ಗದಗ: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳ ಜನನ ಪ್ರಮಾಣವೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ವೈದ್ಯರು ಕಳ್ಳಾಟದಿಂದ ಕಾನೂನುಬಾಹಿರವಾಗಿ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ನಡೆಸುತ್ತಿದ್ದಾರೆಯೇ? ಎಂಬುದನ್ನು ಪತ್ತೆ ಮಾಡಲು ರಾಜ್ಯ ಆರೋಗ್ಯ ಇಲಾಖೆ ಆಯುಕ್ತರಿಗೆ ಸೂಚಿಸುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದರು.
ಗದಗನಲ್ಲಿ ಶುಕ್ರವಾರ ಜಿಲ್ಲಾಸ್ಪತ್ರೆ, ವಿವಿಧ ಸರಕಾರಿ ವಸತಿ ನಿಲಯಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದ ಆಸ್ಪತ್ರೆಗಳಲ್ಲಿ ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳ ಜನನ ಪ್ರಮಾಣವೇ ಹೆಚ್ಚಾಗುತ್ತಿದೆ. ಇದು ನೈಸರ್ಗಿಕ ನಿಯಮಕ್ಕೆ ವಿರುದ್ಧವಾಗಿ ಲಿಂಗಾನುಪಾತದಲ್ಲಿ ವ್ಯತ್ಯಾಸ ಕಾಣಿಸುತ್ತಿದೆ. ಇದು ಅತ್ಯಂತ ಗಂಭೀರ ವಿಷಯ. ಇದು ಕಾನೂನು ಬಾಹಿರವಾಗಿ ಒಳಗೊಳಗೇ ʻಲಿಂಗ ಪತ್ತೆʼ ಹಾಗೂ ʻಹೆಣ್ಣು ಭ್ರೂಣ ಹತ್ಯೆʼ ನಡೆಯುತ್ತಿರುವುದರ ಸೂಚಕವಾಗಿದೆ. ಇದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಕಂಡು ಬಂದಿದೆ. ಇದರಿಂದಾಗಿಯೇ ರಾಜ್ಯದಲ್ಲಿ ಲಿಂಗಾನುಪಾತ ವ್ಯತ್ಯಾಸವಾಗುತ್ತಿರಬಹುದೆಂಬ ಆತಂಕ ವ್ಯಕ್ತಪಡಿಸಿದರು. ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತರಿಗೆ ಸೂಚಿಸುವುದಾಗಿ ಹೇಳಿದರು.
ಜಿಲ್ಲೆಗಳಲ್ಲಿ ಲಿಂಗಾನುಪಾತದಲ್ಲಿ ವ್ಯತ್ಯಾಸವಾಗುತ್ತಿರುವ ಬಗ್ಗೆ ಆಯಾ ಜಿಲ್ಲೆಗಳ ಆರೋಗ್ಯಾಧಿಕಾರಿಗಳು, ಇದನ್ನು ತಡೆಯಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರತ್ಯೇಕವಾಗಿ ಸಮಗ್ರ ವರದಿ ಪಡೆಯಲಾಗುವುದೆಂದು ತಿಳಿಸಿದರು.
ಜಿಲ್ಲಾಸ್ಪತ್ರೆಗಳಲ್ಲಿ ʻಡಿʼ ಗ್ರೂಪ್ ಮತ್ತು ಹೊರಗುತ್ತಿಗೆ ನೌಕರರಿಗೆ ಸಮವಸ್ತ್ರ ಸೇವಾ ಭದ್ರತೆ ಹಾಗೂ ಪರಿಷ್ಕೃತ ಕನಿಷ್ಠ ವೇತನ ನೀಡುವಂತೆ ಕಾನೂನು ರೂಪಿಸಿದರೂ ಸಹ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಈ ಬಗ್ಗೆ ಕೂಡಲೇ ಸೇವಾ ಭದ್ರತೆ, ಪರಿಷ್ಕೃತ ಕನಿಷ್ಠ ವೇತನ ದೊರೆಯುವಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಮಹಿಳಾ ನೌಕರರಿಗೆ ʻಋತುಚಕ್ರ ರಜೆʼ ನೀಡುವ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಸ್ಪಷ್ಟೀಕರಣ ಕೇಳಲಾಗಿದ್ದು, ಎಲ್ಲಾ ಮಹಿಳೆಯರಿಗೂ ಇದು ಅನ್ವಯವಾಗುವಂತೆ ಸರ್ಕಾರದ ಮಟ್ಟದಲ್ಲಿ ಕ್ರಮ ವಹಿಸಲಾಗುವುದೆಂದು ಹೇಳಿದರು.






















