SK Home Ad
Home ಸುದ್ದಿ ರಾಜ್ಯ ಇನ್ಮುಂದೆ ₹8 ಲಕ್ಷ ವಾರ್ಷಿಕ ಆದಾಯದವರ ಮಕ್ಕಳಿಗೂ ಆರ್‌ಟಿಇ ಸೀಟು

ಇನ್ಮುಂದೆ ₹8 ಲಕ್ಷ ವಾರ್ಷಿಕ ಆದಾಯದವರ ಮಕ್ಕಳಿಗೂ ಆರ್‌ಟಿಇ ಸೀಟು

0
5

ಬೆಂಗಳೂರು: ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಪೋಷಕರ ವಾರ್ಷಿಕ ಆದಾಯದ ಮಿತಿಯನ್ನು 3.5 ಲಕ್ಷದಿಂದ 8 ಲಕ್ಷಕ್ಕೆ ಹೆಚ್ಚಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.

ಇದರಿಂದ ಆರ್ಥಿಕವಾಗಿ ದುರ್ಬಲ ವರ್ಗದ ಹೆಚ್ಚಿನ ಕುಟುಂಬಗಳ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪಡೆಯಲು ಅವಕಾಶ ಸಿಗಲಿದೆ. ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಆರ್‌ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಲ್ಲಿ ಶೇ. 25ರಷ್ಟು ಪ್ರವೇಶಾತಿಯನ್ನು ಅರ್ಹ ಮಕ್ಕಳಿಗೆ ಮೀಸಲಿಡಲಾಗುತ್ತದೆ. ಆದಾಯ ಮಿತಿಯ ಹೆಚ್ಚಳದಿಂದ ಈ ಸೌಲಭ್ಯ ಪಡೆಯಲು ಅರ್ಹರಾಗುವ ಕುಟುಂಬಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

ಈ ಹಿಂದೆ ಆರ್‌ಟಿಇ ಅಡಿಯಲ್ಲಿ ಪ್ರವೇಶ ಪಡೆಯಲು ಪೋಷಕರ ವಾರ್ಷಿಕ ಆದಾಯದ ಮಿತಿ 3.5 ಲಕ್ಷವಾಗಿತ್ತು. ಇದೀಗ ಅದನ್ನು 8 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಂದರೆ ಆದಾಯ ಮಿತಿಯಲ್ಲಿ 4.5 ಲಕ್ಷದಷ್ಟು ಹೆಚ್ಚಳ ಮಾಡಿದಂತಾಗಿದೆ. ಇದರಿಂದ ಮಧ್ಯಮ ಮತ್ತು ಕಡಿಮೆ ಆದಾಯದ ಕುಟುಂಬಗಳ ಮಕ್ಕಳಿಗೂ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿಯಲ್ಲಿ ಪ್ರವೇಶ ಪಡೆಯಲು ಹೆಚ್ಚಿನ ಅವಕಾಶ ದೊರೆಯಲಿದೆ.

ದೇಶದಲ್ಲೇ ಅತ್ಯಧಿಕ ಆದಾಯ ಮಿತಿ ಲಭ್ಯವಿರುವ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ ಆರ್‌ಟಿಇ ಪ್ರವೇಶಕ್ಕಾಗಿ ವಾರ್ಷಿಕ ಆದಾಯದ ಮಿತಿಯನ್ನು 8 ಲಕ್ಷಕ್ಕೆ ನಿಗದಿಪಡಿಸಿರುವುದು ದೇಶದಲ್ಲೇ ಅತ್ಯಧಿಕವಾಗಿದೆ. ಗುಜರಾತ್‌ನಲ್ಲಿ 6 ಲಕ್ಷ ಹಾಗೂ ದೆಹಲಿಯಲ್ಲಿ 5 ಲಕ್ಷ ಆದಾಯದ ಮಿತಿ ಇದೆ.