SK Home Ad
Home ಸುದ್ದಿ ದೇಶ ಅಗ್ನಿ ಅವಘಡ: ಉದ್ಯೋಗ ಭವನ ಬಳಿ 200ಕ್ಕೂ ಅಧಿಕ ಶೆಡ್‌ಗಳು ಭಸ್ಮ!

ಅಗ್ನಿ ಅವಘಡ: ಉದ್ಯೋಗ ಭವನ ಬಳಿ 200ಕ್ಕೂ ಅಧಿಕ ಶೆಡ್‌ಗಳು ಭಸ್ಮ!

0
38

ದೆಹಲಿ ಉದ್ಯೋಗ ಭವನ ಸಮೀಪ ಬೆಂಕಿ ದುರಂತ; ಕಾರ್ಮಿಕರ 200ಕ್ಕೂ ಹೆಚ್ಚು ಶೆಡ್‌ಗಳು ಸುಟ್ಟು ಕರಕಲು – ಮುಂಜಾನೆವರೆಗೂ ಕಾರ್ಯಾಚರಣೆ

ನವದೆಹಲಿ: ರಾಷ್ಟ್ರೀಯ ರಾಜಧಾನಿ ನವದೆಹಲಿಯ ಉದ್ಯೋಗ ಭವನ ಸಮೀಪ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 200ಕ್ಕೂ ಅಧಿಕ ತಾತ್ಕಾಲಿಕ ಟಿನ್-ಶೆಡ್‌ಗಳು ಸಂಪೂರ್ಣ ಭಸ್ಮವಾಗಿವೆ. ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಡಿ ಉದ್ಯೋಗ ಭವನವನ್ನು ಕೆಡವುವ ಕಾಮಗಾರಿ ನಡೆಯುತ್ತಿದ್ದು, ಅಲ್ಲಿನ ಕಟ್ಟಡ ಕಾರ್ಮಿಕರು ಈ ಶೆಡ್‌ಗಳಲ್ಲಿ ವಾಸಿಸುತ್ತಿದ್ದರು.

ದೆಹಲಿ ಅಗ್ನಿಶಾಮಕ ಸೇವೆ (ಡಿಎಫ್‌ಎಸ್) ಅಧಿಕಾರಿಗಳ ಪ್ರಕಾರ, ಬುಧವಾರ ನಸುಕಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಉದ್ಯೋಗ ಭವನದ ಸಮೀಪದ ತಾತ್ಕಾಲಿಕ ವಸತಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ಲಭಿಸಿತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು.

ಆದರೆ, ಕಾರ್ಮಿಕರ ಶೆಡ್‌ಗಳು ಅತ್ಯಂತ ದಟ್ಟಣೆಯಿಂದ ಕೂಡಿದ್ದ ಕಾರಣ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಕವಾಗಿ ಹರಡಿತು. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ಸುಮಾರು 20 ಅಗ್ನಿಶಾಮಕ ವಾಹನಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಹಲವು ಗಂಟೆಗಳ ನಿರಂತರ ಕಾರ್ಯಾಚರಣೆಯ ಬಳಿಕ ಮುಂಜಾನೆ 5.30ರ ವೇಳೆಗೆ ಬೆಂಕಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲಾಯಿತು.

ಅಧಿಕಾರಿಗಳ ಮಾಹಿತಿ ಪ್ರಕಾರ, ಬೆಂಕಿ ಅವಘಡದಲ್ಲಿ 200ಕ್ಕೂ ಅಧಿಕ ಟಿನ್ ಶೆಡ್‌ಗಳು ಸುಟ್ಟು ಕರಕಲಾಗಿದ್ದು, ಶೆಡ್‌ಗಳಲ್ಲಿ ಇರಿಸಲಾಗಿದ್ದ ಎಲ್‌ಪಿಜಿ ಸಿಲಿಂಡರ್‌ಗಳು ಸ್ಫೋಟಗೊಂಡ ಕಾರಣ ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಯಿತು. ಇದರಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಅದೃಷ್ಟವಶಾತ್, ಈ ಭೀಕರ ಅವಘಡದಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಕಾರ್ಮಿಕರು ಸಮಯಕ್ಕೆ ಸರಿಯಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಿದ್ದರಿಂದ ಭಾರೀ ಅನಾಹುತ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ಪತ್ತೆಯಾಗಿಲ್ಲ. ಘಟನೆಯ ಕುರಿತು ತನಿಖೆ ಆರಂಭಿಸಲಾಗಿದ್ದು, ಶಾರ್ಟ್ ಸರ್ಕ್ಯೂಟ್ ಅಥವಾ ಇತರೆ ಕಾರಣಗಳಿಂದ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.