ವಿರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಅಬ್ಬರ: ಯುಎಇ ವಿರುದ್ಧ ಭರ್ಜರಿ ಶತಕ, ಭಾರತದ ಸೆಮಿಫೈನಲ್ ಕನಸಿಗೆ ಬಲ!
ಮಸ್ಕತ್: ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್ ಅಂಡರ್-19 ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಒಮಾನ್ನ ಅಲ್ ಅಮೆರತ್ ಕ್ರಿಕೆಟ್ ಮೈದಾನದಲ್ಲಿ ಮಂಗಳವಾರ (ನವೆಂಬರ್ 10) ಯುಎಇ ವಿರುದ್ಧ ನಡೆಯುತ್ತಿರುವ ಮಹತ್ವದ ಗ್ರೂಪ್ ಎ ಪಂದ್ಯದಲ್ಲಿ ಆರ್ಯವೀರ್ ಆಕರ್ಷಕ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ.
ಟಾಸ್ ಗೆದ್ದ ಯುಎಇ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭಿಕ ಆಟಗಾರರಾದ ನಾಯಕ ಲಕ್ಷ್ಯ ರಾಜೇಶ ರೈಚಂದಾನಿ ಮತ್ತು ಆರ್ಯವೀರ್ ಸೆಹ್ವಾಗ್ ಉತ್ತಮ ಆರಂಭ ನೀಡಿದರು. ಆದರೆ 13.5 ಓವರ್ಗಳಲ್ಲಿ 62 ರನ್ ಗಳಿಸಿದ್ದಾಗ ಲಕ್ಷ್ಯ 17 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ಗೆ ಬಂದ ವಿಕೆ ವಿನೀತ್ ಅವರೊಂದಿಗೆ ಆರ್ಯವೀರ್ ಜವಾಬ್ದಾರಿಯುತ ಆಟವಾಡಿದರು.
131 ಎಸೆತಗಳಲ್ಲಿ ಶತಕದ ಸಂಭ್ರಮ : ಪಂದ್ಯದ ಆರಂಭದಲ್ಲಿ ಎಚ್ಚರಿಕೆಯ ಆಟಕ್ಕೆ ಒತ್ತು ನೀಡಿದ್ದ ಆರ್ಯವೀರ್, ನಂತರ ನಿಧಾನವಾಗಿ ರನ್ ವೇಗ ಹೆಚ್ಚಿಸಿದರು. 131 ಎಸೆತಗಳನ್ನು ಎದುರಿಸಿದ ಅವರು 13 ಬೌಂಡರಿ ಹಾಗೂ 2 ಸಿಕ್ಸರ್ಗಳ ನೆರವಿನಿಂದ ಶತಕ ಪೂರೈಸಿದರು. ಕಠಿಣ ಪಿಚ್ನಲ್ಲಿಯೂ ತಾಳ್ಮೆ, ಸಮಯೋಚಿತ ಹೊಡೆತಗಳ ಮೂಲಕ ತಂಡಕ್ಕೆ ಆಸರೆಯಾದರು.
29 ಓವರ್ಗಳ ಅಂತ್ಯಕ್ಕೆ ಭಾರತ 1 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿತ್ತು. 34 ಓವರ್ಗಳ ಅಂತ್ಯದ ವೇಳೆಗೆ ತಂಡದ ಮೊತ್ತ 160ಕ್ಕೆ ಏರಿತ್ತು. ಈ ಹಂತದಲ್ಲಿ ಆರ್ಯವೀರ್ 100 ರನ್ಗಳೊಂದಿಗೆ ಆಟವಾಡುತ್ತಿದ್ದ ಆರ್ಯ ನಂತರ 168 ಎಸೆತಗಳಲ್ಲಿ 160 ರನ್ ಗಳಿಸಿ ಔಟ್ ಆದರು.
ವಿನೂ ಮಂಕಡ್ ಟ್ರೋಫಿಯ ಫಾರ್ಮ್ ಮುಂದುವರಿಕೆ : 19 ವರ್ಷದ ಆರ್ಯವೀರ್ ಇತ್ತೀಚೆಗೆ ನಡೆದ ವಿನೂ ಮಂಕಡ್ ಟ್ರೋಫಿಯಲ್ಲಿಯೂ ಗಮನಾರ್ಹ ಪ್ರದರ್ಶನ ನೀಡಿದ್ದರು. ಚಂಡೀಗಢ ವಿರುದ್ಧದ ಪಂದ್ಯದಲ್ಲಿ 143 ಎಸೆತಗಳಲ್ಲಿ 173 ರನ್ ಗಳಿಸಿದ್ದರು. ಇದೇ ಉತ್ತಮ ಫಾರ್ಮ್ ಅನ್ನು ಏಷ್ಯಾಕಪ್ನಲ್ಲಿಯೂ ಮುಂದುವರಿಸಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಟೂರ್ನಿಯಲ್ಲಿ ಇದಕ್ಕೂ ಮೊದಲು ಅರ್ಧಶತಕ ಗಳಿಸಿದ್ದ ಅವರು, ಇದೀಗ ಯುಎಇ ವಿರುದ್ಧ ಶತಕ ಬಾರಿಸುವ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.
ಭಾರತದ ಸೆಮಿಫೈನಲ್ ಹಾದಿಗೆ ಮಹತ್ವದ ಪಂದ್ಯ : ಈ ಪಂದ್ಯ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನೇಪಾಳ ವಿರುದ್ಧ 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ್ದ ಭಾರತ, ನಂತರ ಪಾಕಿಸ್ತಾನ ವಿರುದ್ಧ ಮೂರು ವಿಕೆಟ್ಗಳ ಸೋಲು ಕಂಡಿತ್ತು. ಹೀಗಾಗಿ ಯುಎಇ ವಿರುದ್ಧದ ಅಂತಿಮ ಗ್ರೂಪ್ ಪಂದ್ಯದಲ್ಲಿ ಗೆಲುವು ಸಾಧಿಸುವುದು ಸೆಮಿಫೈನಲ್ ಪ್ರವೇಶದ ದೃಷ್ಟಿಯಿಂದ ನಿರ್ಣಾಯಕವಾಗಿದೆ. ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್ಗೆ ಅರ್ಹತೆ ಪಡೆಯಲಿವೆ.
- ವಿಜ್ಞಾನದಿಂದಲೇ ಶಾಂತಿ, ಸಮೃದ್ಧಿಯ ಹಾದಿ: ಇಂದು ವಿಶ್ವ ವಿಜ್ಞಾನ ದಿನ – 2026ರ ಘೋಷವಾಕ್ಯವೇನು?
- ಸೆಹ್ವಾಗ್ ಪುತ್ರ ಆರ್ಯವೀರ್ ಅಬ್ಬರ: UAE ವಿರುದ್ಧ ಭರ್ಜರಿ ಶತಕ
- ತಲೆ ಮೇಲೆ ರುಬ್ಬುಗುಂಡು ಎತ್ತಿಹಾಕಿ ಯುವಕನ ಬರ್ಬರ ಹತ್ಯೆ
- 13 ವರ್ಷಗಳ ದಾಂಪತ್ಯ ಅಂತ್ಯ: ಬೇರೆಯಾಗಲು ಪವನ್ ಕಲ್ಯಾಣ್ ದಂಪತಿ ನಿರ್ಧಾರ!
- ಸ್ಮಾರ್ಟ್ ಸಿಟಿಗೆ ಸ್ಮಾರ್ಟ್ ಪ್ರಯಾಣ: ಸಾರ್ವಜನಿಕ ಸಾರಿಗೆಯ ಅವಶ್ಯಕತೆ






















