ಬೆಂಗಳೂರು: ನವೆಂಬರ್ 1ರಿಂದ ಕೇವಲ ಹಾಲಿನ ದರ ಹೆಚ್ಚಳವಾಗುವುದಿಲ್ಲ ಇದರ ಜೊತೆಗೆ ಮೊಸರಿನ ಬೆಲೆಯೂ ಕೂಡಾ 14 ರೂ. ಏರಿಕೆಯಾಗಲಿದೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ನವೆಂಬರ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
ಪ್ರತಿ ಲೀಟರ್ ಹಾಲಿಗೆ 8 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗಿದ್ದರೂ ಹಾಲಿನ ಬ್ರಾಂಡ್ಗಳ ಮೇಲೆ 12 ರೂ. ವರೆಗೂ ಹೆಚ್ಚಳವಾಗುತ್ತಿದೆ. ಹಾಲಿನಲ್ಲಿನ ಕೊಬ್ಬಿನ ಆಧಾರದಲ್ಲಿ ಎಲ್ಲಾ ಬ್ರ್ಯಾಂಡ್ಗಳ ಹಾಲಿನ ದರವನ್ನು ಹೆಚ್ಚಿಸಲಾಗಿದೆ. ಇದರಿಂದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಖರೀದಿಸುವ ಕುಟುಂಬಗಳ ಮಾಸಿಕ ವೆಚ್ಚವೂ ಹೆಚ್ಚಾಗಲಿದೆ.
ಹಾಲಿಗಿಂತಲೂ ಮೊಸರಿನ ದರ ಏರಿಕೆ ಗ್ರಾಹಕರಿಗೆ ಶಾಕ್ ನೀಡುವಂತಾಗಿದೆ. ಪ್ರಸ್ತುತ ಲೀಟರ್ ಮೊಸರಿಗೆ 54 ರೂಪಾಯಿ ಇದ್ದ ದರವನ್ನು ನಾಳೆಯಿಂದ 68 ರೂಪಾಯಿಗೆ ಹೆಚ್ಚಿಸಲಾಗುತ್ತಿದೆ. ಅಂದರೆ, ಪ್ರತಿ ಲೀಟರ್ ಮೊಸರಿಗೆ 14 ರೂಪಾಯಿ ಹೆಚ್ಚುವರಿ ಪಾವತಿಸಬೇಕಾಗುತ್ತದೆ. ಅರ್ಧ ಲೀಟರ್ ಮೊಸರಿನ ಬೆಲೆಯೂ 28 ರೂಪಾಯಿಯಿಂದ 34 ರೂಪಾಯಿಗೆ ಏರಿಕೆಯಾಗಲಿದೆ.
ಇದರಿಂದ ಅರ್ಧ ಲೀಟರ್ ಮೊಸರು ಖರೀದಿಸುವ ಗ್ರಾಹಕರು ಹೆಚ್ಚುವರಿಯಾಗಿ 6 ರೂಪಾಯಿ ಪಾವತಿಸಬೇಕಾಗುತ್ತದೆ. ಹಾಲಿನ ದರ ಏರಿಕೆಗೆ ಜನಸಾಮಾನ್ಯರ ವಿರೋಧ ವ್ಯಕ್ತವಾಗ್ತಿರುವ ಹಿನ್ನೆಲೆ ಮಾತಾಡಿದ ಸಿಎಂ ಡಿಕೆಶಿ, ಹಾಲು ಒಕ್ಕೂಟಗಳು 12 ರೂಪಾಯಿ ಕೇಳಿದ್ದರು. ಪಕ್ಕದ ರಾಜ್ಯಗಳಲ್ಲೂ ಹಾಲಿನ ದರ ಜಾಸ್ತಿ ಇದೆ. ಹಾಗಾಗಿ ಇಲ್ಲಿಂದ ಹಾಲು ಅಲ್ಲಿಗೆ ಹೋಗ್ತಿತ್ತು. ಬರಗಾಲದ ಕಾರಣ ಹಾಲು ಉತ್ಪಾದನೆ ಕೂಡ ಕಡಿಮೆ ಆಗುತ್ತಿದೆ. ಅದಕ್ಕೆ ಬೇರೆ ವಿಧಿನೇ ಇಲ್ಲದೇ ದರ ಹೆಚ್ಚಿಸಬೇಕಾಯ್ತು ಎಂದು ಹೇಳಿದರು.






















