Home Advertisement
Home ಕ್ರೀಡೆ ವಿನೇಶ್ ಫೋಗಟ್ ಪ್ರಕರಣದಲ್ಲಿ WFIಗೆ ಹೈಕೋರ್ಟ್ ತರಾಟೆ

ವಿನೇಶ್ ಫೋಗಟ್ ಪ್ರಕರಣದಲ್ಲಿ WFIಗೆ ಹೈಕೋರ್ಟ್ ತರಾಟೆ

0
44

ವಿನೇಶ್ ಫೋಗಟ್‌ಗೆ ಏಷ್ಯನ್ ಗೇಮ್ಸ್ ಟ್ರಯಲ್ಸ್ ಅವಕಾಶ? ತಜ್ಞರ ಸಮಿತಿ ರಚಿಸಲು ಕೇಂದ್ರಕ್ಕೆ ಹೈಕೋರ್ಟ್ ಸೂಚನೆ

ನವದೆಹಲಿ: ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕುಸ್ತಿ ಸ್ಪರ್ಧೆಗಳಲ್ಲಿ ಭಾಗವಹಿಸಲು “ಅನರ್ಹ” ಎಂದು ಘೋಷಿಸಿದ್ದ ಭಾರತೀಯ ಕುಸ್ತಿ ಒಕ್ಕೂಟದ (WFI) ಕ್ರಮವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಜೊತೆಗೆ, ಕುಸ್ತಿಪಟುವಿನ ಮೌಲ್ಯಮಾಪನ ನಡೆಸಿ 2026ರ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ತಜ್ಞರ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಪೀಠ, “ಯಾವುದೇ ದ್ವೇಷ ಅಥವಾ ವಿವಾದ ಇರಲಿ, ಅದರ ಪರಿಣಾಮವಾಗಿ ಕ್ರೀಡೆ ಯಾಕೆ ಬಳಲಬೇಕು?” ಎಂದು ಪ್ರಶ್ನಿಸಿತು. ಪ್ರತಿಷ್ಠಿತ ಕ್ರೀಡಾಪಟುಗಳಿಗೆ ಅವಕಾಶ ನೀಡುತ್ತಿದ್ದ ಹಿಂದಿನ ಪದ್ಧತಿಯಿಂದ WFI ದೂರ ಸರಿದಿರುವುದನ್ನು ನ್ಯಾಯಪೀಠ “ಸಣ್ಣ ಮಾತು” ಎಂದು ಕಿಡಿಕಾರಿತು.

ಇದನ್ನೂ ಓದಿ: ಕರ್ನಾಟಕ ಸೇರಿ 24 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಘೋಷಣೆ

ಮಾತೃತ್ವ ವಿರಾಮದ ಬಳಿಕ ಮರಳಲು ಪ್ರಯತ್ನ : ಮಾತೃತ್ವ ರಜೆಯ ಬಳಿಕ ಮತ್ತೆ ಸ್ಪರ್ಧಾತ್ಮಕ ಕುಸ್ತಿಗೆ ಮರಳಲು ವಿನೇಶ್ ಫೋಗಟ್ ಪ್ರಯತ್ನಿಸುತ್ತಿದ್ದಾರೆ. ಆದರೆ ಭಾರತೀಯ ಕುಸ್ತಿ ಒಕ್ಕೂಟದ ಆಯ್ಕೆ ನೀತಿ ಮತ್ತು ನೋಟಿಸ್‌ಗಳ ಕಾರಣ ಅವರಿಗೆ ದೇಶೀಯ ಟೂರ್ನಿಗಳಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಲಾಗಿತ್ತು.

ಮೇ 30 ಮತ್ತು 31ರಂದು ನಡೆಯಲಿರುವ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ವಿನೇಶ್ ಸಲ್ಲಿಸಿದ್ದ ಅರ್ಜಿಯನ್ನು ಈ ವಾರದ ಆರಂಭದಲ್ಲಿ ಹೈಕೋರ್ಟ್ ಮಧ್ಯಂತರ ಹಂತದಲ್ಲಿ ತಿರಸ್ಕರಿಸಿತ್ತು. ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್ ಅವರಿದ್ದ ಪೀಠ, WFI ಈಗಾಗಲೇ ಕುಸ್ತಿಪಟುವನ್ನು “ಅನರ್ಹ” ಎಂದು ಘೋಷಿಸಿರುವುದರಿಂದ ತಕ್ಷಣದ ಮಧ್ಯಂತರ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು.

WFI ಆಯ್ಕೆ ನೀತಿ ಏನು? : WFIಯ ಫೆಬ್ರವರಿ 25ರ ಆಯ್ಕೆ ನೀತಿ ಮತ್ತು ಮೇ 6ರ ಸುತ್ತೋಲೆಯ ಪ್ರಕಾರ, 2025ರ ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್, 2026ರ ಸೀನಿಯರ್ ಫೆಡರೇಶನ್ ಕಪ್, 2026ರ ಅಂಡರ್-20 ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್ ಮತ್ತು 23 ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ಗಳಲ್ಲಿ ಪದಕ ವಿಜೇತರಾದವರಿಗೆ ಮಾತ್ರ ಏಷ್ಯನ್ ಗೇಮ್ಸ್ ಟ್ರಯಲ್ಸ್‌ಗೆ ಅರ್ಹತೆ ನೀಡಲಾಗುತ್ತದೆ.

ಇದನ್ನೂ ಓದಿ: ಹಿರಿಯ ಕಾಂಗ್ರೆಸ್ ನಾಯಕ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಆಯ್ಕೆ

ಮೇ 6ರ ಸುತ್ತೋಲೆಯಲ್ಲಿ ಹಿಂದಿನ ಸಾಧನೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು WFI ಸ್ಪಷ್ಟಪಡಿಸಿತ್ತು. ಜೂನ್ 26ರವರೆಗೆ ನಡೆಯಲಿರುವ ರಾಷ್ಟ್ರೀಯ ಮುಕ್ತ ರ‍್ಯಾಂಕಿಂಗ್ ಪಂದ್ಯಾವಳಿ ಸೇರಿದಂತೆ ಹಲವು ದೇಶೀಯ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೂ ನಿರ್ಬಂಧ ವಿಧಿಸಲಾಗಿತ್ತು.

WFI ಆರೋಪ ಏನು? : ಮೇ 9ರಂದು ಹೊರಡಿಸಿದ್ದ ಶೋ-ಕಾಸ್ ನೋಟಿಸ್‌ನಲ್ಲಿ WFI, ವಿನೇಶ್ ಫೋಗಟ್ ವಿರುದ್ಧ ಅಶಿಸ್ತು ಹಾಗೂ ಡೋಪಿಂಗ್ ವಿರೋಧಿ ನಿಯಮ ಉಲ್ಲಂಘನೆಯ ಆರೋಪ ಮಾಡಿತ್ತು. ನಿವೃತ್ತಿಯಿಂದ ಮರಳುವ ಕ್ರೀಡಾಪಟುಗಳಿಗೆ ಅಗತ್ಯವಿರುವ ಆರು ತಿಂಗಳ ಕಡ್ಡಾಯ ನೋಟಿಸ್ ಅವಧಿಯನ್ನು ಅವರು ಪೂರ್ಣಗೊಳಿಸಿಲ್ಲ ಎಂದು ಫೆಡರೇಶನ್ ಹೇಳಿದೆ.

ಆದರೆ ನ್ಯಾಯಪೀಠ, ವಿನೇಶ್ ಮಾತೃತ್ವ ರಜೆಯಲ್ಲಿದ್ದ ವಿಚಾರವನ್ನೂ ಪರಿಗಣಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದೆ. ಜೊತೆಗೆ ದೇಶದ ಕ್ರೀಡಾ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಯುತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಸೂಚಿಸಿದೆ.

ಇದನ್ನೂ ಓದಿ: ಶಿಕ್ಷಣ ಸಚಿವರ ರಾಜೀನಾಮೆ ಒತ್ತಾಯಿಸಿ ‘ಕಾಕ್ರೋಚ್’ Digital ಚಳವಳಿ

ಜುಲೈ 6ಕ್ಕೆ ಮುಂದಿನ ವಿಚಾರಣೆ : ವಿನೇಶ್ ಫೋಗಟ್ ಅವರಿಗೆ WFI ನೀಡಿದ ಶೋ-ಕಾಸ್ ನೋಟಿಸ್‌ಗೆ ವಿವರವಾದ ಉತ್ತರ ಸಲ್ಲಿಸಲು ನ್ಯಾಯಾಲಯ ಅವಕಾಶ ನೀಡಿದೆ. ಈ ಕುರಿತು ಅಂತಿಮ ನಿರ್ಧಾರವನ್ನು ಜುಲೈ 6ರೊಳಗೆ ತೆಗೆದುಕೊಳ್ಳುವಂತೆ WFIಗೆ ಸೂಚಿಸಲಾಗಿದೆ. ಈ ಅರ್ಜಿಗೆ ಸಂಬಂಧಿಸಿ ಕೇಂದ್ರ ಸರ್ಕಾರ, Wrestling Federation of India ಹಾಗೂ Indian Olympic Association ಗೆ ನ್ಯಾಯಾಲಯ ನೋಟಿಸ್ ಜಾರಿಮಾಡಿದೆ.