ಜೆಕ್ ಗಣರಾಜ್ಯ: ಪ್ರೇಗ್‌ನಲ್ಲಿ ನಡೆದ ಪ್ರತಿಷ್ಠಿತ ‘ಜೆಕ್ ಡಿಸೇಬಲ್ಡ್ ಗಾಲ್ಫ್ ಮಾಸ್ಟರ್ಸ್ 2026’ ಟೂರ್ನಿಯಲ್ಲಿ ಭಾರತದ ಇಬ್ಬರು ವಿಶೇಷಚೇತನ ಗಾಲ್ಫ್ ಆಟಗಾರರು ಐತಿಹಾಸಿಕ ಸಾಧನೆ ಮಾಡಿದ್ದು, ಪೋಡಿಯಂ ಫಿನಿಶ್ ಸಾಧಿಸಿದ್ದು, ನೆಟ್ ಸ್ಟ್ರೋಕ್ ಪ್ಲೇ ವಿಭಾಗದಲ್ಲಿ ಈ ಯಶಸ್ಸು ಲಭಿಸಿದೆ. ನೋಯ್ಡಾದ ವಿಷ್ಣುವರ್ಧನ್ ಭಾಟಿ ಅವರು ಒಟ್ಟಾರೆ 2 ಅಂಡರ್ ಪಾರ್ ಸ್ಕೋರ್‌ನೊಂದಿಗೆ ದ್ವಿತೀಯ ಸ್ಥಾನ ಪಡೆದು ರನ್ನರ್-ಅಪ್ ಆದರು. ಮೊದಲ ಸುತ್ತಿನಲ್ಲಿ 6 ಅಂಡರ್ ಪಾರ್ ಸಾಧಿಸಿ ಅಗ್ರಸ್ಥಾನದಲ್ಲಿದ್ದ ಭಾಟಿ, ಅಂತಿಮ ಸುತ್ತಿನಲ್ಲಿ ತೀವ್ರ ಸೆಖೆಯ ನಡುವೆಯೂ ದ್ವಿತೀಯ ಸ್ಥಾನ ಕಾಯ್ದುಕೊಂಡರು. ಇನ್ನು ಬೆಂಗಳೂರಿನ ಅಂಕುಶ್ ಸಹಾ ಅವರು ಲೆವೆಲ್ ಪಾರ್ ಟೋಟಲ್‌ನೊಂದಿಗೆ ತೃತೀಯ ಸ್ಥಾನ ಮುಡಿಗೇರಿಸಿಕೊಂಡರು. ಮೊದಲ ಸುತ್ತಿನಲ್ಲಿ 10ನೇ ಸ್ಥಾನದಲ್ಲಿದ್ದ ಸಹಾ, ಎರಡನೇ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡಿ ಮೂರನೇ ಸ್ಥಾನಕ್ಕೆ ಜಿಗಿದರು. ಜೆಕ್ ಗಣರಾಜ್ಯದ ತೆರೇಸಾ ಟೂರ್ನಿಯಲ್ಲಿ ವಿಜೇತರಾದರು.
ಭಾರತದಲ್ಲಿ ಅಡಾಪ್ಟಿವ್ ಗಾಲ್ಫ್ ಅಲೈಯನ್ಸ್ ಫೌಂಡೇಶನ್ ಇತ್ತೀಚೆಗೆ ಈ ಕ್ರೀಡೆಗೆ ನೀಡುತ್ತಿರುವ ಬೆಂಬಲದಿoದಾಗಿ ಆಟಗಾರರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಜೆನೆಸಿಸ್ ಐಟಿ ಇನ್ನೋವೇಷನ್ಸ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಭಾಟಿ ಮತ್ತು ಸಹಾ ಈ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಭಾರತೀಯ ಆಟಗಾರರ ಈ ಜಯ ಮುಂಬರುವ ದಿನಗಳಲ್ಲಿ ದೇಶದಲ್ಲಿ ಅಡಾಪ್ಟಿವ್ ಗಾಲ್ಫ್ ಬೆಳವಣಿಗೆಗೆ ದೊಡ್ಡ ಪ್ರೇರಣೆಯಾಗಿದೆ.
ಈ ಬಗ್ಗೆ ಮಾತಾಡಿರುವ ಅಡಾಪ್ಟಿವ್ ಗಾಲ್ಫ್ ಅಲಯನ್ಸ್ ಫೌಂಡೇಶನ್ ನಿರ್ದೇಶಕ ಹಾಗೂ ಟಿಎಆರ್‌ಎಸ್ ಲೆವೆಲ್ 3 ನಿಯಮಗಳ ಅಧಿಕಾರಿ ಚಂದ್ರಶೇಖರ್ ಕಿನಿ “ಗಾಲ್ಫ್ ಕೇವಲ ಒಂದು ಕ್ರೀಡೆಯಲ್ಲ, ಅದು ಅತ್ಯಂತ ಒಳಗೊಳ್ಳುವಿಕೆ ಹೊಂದಿರುವ ಅದ್ಭುತ ಆಟವಾಗಿದೆ. ವಿಶೇಷ ಚೇತನರು ಮಾತ್ರವಲ್ಲದೆ, ಈ ಕ್ರೀಡೆಯನ್ನು ಅಳವಡಿಸಿಕೊಳ್ಳುವ ಪ್ರತಿಯೊಬ್ಬರ ಜೀವನದ ಮೇಲೂ ಇದು ಸಕಾರಾತ್ಮಕ ಪ್ರಭಾವ ಬೀರಬಲ್ಲದು.” ಎಂದು ತಿಳಿಸಿದ್ದಾರೆ.






















