ಚಿತ್ರದುರ್ಗ: ನಕಲಿ ಚಿನ್ನ ನೀಡಿ ತೆಲಂಗಾಣ ಮೂಲದ ವ್ಯಕ್ತಿಯೊಬ್ಬರಿಂದ 10 ಲಕ್ಷ ರೂಪಾಯಿ ನಗದು ಹಾಗೂ ಮೊಬೈಲ್ ಫೋನ್ ಕಸಿದುಕೊಂಡು ವಂಚಿಸಿದ್ದ ಆರೋಪಿಯನ್ನು ನಾಯಕನಹಟ್ಟಿ ಪೊಲೀಸರು ಬಂಧಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ಕೊರಡಿಹಳ್ಳಿ ಗ್ರಾಮದ ಸಮೀಪ ಚಿನ್ನಹಗರಿ ಹಳ್ಳಕ್ಕೆ ಹೋಗುವ ರಸ್ತೆಯಲ್ಲಿ ಸೆಪ್ಟೆಂಬರ್ 26ರಂದು ಈ ಘಟನೆ ನಡೆದಿತ್ತು. ತೆಲಂಗಾಣ ರಾಜ್ಯದ ಬೋಡಿಗೆ ಶ್ರೀನಿವಾಸ್ ಎಂಬುವರಿಗೆ ಜಗಳೂರು ತಾಲೂಕಿನ ರಾಜು ಎಂಬಾತ ನಕಲಿ ಚಿನ್ನ ನೀಡಿ ವಂಚಿಸಿದ್ದನು. ಅಲ್ಲದೆ, ಅವರಿಂದ 10 ಲಕ್ಷ ರೂಪಾಯಿ ನಗದು ಹಾಗೂ ಮೊಬೈಲ್ ಫೋನ್ ಪಡೆದು ಪರಾರಿಯಾಗಿದ್ದನು.
ಈ ಸಂಬಂಧ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದರು. ಇದೀಗ ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ಪಾಂಡುರಂಗ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ 4.50 ಲಕ್ಷ ರೂಪಾಯಿ ನಗದು ಹಾಗೂ ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.





















