ಬೆಂಗಳೂರು: ರಾಜ್ಯ ಹಿಂದೆಂದೂ ಕಂಡರಿಯದ ಪ್ರಮಾಣದಲ್ಲಿ ಬರಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಅನ್ನದಾತದ ಬೆಂಬಲಕ್ಕೆ ನಿಲ್ಲಲು ಸಿಎಂ ಡಿ.ಕೆ. ಶಿವಕುಮಾರ್ ಸರ್ಕಾರ ಮುಂದಾಗಿದೆ.
4 ದಿನಗಳ ಕಾಲ ಜರುಗಿದ ವಿಶೇಷ ಅಧಿವೇಶನ ಕೊನೆಯ ದಿನವಾದ ಗುರುವಾರ 3 ಮಹತ್ವದ ಪರಿಹಾರ ಕ್ರಮ ಘೋಷಿಸಿದ್ದು, ರಾಜ್ಯದ ಬರಪೀಡಿತ ತಾಲೂಕುಗಳ ರೈತರಿಗೆ ತಲಾ 2,500 ರೂಪಾಯಿಗಳ ಇನ್ಪುಟ್ ಸಬ್ಸಿಡಿ ನೀಡುವುದು, ರೈತರ ಕೃಷಿಸಾಲ ಮರುಪಾವತಿಸುವ ಅವಧಿಯನ್ನು 36 ರಿಂದ 60 ತಿಂಗಳಿಗೆ ವಿಸ್ತರಿಸುವುದು ಹಾಗೂ ಮೈಕ್ರೋಫೈನಾನ್ಸ್ಗಳಲ್ಲಿ ಮಾಡಿರುವ ಸಾಲವನ್ನು ಬಲವಂತವಾಗಿ ವಸೂಲಿ ಮಾಡುವಂತಿಲ್ಲ ಎನ್ನುವ ತೀರ್ಮಾನವನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಆದರೆ ಸರ್ಕಾರದ ಪರಿಹಾರ ಕ್ರಮಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ವಿಪಕ್ಷಗಳು ಸಭಾತ್ಯಾಗ ಮಾಡಿದವು.
222 ತಾಲೂಕು ಬರ ಘೋಷಣೆ: ರಾಜ್ಯದ ಬರ ಪರಿಸ್ಥಿತಿ ಬಗ್ಗೆಯೇ ಚರ್ಚಿಸಲೆಂದು ಕರೆದಿದ್ದ ವಿಶೇಷ ಅಧಿವೇಶನದಲ್ಲಿ 26 ಗಂಟೆ 45 ನಿಮಿಷಗಳ ಕಾಲ ಸದಸ್ಯರಿಂದ ಗಂಭೀರ ಚರ್ಚೆ ನಡೆದಿದೆ. ಗುರುವಾರ ಸರ್ಕಾರದ ಪರವಾಗಿ ಉತ್ತರ ನೀಡಿದ ಡಿಸಿಎಂ ಆಗಿರುವ ಕಂದಾಯ ಸಚಿವ ಡಾ.ಜಿ.ಪರಮೇಶ್ವರ ಅವರು, ಕೇಂದ್ರ ಸರ್ಕಾರದ ಮಾನದಂಡ ಆಧರಿಸಿ 177 ತಾಲೂಕುಗಳನ್ನು ಬರಪೀಡಿತ ಎಂದು ಈಗಾ ಗಲೇ ಘೋಷಣೆ ಮಾಡಲಾಗಿದೆ. ಇನ್ನೂ 50 ತಾಲೂಕುಗಳ ಗ್ರೌಂಡ್ ಟ್ರೂಥಿಂಗ್ ನಡೆದಿದ್ದ ಒಟ್ಟಾರೆ ರಾಜ್ಯದಲ್ಲಿ 222ಕ್ಕೂ ಅಧಿಕ ತಾಲೂಕುಗಳು ಬರಪೀಡಿತ ಪಟ್ಟಿ ಸೇರುವ ಸಾಧ್ಯತೆ ಇದೆ. ಕೇಂದ್ರದ ತಜ್ಞರ ಅಧ್ಯಯನ ತಂಡ ರಾಜ್ಯಕ್ಕೆ ಬಂದು ಪರಿಶೀಲಿಸಿದ ಬಳಿಕ ನಿಖರ ಸಂಖ್ಯೆ ತಿಳಿಯಲಿದೆ ಎಂದು ವಿವರಿಸಿದರು.
40 ಸಾವಿರ ಕೋಟಿ ನಷ್ಟ ಅಂದಾಜು: ರಾಜ್ಯದ ಇತಿಹಾಸದಲ್ಲಿಯೇ ಇಷ್ಟು ಭೀಕರ ಬರಗಾಲ ಕಂಡಿದ್ದಿಲ್ಲ. ಮಳೆ ಕೊರತೆಯಿಂದ ರಾಜ್ಯದಲ್ಲಿ ಒಟ್ಟಾರೆ 72.45 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆಯಾಗಿರುವ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನಾಶವಾಗಿದೆ. ಮೊದಲ ಹಂತದಲ್ಲಿ ಘೋಷಣೆಯಾಗಿರುವ 101 ತಾಲೂಕು ಸಹಿತ 177 ತಾಲೂಕುಗಳಲ್ಲಿ ಅಂದಾಜು 40 ಸಾವಿರ ಕೋಟಿಯಷ್ಟು ಬೆಳೆನಷ್ಟವನ್ನು ಅಂದಾಜಿಸಲಾಗಿದೆ. 222 ತಾಲೂಕು ಮಳೆ ಕೊರತೆ ಎದುರಿಸಿವೆ.
14 ಜಲಾಶಯಗಳಲ್ಲಿ 649 ಟಿಎಂಸಿಯಷ್ಟು(ಶೇ72) ಮಾತ್ರ ನೀರು ಸಂಗ್ರಹವಿದೆ. ಕಳೆದ ವರ್ಷ ಈ ಪ್ರಮಾಣ ಶೇ 93ರಷ್ಟಿತ್ತು. ಬರಕ್ಕೆ ಸ್ಪಂದಿಸುವ ಸಲುವಾಗಿ 531 ಗ್ರಾಮ ಮತ್ತು 81 ವಾರ್ಡ್ಗಳಿಗೆ ಟ್ಯಾಂಕರ್ ಮುಖೇನ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಡಿಸಿಎಂ ತಿಳಿಸಿದರು.
ಹಣದ ಕೊರತೆ ಇಲ್ಲ: ಈಗಾಗಲೇ ಕುಡಿಯುವ ನೀರಿಗೆಂದೇ ವಿಧಾನಸಭಾ ಕ್ಷೇತ್ರಗಳಿಗೆ ತಲಾ 1 ಕೋಟಿ ರೂ ನೀಡಿದ್ದೇವೆ. ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್ನಲ್ಲಿ 420 ಕೋಟಿಯಷ್ಟು ಹಣವಿದ್ದು ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿಗೆ ಬಳಸಲು ಸೂಚಿಸಲಾಗಿದೆ. 33 ವಾರಗಳಿಗೆ ಆಗುವಷ್ಟು ಮೇವು ಮಾತ್ರವಿದ್ದು, ಮೇವಿನ ಕಿಟ್ ವಿತರಣೆಗೆ 25 ಕೋಟಿ ರೂ ನೀಡಲಾಗಿದೆ. ರಾಜ್ಯದ ಬರಕ್ಕೆ ತುತ್ತಾದ ಬಳಿಕ ಈಗಾಗಲೇ ಜಿಲ್ಲಾ ಮಟ್ಟದಲ್ಲಿ 270, ಸಿಎಂ ಮತ್ತು ನಾನು ಪ್ರತ್ಯೇಕವಾಗಿ 17, ಅಧಿಕಾರಿಗಳಿಂದ 1160, ಟಾಸ್ಕ್ಫೋರ್ಸ್ನಿಂದ 832 ಸಭೆ ನಡೆಸಿದ್ದೇವೆ. ರಾಜ್ಯ ಸರ್ಕಾರ ಇಂತಹ ಸ್ಥಿತಿಯನ್ನು ರೈತರ ಪರವಾಗಿ ನಿಲ್ಲಲು ಬದ್ಧವಾಗಿದೆ ಎಂದು ಪರಮೇಶ್ವರ್ ಭರವಸೆ ನೀಡಿದರು.






















