SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಕೋಟೆನಗರಿ ದೀಪಾವಳಿಯ ಕಳೆ ಹೆಚ್ಚಿಸುವ ಕ್ವಾಟಿ..!

ಕೋಟೆನಗರಿ ದೀಪಾವಳಿಯ ಕಳೆ ಹೆಚ್ಚಿಸುವ ಕ್ವಾಟಿ..!

0
16

ಅಭಯ ಮನಗೂಳಿ
ದೀಪಾವಳಿ ಶುಭ ಸಂದರ್ಭದಲ್ಲಿ ಹೆಣ್ಣುಮಕ್ಕಳಿಗೆ ದಿನಕ್ಕೊಂದು ವೇಷಭೂಷಣ ಹಾಕಿ ಹಾಡು ಹಾಡುತ್ತ ನಗರ ಸಂಕೀರ್ತನೆ ಮಾಡುವ ವೈಶಿಷ್ಟ್ಯತೆಯನ್ನು ಈ ಕ್ವಾಟಿ ಹೊಂದಿದೆ. ಮನೆಯಲ್ಲಿ ಗೌರಿ ಸಹಿತ ಗೊಂಬೆಗಳನ್ನು ಕೂರಿಸಿ ದಕ್ಷಿಣ ಕರ್ನಾಟಕದಲ್ಲಿ ದಸರಾ ಸಂದರ್ಭದಲ್ಲಿ ಸಿಂಗರಿಸುವಂತೆ ಅಲಂಕಾರ ಮಾಡುವುದು. ಪ್ರತಿನಿತ್ಯ ನದಿಗೆ ಬಸವಣ್ಣನನ್ನು ಹೊಯ್ದು ಪೂಜಿಸುವುದು ನಂತರ ಕಿಲ್ಲಾ ಓಣಿ ಸುತ್ತಲೂ ಯುವತಿಯರು ಭಜನೆ, ಕೋಲಾಟ ಆಡುತ್ತ ಹೆಜ್ಜೆ ಹಾಕುವುದು ಇದರ ವಿಶೇಷ. ಪುಟ್ಟ ಹಣ್ಣುಮಕ್ಕಳಿಗೆ ರಾಮ, ಕೃಷ್ಣ, ಮೋಹಿನಿ ಸೇರಿದಂತೆ ದಿನಕ್ಕೊಂದು ಅವತಾರ ಹಾಕಲಾಗುತ್ತದೆ.

ಒಂದು ಕಾಲದಲ್ಲಿ ಅತ್ಯಂತ ವೈಭವಯುತವಾಗಿ ಈ ಕ್ವಾಟಿ ನಡೆಸಲಾಗುತಿತ್ತು. ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ನಗರ ಭಾಗಶಃ ಮುಳುಗಡೆ ನಂತರ ಇದು ಬಹುಪಾಲು ಕಣ್ಮರೆ ಆಗಿದೆ. ಆದರೆ ಕಿಲ್ಲಾ ಓಣಿಯ ಭಾರತಿ ಕಟ್ಟಿ ಅವರು ಮಾತ್ರ ಇದನ್ನು ಜೀವಂತವಾಗಿಡುವ ಕೆಲಸ ಮಾಡುತ್ತಿದ್ದಾರೆ. 10 ದಿನಗಳ ಕಾಲವೂ ಸಂಜೆ ಮಹಿಳೆಯರು, ಯುವತಿಯರು ಸೇರಿ ಕ್ವಾಟಿ ನಡೆಸಿಕೊಂಡು ಬರುತ್ತಿದ್ದಾರೆ.

ಮಹಿಳೆಯರಿಗಾಗಿ ರೂಪುಗೊಂಡ ಪರಂಪರೆ: ಸನಾತನ ಧರ್ಮದ ಬಹುಪಾಲು ಹಬ್ಬಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಮಹಿಳೆಯರನ್ನು ಪೂಜ್ಯ ಭಾವದಿಂದ ಕಾಣುವ ಸಮಾಜವಿದ್ದರೆ ಅದು ಭಾರತೀಯ ಅದರಲ್ಲೂ ಹಿಂದೂ ಸಮಾಜ ಎಂಬುದನ್ನು ಒಪ್ಪಿಕೊಳ್ಳಬೇಕು ಎನ್ನುತ್ತಾರೆ ಭಾರತಿ ಕಟ್ಟಿ.

ಕ್ವಾಟಿ ಹಾಕುವ ಸಂಕೀರ್ತನೆ ತೆರಳುವ ವಿಚಾರದಲ್ಲಿ ಪುರುಷರಿಗೆ ಕೆಲಸವಿಲ್ಲ. ಇಲ್ಲಿ ಎಲ್ಲವೂ ಮಹಿಳೆಯರೇ ನಡೆಸಿಕೊಂಡು ಬರುತ್ತಾರೆ. ಅದರಲ್ಲೂ ಸಮಾಜದ ಚಿಕ್ಕವಯಸ್ಸಿನ ಹೆಣ್ಣುಮಕ್ಕಳನ್ನು ಕೇಂದ್ರೀಕರಿಸಿಕೊಂಡು ಬರುತ್ತಿರುವ ಈ ಆಚರಣೆಯ ಮೂಲಕ ಅವರಲ್ಲಿ ಸಂಸ್ಕೃತಿ, ಪರಂಪರೆಯ ಮಹತ್ವ ತಿಳಿಸಿಕೊಡುವ ಅದರ ಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನವೂ ಇದೆ. ಈ ಬಾರಿಯೂ ಗುರುವಾರದಿಂದಲೇ ಆಚರಣೆ ಶುರುವಾಗಿದ್ದು, ಹರಿದಾಸರ ಕೀರ್ತನೆಗಳನ್ನು ಭಜಿಸುತ್ತ ಮಹಿಳೆಯರು ಕೋಲಾಟ ಆಡುತ್ತ ಸಂಭ್ರಮ ಪಡುತ್ತ ತೆರಳುತ್ತಾರೆ. ಈ ಆಚರಣೆಯನ್ನು ಕಣ್ತುಂಬಿಕೊಳ್ಳುವುದೇ ಒಂದು ಅದೃಷ್ಟ ಎನ್ನಬಹುದು. ಸಾಂಸ್ಕೃತಿಕ ಗರಿಮೆಯನ್ನು ಸಾರುವ ಇಂಥ ಆಚರಣೆಗಳು ನಶಿಸಿ ಹೋಗದಂತೆ ಕಾಪಾಡಬೇಕಿದೆ.

ಉಳಿದ ಊರಿಗೆ ಹೋಲಿಕೆ ಮಾಡಿದರೆ ಇಲ್ಲಿನ ಆಚರಣೆಗಳು ಆಧುನಿಕ ಭರಾಟೆಯಲ್ಲಿ ನಿಂತು ಹೋಗಿಲ್ಲ. ಇಲ್ಲಿನ ಸಾಂಸ್ಕೃತಿಕ, ಪಾರಂಪರಿಕ ಆಚರಣೆಗಳನ್ನು ನುಂಗಿ ಹಾಕಿದ್ದೆ ಮುಳುಗಡೆ. ಕೇವಲ ಆಚರಣೆಗಳನ್ನಷ್ಟೇ ಅಲ್ಲ ಇಲ್ಲಿನ ಜನರ ಬದುಕನ್ನೇ ಈ ಮುಳುಗಡೆ ಮೂರಾಬಟ್ಟೆ ಮಾಡಿದೆ. ಇಲ್ಲಿನ ಸಂತ್ರಸ್ತರ ತ್ಯಾಗ್ಯಕ್ಕೆ ಬೆಲೆ ಇಲ್ಲದಂತಾಗಿದೆ. ಅಂಥ ಮುಳುಗಡೆಯಲ್ಲಿ ನಶಿಸಿಹೋಗಿರುವುದರಲ್ಲಿ ಈ ಕ್ವಾಟಿಯೂ ಒಂದು. ಕೋಟೆಯನ್ನು ಮರಳಿ ಕಟ್ಟುವುದರ ಜತೆಗೆ ಕ್ವಾಟಿಯಂಥ ಸಾಂಸ್ಕೃತಿಕ ಶ್ರೀಮಂತಿಕೆಯನ್ನೂ ಕಟ್ಟಿಕೊಡುವ ಕೆಲಸವಾಗಬೇಕಿದೆ.

ಕಿಲ್ಲಾ ರಾಯರ ಮಠದ ಅರ್ಚಕರು ಮುರಳಿ ಆಚಾರ್ಯ ಕಿರೇಸೂರ ಅವರು ಮಾತನಾಡಿ, “ಚಿಕ್ಕಂದಿನಿಂದಲೂ ಕ್ವಾಟಿ ನೋಡುತ್ತ ಬಂದಿದ್ದೇನೆ. ಕಿಲ್ಲಾದಲ್ಲಿ ಭಾರತಿ ಕಟ್ಟಿ ಅವರನ್ನು ಬಿಟ್ಟು ಈಗ ಯಾರೂ ಮಾಡುತ್ತಿಲ್ಲ. ಈ ಕಲೆ ಮುಂದುವರಿಯಬೇಕು. ಹೊಸಪೀಳಿಗೆಗೆ ಈ ವಿಷಯ ತಿಳಿಯಬೇಕು. ಕೃಷ್ಣ, ರಾಮನ ಅವತಾರ, ಕೊನೆಯ ದಿನ ಮಕ್ಕಳಿಗೆ ಭಾರತ ಮಾತೆಯ ಅವತಾರ ಹಾಕುವುದು ವಿಶೇಷ. ಈ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಭಾರತಿ ಕಟ್ಟಿ ಅವರನ್ನು ಸಮಾಜ ಗುರುತಿಸುವ ಕೆಲಸ ಮಾಡಬೇಕು” ಎಂದಿದ್ದಾರೆ.

ಕ್ವಾಟಿ ಸಂಘಟಕರಾದ ಭಾರತಿ ಕಟ್ಟಿ ಮಾತನಾಡಿ, “50 ವರ್ಷದಿಂದಲೂ ನಾನು ಕ್ವಾಟಿ ಹಾಕುವ ಪರಂಪರೆ ನಿಲ್ಲಿಸದೆ ಮುಂದುವರಿಸಿಕೊಂಡು ಬಂದಿದ್ದೇನೆ. ಮೊದಲು ಕ್ವಾಟಿಗೆ ಎಲ್ಲಿಲ್ಲದ ಮಹತ್ವವಿತ್ತು. ಜನರು ಇದನ್ನು ನೋಡಲು ಆಗಮಿಸುತ್ತಿದ್ದರು. ಆದರೆ ಮುಳುಗಡೆ ನಂತರ ಕಿಲ್ಲಾ ಓಣಿಯೇ ಕಳೆ ಕಳೆದುಕೊಂಡಿದ್ದು, ಅದರಲ್ಲಿ ಕ್ವಾಟಿಯೂ ಕಣ್ಮರೆ ಆಗುತ್ತ ಬಂದಿತು. ಅತ್ಯಂತ ಮಹತ್ವಪೂರ್ಣ ಸಂದೇಶವುಳ್ಳ ಈ ಕ್ವಾಟಿ ಮುಂದುವರಿಯಬೇಕಿದೆ” ಎಂದರು.