SBI ಸಿಬ್ಬಂದಿ ಸಂಘ ಮತ್ತು ಆಡಳಿತ ಮಂಡಳಿ ನಡುವೆ ಸಕಾರಾತ್ಮಕ ಮಾತುಕತೆ : ಮುಷ್ಕರ ಮುಂದೂಡಿದ AISBISF
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ನೌಕರರು ಮೇ 25 ಮತ್ತು 26ರಂದು ನಡೆಸಲು ಉದ್ದೇಶಿಸಿದ್ದ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಬ್ಯಾಂಕ್ ಆಡಳಿತ ಮಂಡಳಿ ಮತ್ತು ಯೂನಿಯನ್ ಪ್ರತಿನಿಧಿಗಳ ನಡುವಿನ ಸಕಾರಾತ್ಮಕ ಚರ್ಚೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಎಸ್‌ಬಿಐ ತನ್ನ 52 ಕೋಟಿ ಗ್ರಾಹಕರಿಗೆ ಮಹತ್ವದ ಭರವಸೆ ನೀಡಿದ್ದು, ದೇಶದಾದ್ಯಂತ ಎಲ್ಲಾ ಶಾಖೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಮತ್ತು ಬ್ಯಾಂಕಿಂಗ್ ಸೇವೆಗಳು ಯಾವುದೇ ವ್ಯತ್ಯಯವಿಲ್ಲದೆ ಮುಂದುವರಿಯಲಿವೆ ಎಂದು ತಿಳಿಸಿದೆ.
ಇದನ್ನೂ ಓದಿ: ಶಿಕ್ಷಣ ಸಚಿವರ ರಾಜೀನಾಮೆ ಒತ್ತಾಯಿಸಿ ‘ಕಾಕ್ರೋಚ್’ Digital ಚಳವಳಿ
AISBISF ಮುಷ್ಕರಕ್ಕೆ ಕರೆ ನೀಡಿತ್ತು : All India State Bank of India Staff Federation (AISBISF) ನೇಮಕಾತಿ, ಸಿಬ್ಬಂದಿ ಕೊರತೆ, ಶಾಶ್ವತ ಉದ್ಯೋಗಗಳ ಭದ್ರತೆ ಸೇರಿದಂತೆ 16 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿತ್ತು.
ಈ ಮುಷ್ಕರದಿಂದ ದೇಶದಾದ್ಯಂತ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಕುರಿತು ಆತಂಕ ವ್ಯಕ್ತವಾಗಿತ್ತು.
ಮುಂಬೈನಲ್ಲಿ ಸಕಾರಾತ್ಮಕ ಚರ್ಚೆ: ಶುಕ್ರವಾರ ಮುಂಬೈನ ಎಸ್‌ಬಿಐ ಕಾರ್ಪೊರೇಟ್ ಕೇಂದ್ರದಲ್ಲಿ ಬ್ಯಾಂಕ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಸಂಘದ ಪ್ರತಿನಿಧಿಗಳ ನಡುವೆ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಯೂನಿಯನ್ ಎತ್ತಿಹಿಡಿದಿದ್ದ ಹಲವು ಬೇಡಿಕೆಗಳ ಕುರಿತು ಪ್ರಗತಿ ಸಾಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್‌ಬಿಐ ಸಿಬ್ಬಂದಿ ಮಾದ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, “ಆಡಳಿತ ಮಂಡಳಿಯೊಂದಿಗಿನ ಸಭೆ ಸಕಾರಾತ್ಮಕವಾಗಿತ್ತು. ಹಲವಾರು ಬೇಡಿಕೆಗಳ ಕುರಿತು ಪ್ರಗತಿ ಕಂಡುಬಂದಿರುವುದರಿಂದ ಪ್ರಸ್ತಾವಿತ ಮುಷ್ಕರವನ್ನು ಮುಂದೂಡಲಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: KEA ಮಹತ್ವದ ಸೂಚನೆ: CBSE, CISCE ವಿದ್ಯಾರ್ಥಿಗಳಿಗೆ ಅಂಕ ದೃಢೀಕರಣ ಅವಕಾಶ
ಗ್ರಾಹಕರಿಗೆ ನಿರಾಳತೆ : ಮುಷ್ಕರ ಮುಂದೂಡಿಕೆಯಿಂದ ಎಸ್‌ಬಿಐ ಗ್ರಾಹಕರಿಗೆ ನಿರಾಳತೆ ಸಿಕ್ಕಿದ್ದು, ಬ್ಯಾಂಕ್ ಸೇವೆಗಳು, ಎಟಿಎಂ ವ್ಯವಹಾರಗಳು, ಆನ್‌ಲೈನ್ ಬ್ಯಾಂಕಿಂಗ್ ಹಾಗೂ ಶಾಖಾ ಸೇವೆಗಳು ಸಾಮಾನ್ಯವಾಗಿ ಲಭ್ಯವಾಗಲಿವೆ.
ಬ್ಯಾಂಕ್ ಆಡಳಿತ ಮತ್ತು ಸಿಬ್ಬಂದಿ ಸಂಘದ ನಡುವಿನ ಮುಂದಿನ ಚರ್ಚೆಗಳ ಆಧಾರದ ಮೇಲೆ ಬೇಡಿಕೆಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.






















