SK Home Ad
Home ಸಿನಿ ಮಿಲ್ಸ್ ಆಗಸ್ಟ್ 7 ಕ್ಕೆ ‘ಅಯೋಗ್ಯ 2’ ರಾಜ್ಯಾದ್ಯಂತ ಗ್ರಾಂಡ್ ರಿಲೀಸ್

ಆಗಸ್ಟ್ 7 ಕ್ಕೆ ‘ಅಯೋಗ್ಯ 2’ ರಾಜ್ಯಾದ್ಯಂತ ಗ್ರಾಂಡ್ ರಿಲೀಸ್

0
88

ಗಡುವಿನ ಒಂದು ವಾರ ಮುನ್ನವೇ ಬರಲಿದ್ದಾನೆ ‘ಅಯೋಗ್ಯ 2’: ಆಗಸ್ಟ್ 7 ಕ್ಕೆ ಬಿಡುಗಡೆ

ಬೆಂಗಳೂರು: ಎಂಟು ವರ್ಷಗಳ ಹಿಂದೆ ಬಿಡುಗಡೆಯಾಗಿ ಪ್ರೇಕ್ಷಕರನ್ನು ಮನರಂಜಿಸಿದ್ದ ‘ಅಯೋಗ್ಯ’ ಚಿತ್ರದ ಯಶಸ್ಸಿನ ಬಳಿಕ ನಿರ್ದೇಶಕ ಮಹೇಶ್ ಕುಮಾರ್ ಇದೀಗ ಅದರ ಸೀಕ್ವೆಲ್ ‘ಅಯೋಗ್ಯ 2’ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಹಾಗೂ ಪೋಸ್ಟರ್‌ಗಳ ಮೂಲಕ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರತಂಡ, ಇದೀಗ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.

ಈ ಮೊದಲು ಚಿತ್ರವನ್ನು ಆಗಸ್ಟ್ 14ರಂದು ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಇದೀಗ ಬಿಡುಗಡೆ ದಿನಾಂಕವನ್ನು ಬದಲಾಯಿಸಿರುವ ಚಿತ್ರತಂಡ, ಆಗಸ್ಟ್ 7ರಂದು ರಾಜ್ಯಾದ್ಯಂತ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರದ ವಿತರಣೆಯ ಹೊಣೆ ಹೊತ್ತಿದೆ.

ಇದನ್ನೂ ಓದಿ: ‘ಮದರ್ ಪ್ರಾಮಿಸ್’ ಜುಲೈ 10ಕ್ಕೆ ಬರುತ್ತೇವೆ ಎಂದ ಡಾಲಿ ಟೀಮ್

‘ಏನಮ್ಮಿ’ ಬಳಿಕ ಮತ್ತೊಂದು ಹಿಟ್ ನಿರೀಕ್ಷೆ : ಮೊದಲ ‘ಅಯೋಗ್ಯ’ ಚಿತ್ರದ ‘ಏನಮ್ಮಿ ಏನಮ್ಮಿ…’ ಹಾಡು ಸೂಪರ್ ಹಿಟ್ ಆಗಿ ಇಂದಿಗೂ ಯೂಟ್ಯೂಬ್‌ನಲ್ಲಿ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಇದೇ ಕಾರಣಕ್ಕೆ ‘ಅಯೋಗ್ಯ 2’ ಚಿತ್ರದ ಆಡಿಯೋ ಹಕ್ಕುಗಳ ಮೇಲೂ ಭಾರೀ ಬೇಡಿಕೆ ಕಂಡುಬಂದಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಸಂಸ್ಥೆ ಸುಮಾರು ₹2 ಕೋಟಿಗೆ ಖರೀದಿಸಿದೆ ಎಂದು ಚಿತ್ರತಂಡ ತಿಳಿಸಿದೆ. ಈ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

‘ಪುಟ್ ಲಕ್ಷ್ಮಿ’ ಹಾಡಿಗೆ ಉತ್ತಮ ಪ್ರತಿಕ್ರಿಯೆ : ಇತ್ತೀಚೆಗಷ್ಟೇ ಬಿಡುಗಡೆಯಾದ ‘ಪುಟ್ ಲಕ್ಷ್ಮಿ’ ಹಾಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಹಾಡಿಗೆ ಖ್ಯಾತ ಗಾಯಕ ಸಿದ್ ಶ್ರೀರಾಮ್ ಹಾಗೂ ಪೃಥ್ವಿ ಭಟ್ ಧ್ವನಿಯಾಗಿದ್ದಾರೆ. ಮೊದಲ ಚಿತ್ರದ ಸೂಪರ್ ಹಿಟ್ ‘ಏನಮ್ಮಿ’ ಹಾಡಿಗೆ ಸಾಹಿತ್ಯ ಬರೆದಿದ್ದ ಭರ್ಜರಿ ಚೇತನ್, ಈ ಹಾಡಿಗೂ ಸಾಹಿತ್ಯ ರಚಿಸಿದ್ದು, ‘ಪುಟ್ ಲಕ್ಷ್ಮಿ’ ಕೂಡ ಅದೇ ಮಟ್ಟದ ಜನಪ್ರಿಯತೆ ಗಳಿಸಲಿದೆ ಎಂಬ ವಿಶ್ವಾಸ ಚಿತ್ರತಂಡದಲ್ಲಿದೆ.

ಇದನ್ನೂ ಓದಿ: ವಿಧಾನಸಭೆಯಲ್ಲಿ ವಿಜಯ್ ಅಬ್ಬರ: ವೈರಲ್ ಆಯ್ತು ‘ಕುಟ್ಟಿ ಕಥೆ’ Video

ಡಬಲ್ ಎಂಟರ್‌ಟೈನ್ಮೆಂಟ್ ಗ್ಯಾರಂಟಿ – ಸತೀಶ್ : ಚಿತ್ರದ ಬಗ್ಗೆ ಮಾತನಾಡಿರುವ ನಟ ನೀನಾಸಂ ಸತೀಶ್, “ಎಲ್ಲಿ ಹೋದರೂ ಜನರು ಅಯೋಗ್ಯ ಚಿತ್ರದ ಸೀಕ್ವೆಲ್ ಬಗ್ಗೆ ಕೇಳುತ್ತಿದ್ದರು. ಅಂದರೆ ಮೊದಲ ಚಿತ್ರ ಜನರನ್ನು ಅಷ್ಟರ ಮಟ್ಟಿಗೆ ಮನರಂಜಿಸಿತ್ತು ಎಂಬುದಕ್ಕೆ ಅದು ಸಾಕ್ಷಿ. ಅಯೋಗ್ಯ 2 ಚಿತ್ರದಲ್ಲಿ ಡಬಲ್ ಎಂಟರ್‌ಟೈನ್ಮೆಂಟ್ ಸಿಗಲಿದೆ” ಎಂದು ಹೇಳಿದ್ದಾರೆ.

ಮತ್ತೆ ಒಂದಾದ ಸತೀಶ್-ರಚಿತಾ ಜೋಡಿ : ಅಯೋಗ್ಯ 2 ಚಿತ್ರದ ಮತ್ತೊಂದು ವಿಶೇಷವೆಂದರೆ ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಜೋಡಿ ಮತ್ತೆ ಒಂದಾಗಿರುವುದು. ಮೊದಲ ಚಿತ್ರದಂತೆ ಈ ಜೋಡಿಯ ಕೆಮಿಸ್ಟ್ರಿಯೂ ಪ್ರೇಕ್ಷಕರನ್ನು ರಂಜಿಸಲಿದೆ ಎಂಬ ನಿರೀಕ್ಷೆ ಮೂಡಿದೆ. ಚಿತ್ರದಲ್ಲಿ ಶಿವರಾಜ್ ಕೆ.ಆರ್. ಪೇಟೆ, ಮಂಜು ಪಾವಗಡ ಹಾಗೂ ಕಿರಣ್ ನಾಯ್ಕ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: IPL ಮಹತ್ವದ ವಹಿವಾಟು: ಪಂತ್-ಕುಲದೀಪ್ ತಂಡ ಬದಲಾವಣೆ

ತಾಂತ್ರಿಕ ಬಳಗ : ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ನೀಡಿದ್ದು, ನಿರ್ದೇಶಕ ಮಹೇಶ್ ಕುಮಾರ್ ಆಕ್ಷನ್-ಕಾಮಿಡಿ ಕಥಾಹಂದರದೊಂದಿಗೆ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಮುನೇಗೌಡ ಚಿತ್ರವನ್ನು ನಿರ್ಮಿಸಿದ್ದಾರೆ. ಮೊದಲ ಚಿತ್ರದ ಯಶಸ್ಸನ್ನು ಮೀರಿಸುವ ವಿಶ್ವಾಸದೊಂದಿಗೆ ಚಿತ್ರತಂಡ ಅಯೋಗ್ಯ 2 ಅನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದು, ಆಗಸ್ಟ್ 7ರಂದು ಚಿತ್ರಮಂದಿರಗಳಲ್ಲಿ ಚಿತ್ರದ ಅದೃಷ್ಟ ಪರೀಕ್ಷೆ ನಡೆಯಲಿದೆ.