Home Advertisement
Home ಕ್ರೀಡೆ 80 ಸಾವಿರ ಆಸನಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಚಾಲನೆ

80 ಸಾವಿರ ಆಸನಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಚಾಲನೆ

0
120

ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ:80 ಸಾವಿರ ಆಸನ ವ್ಯವಸ್ಥೆ ಸಮಗ್ರ ಅಭಿವೃದ್ಧಿಗೆ ಹೊಸ ದಿಕ್ಕು ಎಂದ CM

ಬೆಂಗಳೂರು ಸಮೀಪದ ಸೂರ್ಯನಗರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದು, ರಾಜ್ಯದ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಇದು ಮಹತ್ವದ ಮೈಲಿಗಲ್ಲಾಗಲಿದೆ ಎಂದು ಹೇಳಿದ್ದಾರೆ. ಸುಮಾರು 80 ಸಾವಿರ ಆಸನ ಸಾಮರ್ಥ್ಯದ ಈ ಕ್ರೀಡಾಂಗಣ ರಾಜ್ಯದ ಎರಡನೇ ಅತಿ ದೊಡ್ಡ ಕ್ರೀಡಾಂಗಣವಾಗಲಿದ್ದು, ಕ್ರೀಡೆ, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಸೂರ್ಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ, ಇದುವರೆಗೆ ವಸತಿ ನಿರ್ಮಾಣಕ್ಕೆ ಸೀಮಿತವಾಗಿದ್ದ ಕರ್ನಾಟಕ ಗೃಹ ಮಂಡಳಿ (KHB) ಇದೀಗ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವುದು ದೂರದೃಷ್ಟಿಯ ನಿರ್ಧಾರವಾಗಿದೆ ಎಂದು ಶ್ಲಾಘಿಸಿದರು. ಈ ಯೋಜನೆಗೆ ಪ್ರಮುಖ ಪಾತ್ರವಹಿಸಿರುವ ಸಚಿವರಾದ ಜಮೀರ್ ಅಹ್ಮದ್ ಖಾನ್‌ ಹಾಗೂ ಶಿವಲಿಂಗೇಗೌಡರನ್ನು ಅಭಿನಂದಿಸಿದರು.

ಇದನ್ನೂ ಓದಿ: SBI ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಇಲ್ಲ – ಮುಷ್ಕರ ಮುಂದೂಡಿಕೆ

ಎರಡನೇ ಅತಿ ದೊಡ್ಡ ಕ್ರೀಡಾಂಗಣ : ಮುಖ್ಯಮಂತ್ರಿ ಹೇಳುವಂತೆ, ಗುಜರಾತ್‌ನಲ್ಲಿರುವ 90 ಸಾವಿರ ಆಸನ ಸಾಮರ್ಥ್ಯದ ಕ್ರೀಡಾಂಗಣದ ಬಳಿಕ ಕರ್ನಾಟಕದ ಈ ಹೊಸ ಕ್ರೀಡಾಂಗಣ ರಾಜ್ಯದ ಅತಿದೊಡ್ಡ ಕ್ರೀಡಾ ಸಂಕೀರ್ಣಗಳಲ್ಲಿ ಒಂದಾಗಲಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲು ಅವಕಾಶ ಸಿಗಲಿದೆ.

ಈ ಕ್ರೀಡಾಂಗಣದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಹೆಚ್ಚಳವಾಗಲಿದ್ದು, ಹೋಟೆಲ್, ಸಾರಿಗೆ, ಸಣ್ಣ ವ್ಯಾಪಾರ ಸೇರಿದಂತೆ ಹಲವು ಕ್ಷೇತ್ರಗಳಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅವರು ಹೇಳಿದರು. ಸ್ಥಳೀಯ ಆರ್ಥಿಕತೆಯಿಗೂ ಇದು ದೊಡ್ಡ ಮಟ್ಟದ ಉತ್ತೇಜನ ನೀಡಲಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ‘ಅಂದು ಬೆಂಗಾಳ, ಇಂದು ಕೇರಳ’: CEO ನೇಮಕಾತಿಗೆ BJP ಲೇವಡಿ!

ಕೆಹೆಚ್‌ಬಿ ಹಣದಲ್ಲೇ ನಿರ್ಮಾಣ : ಸಿಎಂ ತಿಳಿಸಿದಂತೆ, ಈ ಮಹತ್ವಾಕಾಂಕ್ಷಿ ಯೋಜನೆಗೆ ಸರ್ಕಾರದ ಪ್ರತ್ಯೇಕ ಆರ್ಥಿಕ ನೆರವು ಇಲ್ಲದೇ, ಕರ್ನಾಟಕ ಗೃಹ ಮಂಡಳಿಯ ಸ್ವಂತ ನಿಧಿಯಿಂದಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಖಾಲಿ ಇರುವ ಕೆಹೆಚ್‌ಬಿ ನಿವೇಶನಗಳ ಮಾರಾಟದಿಂದ ಸುಮಾರು ₹20 ಸಾವಿರ ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, ಅದರ ಒಂದು ಭಾಗವನ್ನು ಈ ಯೋಜನೆಗೆ ಬಳಸಲಾಗುತ್ತಿದೆ.

ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ಮನೆ ಮತ್ತು ನಿವೇಶನಗಳನ್ನು ಒದಗಿಸುವ ಕಾರ್ಯವನ್ನೂ ಕೆಹೆಚ್‌ಬಿ ಮುಂದುವರಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಈಗಾಗಲೇ ರಾಜ್ಯಾದ್ಯಂತ 3 ಲಕ್ಷಕ್ಕೂ ಹೆಚ್ಚು ಮನೆ ಮತ್ತು ನಿವೇಶನಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಗಣಿ ಭಾಗದ ರಸ್ತೆ ಅಭಿವೃದ್ಧಿಗೂ ಚಾಲನೆ: ಕ್ರೀಡಾಂಗಣದ ಜೊತೆಗೆ ಜಿಗಣಿ ಹೋಬಳಿಯ ಪ್ರಮುಖ ಸಂಪರ್ಕ ರಸ್ತೆ ಅಭಿವೃದ್ಧಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಿಎಂ ಘೋಷಿಸಿದರು. ಈ ರಸ್ತೆ ಅಭಿವೃದ್ಧಿಯಿಂದ ಸೂರ್ಯನಗರ ಭಾಗದ ಸಂಪರ್ಕ ವ್ಯವಸ್ಥೆ ಮತ್ತಷ್ಟು ಸುಧಾರಿಸಲಿದ್ದು, ಭವಿಷ್ಯದ ನಗರೀಕರಣಕ್ಕೆ ಸಹಕಾರಿ ಆಗಲಿದೆ.

ಇದನ್ನೂ ಓದಿ: ಹುಬ್ಬಳ್ಳಿ: ಕಾರ್ಯಾಚರಣೆ ನಿಮಿತ್ತ ಕೆಲ ರೈಲು ಸಂಚಾರ ತಾತ್ಕಾಲಿಕ ರದ್ದು

ಕ್ರೀಡೆ-ಪ್ರವಾಸೋದ್ಯಮಕ್ಕೆ ಹೊಸ ಅವಕಾಶ : ರಾಜ್ಯದ ಕ್ರೀಡಾ ಕ್ಷೇತ್ರವನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ಕ್ರೀಡಾಂಗಣ ನಿರ್ಮಾಣದಿಂದ ರಾಜ್ಯದಲ್ಲಿ ಯುವ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ದೊರೆಯಲಿದ್ದು, ಅಂತರರಾಷ್ಟ್ರೀಯ ಪಂದ್ಯಾವಳಿಗಳನ್ನು ಆಯೋಜಿಸುವ ಸಾಮರ್ಥ್ಯವೂ ಹೆಚ್ಚಲಿದೆ.

ರಾಜ್ಯದ ಸಮಗ್ರ ಅಭಿವೃದ್ಧಿಗೆ ಕ್ರೀಡೆ, ಪ್ರವಾಸೋದ್ಯಮ, ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿ ಎಲ್ಲವೂ ಪರಸ್ಪರ ಸಂಬಂಧ ಹೊಂದಿವೆ. ಸೂರ್ಯನಗರ ಯೋಜನೆ ಈ ನಾಲ್ಕು ಕ್ಷೇತ್ರಗಳ ಬೆಳವಣಿಗೆಗೆ ನಾಂದಿ ಹಾಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.