕರ್ನಾಟಕ ಮಾಡಬಾರದು?

ಕೇರಳ, ತಮಿಳುನಾಡಿನ ಸಂಸದರು ಸಂಸತ್ತಿನಲ್ಲಿ ಅಧ್ಯಯನ ಪೂರ್ಣ ವಾದ ಮಂಡಿಸಿ ತಮ್ಮ ನಿಲುವು ಸ್ಪಷ್ಟಪಡಿಸಿದರು. ದುರಂತವೆಂದರೆ ಕರ್ನಾಟಕದ ಸಂಸದರು, ವಿಶೇಷವಾಗಿ ಪಶ್ಚಿಮ ಘಟ್ಟ ವ್ಯಾಪ್ತಿಯ ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಸಂಸದರು ಆ ದಿನ ಸಂಸತ್ತಿಗೆ ಹಾಜರಾಗಲೇ ಇಲ್ಲ ಎನ್ನುವ ದೂರು ಇದೆ. ಕಸ್ತೂರಿ ರಂಗನ್ ವರದಿ ತಿರಸ್ಕರಿಸಬೇಕು ಎಂದು ಬೆಂಗಳೂರಿಗೆ ಬಂದು ಆಗ್ರಹಿಸುವ ಸಚಿವೆ ಶೋಭಾ ಕರಂದ್ಲಾಜೆ ಕೂಡ ಸದನದಲ್ಲಿ ಧ್ವನಿ ಎತ್ತಲಿಲ್ಲ.

ಕಸ್ತೂರಿ ರಂಗನ್ ವರದಿ ಸಲ್ಲಿಕೆಯಾಗಿ ಕರಡು ಗೆಜೆಟ್ ಪ್ರಕಟಣೆಯ ನಂತರವೂ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯ ಹಲವು ಬೃಹತ್ ಯೋಜನೆಗಳಿಗೆ ಮಂಜೂರಾತಿ ನೀಡಿದ್ದೇಕೆ ಮತ್ತು ಹೇಗೆ ಎನ್ನುವುದು. ತಲೆ ತಲಾಂತರದಿಂದ ಕಾಡಿನೊಂದಿಗೆ ಬೆರೆತು ಬದುಕುತ್ತಿರುವ ಕೃಷಿಕರಿಗೆ ಅವರಿಗೆ ಭೂಮಿ ಹಕ್ಕು ನೀಡಲು ತಕರಾರು.. ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ? ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅರಣ್ಯ ಬೆಳೆಸುವ ಪ್ರಕ್ರಿಯೆಗೆ ಯೋಜನೆ ರೂಪಿಸಿಲ್ಲ? ಆದರೆ ಬೃಹತ್ ಗಣಿ, ವಿದ್ಯುತ್, ಉದ್ಯಮಗಳಿಗೆ ನಿಯಮ ಸಡಿಲಿಸಿ ಪರವಾನಿಗೆ ನೀಡಿದ್ದೇಕೆ?

ಈಗಲೂ ಕೂಡ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, ಸಿಆರ್‌ಝಡ್ ಉಲ್ಲಂಘಿಸಿ ರೆಸಾರ್ಟ್ ಮಾಡುತ್ತಿರುವುದು, ನದಿ ತಿರುವು ಯೋಜನೆ, ಗಣಿಗಾರಿಕೆ, ರಾಷ್ಟ್ರದ ಬೃಹತ್ ಉದ್ಯಮಿಗಳಿಗೆ ಇದೇ ತಪ್ಪಲು ಪ್ರದೇಶದಲ್ಲಿ ಭೂ ದಾನ ಏಕಾಯ್ತು? ಹೇಗಾಯ್ತು? ಅದೇ ಬಡ ಬೋರೇಗೌಡ ಒಂದು ಎಕರೆ ಕೃಷಿ ಸಾಗುವಳಿ ಮಾಡುವುದನ್ನು ಒಕ್ಕಲೆಬ್ಬಿಸಿದರೆ ಅರಣ್ಯ ಸಂರಕ್ಷಣೆ ಆದೀತಾ?

ಪಶ್ಚಿಮ ಘಟ್ಟದ 1600 ಕಿಮೀ ಉದ್ದಕ್ಕೂ 1,64,2982 ಚದರ ಕಿಮೀ ವ್ಯಾಪ್ತಿಯಲ್ಲಿ, ಯಾವುದೇ ಬೃಹತ್ ಮತ್ತು ಸಣ್ಣ ಯೋಜನೆಗಳನ್ನೂ ಕೂಡ ಅನುಷ್ಠಾನಗೊಳಿಸದಂತೆ ತೀರ್ಮಾನಿಸುವುದು ಮೊದಲ ಆದ್ಯತೆಯಾಗಬೇಕು. ಡಾ.ಕಸ್ತೂರಿ ರಂಗನ್ ವರದಿಯಲ್ಲಿ ಎಲ್ಲಿಯೂ ಈಗಿರುವ ಜನವಸತಿ ಪ್ರದೇಶವನ್ನು ಒಕ್ಕಲೆಬ್ಬಿಸಬೇಕು (ಅಂದರೆ ಖುಲ್ಲಾ ಪಡಿಸಬೇಕು) ಎನ್ನುವ ಅಂಶವೇ ಇಲ್ಲ. ಕಾಡು ಮಧ್ಯದಲ್ಲಿ, ಅಂದರೆ ದಟ್ಟಾರಣ್ಯದ ಮಧ್ಯೆ ವಾಸಿಸುವ ಜನರನ್ನು ಹೊರತಂದು ಅವರಿಗೆ ಉತ್ತಮ ಪುನರ್ವಸತಿ ಕಲ್ಪಿಸಿ ಅಲ್ಲಿ ಅರಣ್ಯ ಬೆಳೆಸಬೇಕು ಎಂದಿದೆ. ಹೊಸ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ನಿರ್ಬಂಧಿಸಬೇಕು ಎಂದು ವರದಿ ಹೇಳಿದೆ. ಘೋಷಿತ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಹೊಸ ಬೆಳವಣಿಗೆಗೆ ಅವಕಾಶ ನಿಷೇಧಿಸಲಾಗಿದೆ. ಬುಡಕಟ್ಟು ಸಮುದಾಯ, ಸ್ಥಳೀಯ ಕೃಷಿಕರು ಹಾಗೂ ಜನರನ್ನು ಒಕ್ಕಲೆಬ್ಬಿಸಲಾಗುತ್ತದೆ ಎನ್ನುವ ಪ್ರಚೋದನೆಯನ್ನು ಮಾತ್ರ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ!

ಸರ್ಕಾರ ತಪ್ಪಿರುವುದು ಇಲ್ಲೇ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಜನರೇ ಅರಣ್ಯ ನಾಶಕ್ಕೆ ಕಾರಣ ಎಂದು ಬಿಂಬಿಸಿ ಅವರನ್ನು ಖಳನಾಯಕರಂತೆ ತೋರಿಸಲಾಗುತ್ತಿದೆ.
ಅರಣ್ಯ ನಾಶಕ್ಕೆ ಸರ್ಕಾರವೇ ಕಾರಣ. ಎಷ್ಟೇ ನಿರ್ಬಂಧ ವಿಧಿಸಿದರೂ ಅದನ್ನು ಸಡಿಲಿಸಿ ಬೃಹತ್ ಕಂಪನಿಗಳಿಗೆ, ಯೋಜನೆಗಳಿಗೆ ಅನುಮತಿ ಕೊಟ್ಟಿರುವ ಖಳನಾಯಕ ಸರ್ಕಾರವೇ! ಈ ಗಣಿ ಕಂಪನಿಗಳು, ಅರಣ್ಯ ಅವಲಂಬಿತ ಉದ್ಯಮಿಗಳು ರಾಜಕೀಯ ಪಕ್ಷಗಳಿಗೆ ನೀಡಿರುವ ಚುನಾವಣಾ ಫಂಡ್ ಪಟ್ಟಿ ನೋಡಿಬಿಡಿ ಸ್ಪಷ್ಟವಾಗುತ್ತದೆ!
ಜನ ಉಗಿಯಬೇಕಾಗಿದ್ದು ನಮ್ಮನ್ನು ಪ್ರತಿನಿಧಿಸುವ ಪ್ರತಿನಿಧಿಗಳಿಗೆ. ಜನರ ಭಾವನೆಗಳನ್ನು ಸಂಸತ್ತಿನಲ್ಲಿ ತಿಳಿಸಿ, ವಾಸ್ತವವನ್ನು ಬಿಂಬಿಸಿ, ನಮ್ಮನ್ನು ರಕ್ಷಿಸಿ ಎಂದು ಕೇಳಿಕೊಳ್ಳಬೇಕಾಗಿದೆ.

ಈ ಹತ್ತು ಜಿಲ್ಲೆಗಳ ಸಂಸದರಿದ್ದಾರಲ್ಲ. ಇವರಲ್ಲಿ ಎಷ್ಟು ಮಂದಿ ಕಸ್ತೂರಿ ರಂಗನ್ ವರದಿ, ಅದರ ಹಿಂದಿನ ಮಾಧವ್ ಗಾಡ್ಗೀಳ್ ವರದಿ ಓದಿದ್ದಾರೆ, ಅಧ್ಯಯನ ಮಾಡಿದ್ದಾರೆ ತಿಳಿಸಲಿ. ಪಶ್ಚಿಮ ಘಟ್ಟದ ಸಂರಕ್ಷಣೆ ಜೊತೆ ಜೊತೆಗೆ ಜನರ ಉಳಿವಿಗೆ, ಸಂಸದರೇ ಮೊದಲು ತಮ್ಮ ಬಾಯಿಯನ್ನು ಸಂಸತ್ತಿನ ಒಳಗೆ ಬಿಡಿ; ಶಾಸಕರೇ ಶಾಸನ ಸಭೆಗಳಲ್ಲಿ ಒಡೆಯಿರಿ? ನಿಮಗೆ ಅರಿವಾಗದಿದ್ದರೆ ತಜ್ಞರೊಂದಿಗೆ ಚರ್ಚಿಸಿ ಪರಿಹಾರ ರೂಪಿಸಿ ವಿನಾ, ಜನರನ್ನು ಇನ್ನಷ್ಟು ಭಯಪಡಿಸುತ್ತ ಇನ್ನಷ್ಟು ವರ್ಷಗಳ ಕಾಲ ಇದೇ ಪ್ರಕರಣವನ್ನು ಎಳೆಯುತ್ತಿರುವುದಕ್ಕೆ `ಇತಿಶ್ರೀ’ ಹಾಡಿ. ಸೆ. 21ರಿಂದ ರಾಜ್ಯ ವಿಧಾನ ಮಂಡಲದ ವಿಶೇಷ ಅಧಿವೇಶನ ಜರುಗುತ್ತದೆ. ಆಗ ಶಾಸಕರ ಆರ್ಭಟ, ಅವರ ವಿದ್ವತ್ತುಗಳೆಲ್ಲ ಪ್ರದರ್ಶನವಾಗುತ್ತದೆ. ಇದು ಹಿಂದೆಯೂ ಆಗಿರುವ ಪ್ರದರ್ಶನವೇ. ಇದೇ ಮರುಕಳಿಸಲಿದೆ…ಅಷ್ಟೇ !!