SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ಆಧಾರ್‌ಗಾಗಿ ಬೆಳಗಿನ ಜಾವ 6ರಿಂದ ಸರತಿ: ಬೆಡ್‌ಶೀಟ್‌, ಚಪ್ಪಲಿಯೇ ಟೋಕನ್!

ಆಧಾರ್‌ಗಾಗಿ ಬೆಳಗಿನ ಜಾವ 6ರಿಂದ ಸರತಿ: ಬೆಡ್‌ಶೀಟ್‌, ಚಪ್ಪಲಿಯೇ ಟೋಕನ್!

0
96
ಆಧಾರ್‌ಗಾಗಿ ಜನರ ಪರದಾಟ: 250–300 ಟೋಕನ್‌ಗಳಿಗೆ ಮುಂಜಾನೆಯಿಂದಲೇ ಸರತಿ

ಸಂ.ಕ.ಸಮಾಚಾರ ತೆಕ್ಕಲಕೋಟೆ (ಬಳ್ಳಾರಿ): ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಮಾಡಿಸಿಕೊಳ್ಳಲು ಸಾರ್ವಜನಿಕರು ತಾಸುಗಟ್ಟಲೆ ಸರತಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ತೆಕ್ಕಲಕೋಟೆ ತಾಲ್ಲೂಕಿನ ಕರೂರು ಗ್ರಾಮದಲ್ಲಿ ನಿರ್ಮಾಣವಾಗಿದೆ. ಸರದಿಯಲ್ಲಿ ತಮ್ಮ ಸ್ಥಾನ ತಪ್ಪದಂತೆ ಸಾರ್ವಜನಿಕರು ಬೆಡ್‌ಶೀಟ್‌, ಚಪ್ಪಲಿ, ಚೀಲ, ಕಲ್ಲು ಹಾಗೂ ಕೆಲವರು ಆಧಾರ್ ಕಾರ್ಡ್‌ಗಳನ್ನೇ ಸ್ಥಳ ಕಾಯ್ದಿರಿಸುವ ‘ಟೋಕನ್’ ಆಗಿ ಇಡುತ್ತಿರುವ ದೃಶ್ಯ ಕಂಡುಬರುತ್ತಿದೆ.

ಸಮೀಪದ ಕರೂರು ಗ್ರಾಮದ ನಾಡಕಚೇರಿಯಲ್ಲಿರುವ ಆಧಾರ್ ಕೇಂದ್ರಕ್ಕೆ 18 ಗ್ರಾಮಗಳ ಜನರು ಆಧಾರ್ ನೋಂದಣಿ ಮತ್ತು ವಿವಿಧ ತಿದ್ದುಪಡಿ ಸೇವೆಗಳಿಗಾಗಿ ಆಗಮಿಸುತ್ತಿದ್ದಾರೆ. ಪ್ರತಿ ಸೋಮವಾರ ಸುಮಾರು 250ರಿಂದ 300 ಟೋಕನ್‌ಗಳನ್ನು ನೀಡಲಾಗುತ್ತಿದ್ದು, ಟೋಕನ್ ಪಡೆಯಲು ಗ್ರಾಮಸ್ಥರು ಬೆಳಗಿನ ಜಾವ 6 ಗಂಟೆಯಿಂದಲೇ ಕೇಂದ್ರದ ಬಳಿ ಜಮಾಯಿಸುತ್ತಿದ್ದಾರೆ. ಇದರಿಂದ ನೂಕುನುಗ್ಗಲು ಉಂಟಾಗುತ್ತಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ತೆಕ್ಕಲಕೋಟೆ ನಾಡಕಚೇರಿಯಲ್ಲಿರುವ ಆಧಾರ್ ಕೇಂದ್ರವು ಕಳೆದ ಒಂದು ವರ್ಷದಿಂದ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಪರಿಣಾಮವಾಗಿ ತೆಕ್ಕಲಕೋಟೆ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಕರೂರು ಹಾಗೂ ಸಿರಿಗೇರಿ ಭಾಗದಲ್ಲಿರುವ ಆಧಾರ್ ಕೇಂದ್ರಗಳತ್ತ ತೆರಳುವಂತಾಗಿದೆ. ನೆರೆಯ ಆಂಧ್ರಪ್ರದೇಶದಿಂದಲೂ ಸಾರ್ವಜನಿಕರು ಆಗಮಿಸುತ್ತಿರುವುದರಿಂದ ಕೇಂದ್ರಗಳಲ್ಲಿ ಹೆಚ್ಚಿನ ಜನದಟ್ಟಣೆ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಿಸಿಲಿನಲ್ಲಿ ದೀರ್ಘಕಾಲ ನಿಲ್ಲಲು ಸಾಧ್ಯವಾಗದ ವೃದ್ಧರು, ಮಹಿಳೆಯರು ಹಾಗೂ ಇತರ ಸಾರ್ವಜನಿಕರು ತಮ್ಮ ಸರದಿ ತಪ್ಪದಂತೆ ನೆಲದ ಮೇಲೆ ಬೆಡ್‌ಶೀಟ್‌, ಚಪ್ಪಲಿ, ಚೀಲ, ಕಲ್ಲು ಮುಂತಾದ ವಸ್ತುಗಳನ್ನು ಇಟ್ಟು ಸ್ಥಳ ಕಾಯ್ದಿರಿಸುತ್ತಿದ್ದಾರೆ. ಆಧಾರ್ ಸೇವೆ ಪಡೆಯಲು ಮುಂಜಾನೆಯಿಂದಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಹೆಚ್ಚುವರಿ ಕೇಂದ್ರ ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆಧಾರ್ ಕೇಂದ್ರದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಸೇವೆ ಒದಗಿಸುವ ಉದ್ದೇಶದಿಂದ ಟೋಕನ್ ವ್ಯವಸ್ಥೆ ಮಾಡಲಾಗಿದೆ ಎಂದು ಕಂದಾಯ ಅಧಿಕಾರಿ ಹನುಮಂತಪ್ಪ ತಿಳಿಸಿದ್ದಾರೆ. ಆದರೆ ಟೋಕನ್ ಪಡೆಯಲು ಮುಂಜಾನೆಯಿಂದಲೇ ಜನರು ಸೇರುತ್ತಿರುವುದರಿಂದ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸುವ ಅಗತ್ಯ ಎದುರಾಗಿದೆ.

ಎರಡು–ಮೂರು ದಿನಗಳಲ್ಲಿ ಸಮಸ್ಯೆ ಪರಿಹಾರ? : ಈ ಕುರಿತು ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಗೌಸಿಯಾ ಬೇಗಂ, ತೆಕ್ಕಲಕೋಟೆ ಆಧಾರ್ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಎರಡು–ಮೂರು ದಿನಗಳಲ್ಲಿ ಸಮಸ್ಯೆ ಪರಿಹರಿಸಿ ಕೇಂದ್ರವನ್ನು ಪುನರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ನಡುವೆ UIDAI ದೇಶಾದ್ಯಂತ ಆಧಾರ್ ನೋಂದಣಿ ಮತ್ತು ನವೀಕರಣ ಸೇವೆಗಳಿಗಾಗಿ ಆನ್‌ಲೈನ್ ಅಪಾಯಿಂಟ್‌ಮೆಂಟ್ ವ್ಯವಸ್ಥೆಯನ್ನು ಒದಗಿಸಿದೆ. ಹೊಸ ಆಧಾರ್ ನೋಂದಣಿ, ಹೆಸರು, ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ಸೇರಿದಂತೆ ಹಲವು ಸೇವೆಗಳಿಗೆ ಕೇಂದ್ರದಲ್ಲಿ ಸೇವೆ ಪಡೆಯಬಹುದು. ಸಮೀಪದ ಆಧಾರ್ ಕೇಂದ್ರವನ್ನು ಪತ್ತೆಹಚ್ಚುವ ಸೌಲಭ್ಯವೂ UIDAI ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಕೇಂದ್ರಗಳು ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಾಗ ಪರ್ಯಾಯ ಕೇಂದ್ರಗಳ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿರುವುದು ಇಂತಹ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ತೆಕ್ಕಲಕೋಟೆ ಕೇಂದ್ರವನ್ನು ಶೀಘ್ರವಾಗಿ ಪುನರಾರಂಭಿಸುವುದರ ಜೊತೆಗೆ, ಕರೂರು ಕೇಂದ್ರದಲ್ಲಿ ಹೆಚ್ಚುತ್ತಿರುವ ಜನದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.