ಗಣೇಶ್ ರಾಣೆಬೆನ್ನೂರು
ನನ್ನ ಹೃದಯ ಇದಕ್ಕೆ ಹಾಕಿದ್ದೇನೆ ಎಂದರು ನಟ ಅಜೇಯ್ ರಾವ್. ಅವರು ಹೀಗೆ ಹೃದಯ ದಾನ ಮಾಡಿರುವುದು ಪಾರ್ಟ್ನರ್ ಎಂಬ ಸಿನಿಮಾಕ್ಕೆ. ಹೀಗೆ ಮುಕ್ತವಾಗಿ ತಮ್ಮ ಹೃದಯವನ್ನು ಪಾರ್ಟ್ನರ್ ಸಿನಿಮಾಗೆ ವಿನಿಯೋಗಿಸಿರುವ ಅಜೇಯ್, ಅದಕ್ಕೆ ಕಾರಣವನ್ನೂ ತಿಳಿಸಿದರು. ʻಒಂದು ಸಿನಿಮಾ ಮನಸ್ಸಿಗೆ ಹತ್ತಿರವಾದರಷ್ಟೇ ಅದಕ್ಕೆ ಪೂರಕವಾದ ಪಬ್ಲಿಸಿಟಿ ಮಾಡಬಹುದು. ಚಿತ್ರತಂಡದ ಜೊತೆ ನಿಲ್ಲಬಹುದುʼ ಎಂದರು.
ಅದಕ್ಕೆ ಬಲವಾದ ಕಾರಣವೂ ಇದೆ. ಇತ್ತೀಚೆಗೆ ತೆರೆಕಂಡ ಅವರ ರಾಧೇಯ ಹಾಗೂ ಸರಳ ಸುಬ್ಬರಾವ್ ಸಿನಿಮಾಗಳು ನಿರೀಕ್ಷಿಸಿದ ಯಶಸ್ಸು ಕಾಣಲಿಲ್ಲ. ಅದರ ಕುರಿತಾಗಿ ಎಲ್ಲೂ ಮಾತನಾಡದ ಅಜೇಯ್, ಈಗ ತುಟಿ ಬಿಚ್ಚಿದ್ದಾರೆ. `ಆರಂಭದಲ್ಲಿ ಗೋಲ್ಡ್ ಎಂದು ನಂಬಿಸಿ ನನ್ನ ಬಳಿ ಬರುತ್ತಾರೆ. ಅದನ್ನು ಧರಿಸಿದ ಮೇಲಷ್ಟೇ ರೋಲ್ಡ್ ಗೋಲ್ಡ್ ಎಂದು ತಿಳಿಯುತ್ತದೆ. ಹೀಗಾಗಿ ಅಂಥ ಸಿನಿಮಾಗಳ ಕುರಿತು ನಾನೆಲ್ಲೂ ಮಾತನಾಡುವುದಕ್ಕೆ ಹೋಗುವುದಿಲ್ಲ. ಯಾಕೆಂದರೆ ನಾನೊಬ್ಬ ಒಳ್ಳೆ ಸೇಲ್ಸ್‌ಮ್ಯಾನ್. ಯಾವುದನ್ನೂ ಬೇಕಾದರೂ ವ್ಯಾಪಾರ ಮಾಡಬಲ್ಲೆ ಎಂದುಕೊಂಡು ನನ್ನ ಬಳಿ ಬರುತ್ತಾರೆ. ಆದರೆ ನನ್ನನ್ನು ನಂಬಿದ ಗೃಆಹಕರಿಗೆ (ಪ್ರೇಕ್ಷಕರಿಗೆ) ಮೋಸ ಮಾಡಲು ಇಷ್ಟವಿಲ್ಲ. ಹೀಗಾಗಿ ಆ ರೀತಿಯ ಸಿನಿಮಾ ಪಬ್ಲಿಸಿಟಿ ವಿಚಾರದಲ್ಲಿ ದೂರವೇ ಉಳಿದುಬಿಡ್ತೀನಿ’ ಎಂದು ಕಡ್ಡಿ ತುಂಡಾದಂತೆ ಮಾತನಾಡುತ್ತಾರೆ ಅಜೇಯ್.
ಹಿಂದಿನ ಸಿನಿಮಾಗಳ ಸೋಲಿನಿಂದ ಪಾಠ ಕಲಿತಿರುವ ಅಜೇಯ್, ಇನ್ನು ಮುಂದೆ ಎಚ್ಚರಿಕೆಯಿಂದ ಹೆಜ್ಜೆ ಇಡುವುದಾಗಿ ತೀರ್ಮಾನಿಸಿದ್ದಾರೆ. ʻಒಂದು ಸಿನಿಮಾವನ್ನು ನಾನು ಪ್ರಮೋಟ್ ಮಾಡುತ್ತಿದ್ದೇನೆ ಎಂದರೆ ಅದರ ಮೇಲೆ ನನಗೆ ನಂಬಿಕೆ ಇದೆ ಎಂದರ್ಥ. ಹೀಗಾಗಿ ಪಾರ್ಟ್ನರ್ ಸಿನಿಮಾ ಪಬ್ಲಿಸಿಟಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ಇನ್ನು ಮುಂದೆ ಇದೇ ನನ್ನ ಪಾಲಿಸಿʼ ಎನ್ನುತ್ತಾರೆ.
ನಟ ಅಜೇಯ್ ರಾವ್ ಅಭಿನಯಿಸಿರುವ ಪಾರ್ಟ್ನರ್ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ತಮ್ಮ ತನು-ಮನ-ಧನವನ್ನು ಸಂಪೂರ್ಣವಾಗಿ ವಿನಿಯೋಗಿಸಿರುವ ಅಜೇಯ್, ಪಾರ್ಟ್ನರ್ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.






















