Home Advertisement
Home ಸುದ್ದಿ ದೇಶ ಶಿಕ್ಷಣ ಸಚಿವರ ರಾಜೀನಾಮೆ ಒತ್ತಾಯಿಸಿ ‘ಕಾಕ್ರೋಚ್’ Digital ಚಳವಳಿ

ಶಿಕ್ಷಣ ಸಚಿವರ ರಾಜೀನಾಮೆ ಒತ್ತಾಯಿಸಿ ‘ಕಾಕ್ರೋಚ್’ Digital ಚಳವಳಿ

0
82

NEET ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ನವದೆಹಲಿ: NEET-UG 2026 ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ರದ್ದತಿ ವಿವಾದ ದೇಶದಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ, ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

‘ಕಾಕ್ರೋಚ್ ಜನತಾ ಪಾರ್ಟಿ’ (CJP) ಎಂಬ ಹೆಸರಿನ ಡಿಜಿಟಲ್ ವ್ಯಂಗ್ಯ ಚಳವಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಲಕ್ಷಾಂತರ ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕರು ಮತ್ತು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಈ ಅಭಿಯಾನಕ್ಕೆ ಬೆಂಬಲ ಸೂಚಿಸುತ್ತಿದ್ದು, ಈ ಚಳವಳಿಯನ್ನು ಡಿಜಿಟಲ್ ಕ್ರಿಯೇಟರ್ ಅಭಿಜೀತ್ ದೀಪ್ಕೆ ಆರಂಭಿಸಿರುವುದಾಗಿ ಹೇಳಲಾಗಿದೆ. ರಾಜಕೀಯ ವ್ಯಂಗ್ಯ ಮತ್ತು ಯುವಕರ ಅಸಮಾಧಾನವನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಪಡಿಸುವ ಉದ್ದೇಶದಿಂದ ಈ ಡಿಜಿಟಲ್ ಅಭಿಯಾನ ರೂಪುಗೊಂಡಿದೆ.

ಇದನ್ನೂ ಓದಿ: ಕರ್ನಾಟಕ ಸೇರಿ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ

‘ಕಾಕ್ರೋಚ್’ ಹೆಸರಿನ ಹಿಂದೆ : ಮೇ 15, 2026 ರಂದು ನಡೆದ ವಿಚಾರಣೆಯ ವೇಳೆ ನ್ಯಾಯಮೂರ್ತಿ ಸೂರ್ಯಕಾಂತ್ ಕೆಲವು ನಿರುದ್ಯೋಗಿ ಯುವಕರನ್ನು “Cockroaches” (ಜಿರಳೆಗಳು) ಎಂದು ಉಲ್ಲೇಖಿಸಿದ್ದಾರೆಯೆಂಬ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಇದರಿಂದ ಅಸಮಾಧಾನಗೊಂಡ ಯುವಕರು ಅದೇ ಪದವನ್ನು ತಮ್ಮ ಪ್ರತಿಭಟನೆಯ ಪ್ರತೀಕವಾಗಿ ಬಳಸಿಕೊಂಡು ‘Cockroach Janata Party’ ಎಂಬ ಹೆಸರಿನಲ್ಲಿ ಆನ್‌ಲೈನ್ ಅಭಿಯಾನ ಆರಂಭಿಸಿದರು.

ಕೆಲವೇ ದಿನಗಳಲ್ಲಿ ಈ ಚಳವಳಿಯ ಇನ್‌ಸ್ಟಾಗ್ರಾಮ್ ಹಾಗೂ X ಖಾತೆಗಳಿಗೆ ಲಕ್ಷಾಂತರ ಮಂದಿ ಬೆಂಬಲ ಸೂಚಿಸಿದ್ದು, #CockroachJanataParty ಮತ್ತು #ResignDharmendraPradhan ಹ್ಯಾಶ್‌ಟ್ಯಾಗ್‌ಗಳು ಭಾರೀ ಟ್ರೆಂಡ್ ಆಗಿವೆ.

ಶಿಕ್ಷಣ ಸಚಿವರ ವಿರುದ್ಧ ಡಿಜಿಟಲ್ ಅಭಿಯಾನ : NEET-UG 2026 ಪರೀಕ್ಷೆಯ ಪ್ರಶ್ನೆ ಪತ್ರಿಕೆ ವಾಟ್ಸಾಪ್ ಮೂಲಕ ಸೋರಿಕೆಯಾದ ಆರೋಪದ ಹಿನ್ನೆಲೆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಇದರಿಂದ ವಿದ್ಯಾರ್ಥಿಗಳಲ್ಲಿ ಆಕ್ರೋಶ ಹೆಚ್ಚಾಗಿದ್ದು, ಪರೀಕ್ಷಾ ವ್ಯವಸ್ಥೆಯ ವೈಫಲ್ಯಕ್ಕೆ ಕೇಂದ್ರ ಶಿಕ್ಷಣ ಸಚಿವರೇ ಹೊಣೆ ಎಂದು CJP ಆರೋಪಿಸಿದೆ.

ಇದನ್ನೂ ಓದಿ: ಹಿರಿಯ ಕಾಂಗ್ರೆಸ್ ನಾಯಕ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆ

ಸಾಮಾಜಿಕ ಜಾಲತಾಣಗಳ ಕಮೆಂಟ್ ವಿಭಾಗಗಳಲ್ಲಿ ಸಾವಿರಾರು ಮಂದಿ ಒಂದೇ ರೀತಿಯ ಸಂದೇಶವನ್ನು ಪೋಸ್ಟ್ ಮಾಡುತ್ತಿದ್ದಾರೆ. ವೈರಲ್ ಆಗಿರುವ ಆ ಸಂದೇಶದಲ್ಲಿ, “ನಾನು ಕಾಕ್ರೋಚ್ ಜನತಾ ಪಾರ್ಟಿಯ ಹೆಮ್ಮೆಯ ಬೆಂಬಲಿಗನಾಗಿ, ಭಾರತದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸುತ್ತೇನೆ. ನಿಮ್ಮ ಅಸಮರ್ಥತೆಯಿಂದ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಲಾಗಿದೆ” ಎಂದು ಉಲ್ಲೇಖಿಸಲಾಗಿದೆ.

ಖಾತೆ ತಡೆ, ಮತ್ತೆ ಹೊಸ ಖಾತೆ : ಈ ಡಿಜಿಟಲ್ ಚಳವಳಿ ವೇಗವಾಗಿ ಹರಡುತ್ತಿದ್ದಂತೆ, ಮೇ 21, 2026 ರಂದು ಸರ್ಕಾರದ ಆದೇಶದ ಮೇರೆಗೆ ‘Cockroach Janata Party’ಯ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯನ್ನು ಭಾರತದಲ್ಲಿ ತಡೆಹಿಡಿಯಲಾಗಿತ್ತು, ಆದರೆ ಖಾತೆ ಬ್ಯಾನ್ ಆದ ಕೆಲವೇ ಗಂಟೆಗಳಲ್ಲಿ ಸಂಸ್ಥಾಪಕರು “Cockroach is Back” ಎಂಬ ಹೆಸರಿನಲ್ಲಿ ಹೊಸ ಖಾತೆ ಆರಂಭಿಸಿದ್ದು, ಅದಕ್ಕೂ ಭಾರಿ ಬೆಂಬಲ ವ್ಯಕ್ತವಾಗಿದೆ. “ಜಿರಳೆಗಳು ಸಾಯುವುದಿಲ್ಲ” ಎಂಬ ಸಂದೇಶದೊಂದಿಗೆ ಅವರು ತಮ್ಮ ಡಿಜಿಟಲ್ ಹೋರಾಟ ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ಯುವಕರ ಅಸಮಾಧಾನಕ್ಕೆ ಪ್ರತಿಬಿಂಬ? : ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಚಳವಳಿ ಕೇವಲ ವ್ಯಂಗ್ಯ ರಾಜಕೀಯವಲ್ಲ, ಸ್ಪರ್ಧಾತ್ಮಕ ಪರೀಕ್ಷೆಗಳ ಅವ್ಯವಸ್ಥೆ, ನಿರುದ್ಯೋಗ ಮತ್ತು ಆಡಳಿತಾತ್ಮಕ ವೈಫಲ್ಯದ ವಿರುದ್ಧ ಯುವಕರಲ್ಲಿರುವ ಆಕ್ರೋಶದ ಪ್ರತಿಬಿಂಬವಾಗಿದೆ. NEET ಸೇರಿದಂತೆ ಹಲವು ರಾಷ್ಟ್ರೀಯ ಮಟ್ಟದ ಪರೀಕ್ಷೆಗಳ ವಿಶ್ವಾಸಾರ್ಹತೆ ಕುರಿತ ಪ್ರಶ್ನೆಗಳು ಮತ್ತೊಮ್ಮೆ ಚರ್ಚೆಗೆ ಬಂದಿವೆ.