SK Home Ad
Home ಸಿನಿ ಮಿಲ್ಸ್ ರಜನಿಕಾಂತ್ 173ನೇ ಸಿನಿಮಾಗೆ ‘ಧರ್ಮನ್’ ಹೆಸರು ಫಿಕ್ಸ್!

ರಜನಿಕಾಂತ್ 173ನೇ ಸಿನಿಮಾಗೆ ‘ಧರ್ಮನ್’ ಹೆಸರು ಫಿಕ್ಸ್!

0
89

ಚೆನ್ನೈ: ದಕ್ಷಿಣ ಭಾರತೀಯ ಚಿತ್ರರಂಗದ ದಿಗ್ಗಜ ನಟ ರಜನಿಕಾಂತ್ ಅವರ ಬಹುನಿರೀಕ್ಷಿತ 173ನೇ ಚಿತ್ರಕ್ಕೆ ಕೊನೆಗೂ ಅಧಿಕೃತವಾಗಿ ‘ಧರ್ಮನ್’ ಎಂಬ ಶೀರ್ಷಿಕೆಯನ್ನು ಘೋಷಿಸಲಾಗಿದೆ. ವಿಶೇಷವೆಂದರೆ, ಈ ಚಿತ್ರವನ್ನು ಮತ್ತೋರ್ವ ಸೂಪರ್‌ಸ್ಟಾರ್ ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ ಇಂಟರ್‌ನ್ಯಾಷನಲ್ (ಆರ್‌ಕೆಎಫ್‌ಐ) ಸಂಸ್ಥೆ ನಿರ್ಮಿಸುತ್ತಿದ್ದು, ಈ ಘೋಷಣೆ ಸಿನಿರಸಿಕರಲ್ಲಿ ಅಪಾರ ಕುತೂಹಲ ಮೂಡಿಸಿದೆ.

ಕಳೆದ ಕೆಲವು ತಿಂಗಳುಗಳಿಂದ ಈ ಚಿತ್ರದ ನಿರ್ದೇಶಕರು ಯಾರು ಎಂಬುದರ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿದ್ದು, ಕೊನೆಗೂ ‘ಡ್ರ್ಯಾಗನ್’ ಖ್ಯಾತಿಯ ನಿರ್ದೇಶಕ ಅಶ್ವಥ್ ಮಾರಿಮುತ್ತು ಈ ಮಹತ್ವಾಕಾಂಕ್ಷಿ ಯೋಜನೆಗೆ ಆಕ್ಷನ್-ಕಟ್ ಹೇಳಲಿದ್ದಾರೆ ಎಂಬುದು ಖಚಿತವಾಗಿದೆ. ಕಾಲಿವುಡ್‌ನ ಇಬ್ಬರು ದಿಗ್ಗಜರಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರೊಂದಿಗೆ ಏಕಕಾಲದಲ್ಲಿ ಕೆಲಸ ಮಾಡುವ ಅಪರೂಪದ ಅವಕಾಶ ಅಶ್ವಥ್ ಅವರಿಗೆ ದೊರೆತಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ED ರೈಡ್: ಅಬಕಾರಿ ಹೆಚ್ಚುವರಿ ಆಯುಕ್ತರ ನಿವಾಸ ಸೇರಿ 6 ಕಡೆ ದಾಳಿ

ಚಿತ್ರದ ಪೂಜಾ ಸಮಾರಂಭ ಇಂದು ನೆರವೇರಿದ್ದು, ಇದರೊಂದಿಗೆ ಯೋಜನೆಗೆ ಅಧಿಕೃತ ಚಾಲನೆ ದೊರೆತಿದೆ. ನಿರ್ದೇಶಕ ಅಶ್ವಥ್ ಮಾರಿಮುತ್ತು ಅವರು ನಾಳೆಯಿಂದಲೇ ನಿಯಮಿತ ಚಿತ್ರೀಕರಣ ಆರಂಭವಾಗಲಿದೆ ಎಂದು ದೃಢಪಡಿಸಿದ್ದಾರೆ.

ಚಿತ್ರದ ಮತ್ತೊಂದು ವಿಶೇಷವೆಂದರೆ, ಐದು ದಶಕಗಳಿಗೂ ಹೆಚ್ಚು ಕಾಲದ ತಮ್ಮ ಸಿನಿ ಪಯಣದಲ್ಲಿ ರಜನಿಕಾಂತ್ ಮೊದಲ ಬಾರಿಗೆ ವೈದ್ಯರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದುವರೆಗೆ ಹಲವಾರು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ತಲೈವರ್, ಇದೀಗ ವೈದ್ಯನಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ: ‘ಮದರ್ ಪ್ರಾಮಿಸ್’ ಜುಲೈ 10ಕ್ಕೆ ಬರುತ್ತೇವೆ ಎಂದ ಡಾಲಿ ಟೀಮ್

ಚಿತ್ರದ ಕಥಾಹಂದರ ಕುರಿತು ಹಲವು ಊಹಾಪೋಹಗಳು ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ, ನಿರ್ದೇಶಕ ಅಶ್ವಥ್ ಮಾರಿಮುತ್ತು ಸ್ಪಷ್ಟನೆ ನೀಡಿದ್ದಾರೆ. ತಮಿಳುನಾಡಿನಲ್ಲಿ ಪ್ರಸಿದ್ಧರಾಗಿರುವ ‘ರೂ.5 ಡಾಕ್ಟರ್’ ಅವರ ಜೀವನಾಧಾರಿತ ಕಥೆಯೇ ‘ಧರ್ಮನ್’ ಎಂದು ಹರಿದಾಡುತ್ತಿದ್ದ ವದಂತಿಗಳನ್ನು ಅವರು ತಳ್ಳಿಹಾಕಿದ್ದಾರೆ.

“ಇದು ಯಾವುದೇ ನೈಜ ವ್ಯಕ್ತಿಯ ಜೀವನಾಧಾರಿತ ಸಿನಿಮಾ ಅಲ್ಲ. ರಜನಿಕಾಂತ್ ಅವರು ಸ್ವಾಭಿಮಾನ, ವ್ಯಕ್ತಿತ್ವ ಮತ್ತು ವಿಶಿಷ್ಟ ಶೈಲಿಯಿಂದ ಪ್ರೇಕ್ಷಕರನ್ನು ರಂಜಿಸುವ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಕುಟುಂಬದ ಎಲ್ಲಾ ಸದಸ್ಯರು ಆಸ್ವಾದಿಸಬಹುದಾದ ಮನರಂಜನಾ ಥ್ರಿಲ್ಲರ್ ಆಗಿರಲಿದೆ” ಎಂದು ಅಶ್ವಥ್ ಹೇಳಿದ್ದಾರೆ.

ಇದನ್ನೂ ಓದಿ: ಆಗಸ್ಟ್ 7 ಕ್ಕೆ ‘ಅಯೋಗ್ಯ 2’ ರಾಜ್ಯಾದ್ಯಂತ ಗ್ರಾಂಡ್ ರಿಲೀಸ್

ಚಿತ್ರದಲ್ಲಿ ನಟಿಯರಾದ ರಾಶಿ ಖನ್ನಾ ಮತ್ತು ಸಿಮ್ರಾನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಯುವ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಹಾಗೂ ಟರ್ಮರಿಕ್ ಮೀಡಿಯಾ ಸಂಸ್ಥೆಗಳು ಜಂಟಿಯಾಗಿ ಚಿತ್ರವನ್ನು ನಿರ್ಮಿಸುತ್ತಿವೆ.

ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ಸಹಯೋಗದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಅಭಿಮಾನಿಗಳಲ್ಲಿ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ‘ಧರ್ಮನ್’ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ವಿಶ್ವಾಸ ಸಿನಿಪ್ರೇಮಿಗಳಲ್ಲಿದೆ.