SK Home Ad
Home ನಮ್ಮ ಜಿಲ್ಲೆ ಕೊಪ್ಪಳ ಹೊಗೆ ಉಗುಳುತ್ತಿದ್ದ 8 ಉಕ್ಕು ಕಾರ್ಖಾನೆಗಳಿಗೆ ಬೀಗ! ವಿದ್ಯುತ್ ಸಂಪರ್ಕ ಕಡಿತಕ್ಕೂ ಆದೇಶ

ಹೊಗೆ ಉಗುಳುತ್ತಿದ್ದ 8 ಉಕ್ಕು ಕಾರ್ಖಾನೆಗಳಿಗೆ ಬೀಗ! ವಿದ್ಯುತ್ ಸಂಪರ್ಕ ಕಡಿತಕ್ಕೂ ಆದೇಶ

0
34

ಕೊಪ್ಪಳ: ಜಿಲ್ಲೆಯ ಪರಿಸರಕ್ಕೆ ಹಾನಿ ಉಂಟುಮಾಡುತ್ತಿದ್ದ ಹಾಗೂ ಹೊಗೆ ಉಗುಳುವ ಮೂಲಕ ವಾಯುಮಾಲಿನ್ಯಕ್ಕೆ ಕಾರಣವಾಗಿದ್ದ 8 ಉಕ್ಕು ಕಾರ್ಖಾನೆಗಳನ್ನು ಸ್ಥಗಿತಗೊಳಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ. ಕಾರ್ಖಾನೆಗಳನ್ನು ಬಂದ್ ಮಾಡುವುದರ ಜತೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆಯೂ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.

ಗವಿಮಠದ ಪೀಠಾಧಿಪತಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದಿದ್ದ ʻಕೊಪ್ಪಳ ಬಂದ್’ ಹಾಗೂ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಕಾರ್ಖಾನೆಗಳಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯದ ವಿರುದ್ಧ ಸಾರ್ವಜನಿಕರು ಧ್ವನಿ ಎತ್ತಿದ್ದರು. ಮಾಲಿನ್ಯಕಾರಕ ಕಾರ್ಖಾನೆಗಳ ವಿಸ್ತರಣೆ ಮತ್ತು ಹೊಸ ಕಾರ್ಖಾನೆಗಳ ಸ್ಥಾಪನೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿ ಅವರು ಕೊಪ್ಪಳಕ್ಕೆ ಭೇಟಿ ನೀಡಿ ಕಾರ್ಖಾನೆಗಳ ಕಾರ್ಯಚಟುವಟಿಕೆ ಹಾಗೂ ಪರಿಸರದ ಮೇಲಿನ ಪರಿಣಾಮಗಳ ಕುರಿತು ಸ್ಥಳ ಪರಿಶೀಲನೆ ನಡೆಸಿದ್ದರು. ಇದೀಗ ಪರಿಶೀಲನೆಯ ಬೆನ್ನಲ್ಲೇ ಎಂಟು ಕಾರ್ಖಾನೆಗಳ ಕಾರ್ಯಾಚರಣೆ ಸ್ಥಗಿತಗೊಳಿಸಲು ಆದೇಶಿಸಲಾಗಿದೆ.

ಯಾವೆಲ್ಲ ಕಾರ್ಖಾನೆಗಳಿಗೆ ಬಂದ್ ಆದೇಶ?
ಕೊಪ್ಪಳ ತಾಲೂಕಿನ ಚಿಕ್ಕಬಗನಾಳ, ಕುಣಿಕೇರಿ, ಹಿರೇಬಗನಾಳ ಹಾಗೂ ಹಾಲವರ್ತಿ ವ್ಯಾಪ್ತಿಯಲ್ಲಿರುವ ಕೆಳಕಂಡ ಕಾರ್ಖಾನೆಗಳನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ.
ಬಾಬಾ ಅಖಿಲಾ ಸಾಯಿಜ್ಯೋತಿ ಇಂಡಸ್ಟ್ರೀಸ್
ಭದ್ರಶ್ರೀ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್
ಧ್ರುವದೇಶ ಮೆಟಾ ಸ್ಟೀಲ್ ಲಿಮಿಟೆಡ್
ಪಿ.ಬಿ.ಎಸ್. ಸ್ಟೀಲ್-ಎ ಘಟಕ (ಬಾಲಸುಬ್ಬಶೆಟ್ಟಿ ಆ್ಯಂಡ್ ಸನ್ಸ್)
ಎಸ್.ಕೆ. ಸ್ಟೀಲ್ಸ್ ಟೆಕ್ ಲಿಮಿಟೆಡ್
ತನುಷ್ ಇಸ್ಪಾತ್ ಲಿಮಿಟೆಡ್‌ನ ಯುನಿಟ್-1
ತನುಷ್ ಇಸ್ಪಾತ್ ಲಿಮಿಟೆಡ್‌ನ ಯುನಿಟ್-2
ಐ.ಎಲ್.ಸಿ. ಐರನ್ ಆ್ಯಂಡ್ ಸ್ಟೀಲ್ ಪ್ರೈವೇಟ್ ಲಿಮಿಟೆಡ್

ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದಂತೆ ಎಂಟೂ ಕಾರ್ಖಾನೆಗಳನ್ನು ಮುಚ್ಚಿಸಲು ಹಾಗೂ ಅವುಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಸೂಚನೆ ನೀಡಿದ್ದಾರೆ. ಇದರಿಂದಾಗಿ ಕೊಪ್ಪಳದಲ್ಲಿ ಕೈಗಾರಿಕೆಗಳಿಂದ ಉಂಟಾಗುತ್ತಿದ್ದ ವಾಯುಮಾಲಿನ್ಯದ ವಿರುದ್ಧ ನಡೆದ ಹೋರಾಟದ ಬಳಿಕ ಮಹತ್ವದ ಕ್ರಮ ಕೈಗೊಂಡಂತಾಗಿದೆ.