ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ಮಾಡಿರುವ ರಾಜ್ಯ ಸರ್ಕಾರ, ನಗರದ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ ಹಿರಿಯ ಐಪಿಎಸ್ ಅಧಿಕಾರಿ ಆರ್. ಹಿತೇಂದ್ರ ಅವರನ್ನು ನೇಮಕ ಮಾಡಿದೆ. ಇದರೊಂದಿಗೆ ಈ ಹಿಂದೆ ಇದ್ದ ಏಕೈಕ ಪೊಲೀಸ್ ಕಮಿಷನರೇಟ್ ವ್ಯವಸ್ಥೆಯನ್ನು ವಿಭಜಿಸಿ ರಚಿಸಲಾಗಿರುವ ಐದು ಪ್ರತ್ಯೇಕ ಕಮಿಷನರೇಟ್ಗಳಿಗೂ ಆಯುಕ್ತರನ್ನು ನೇಮಿಸಲಾಗಿದೆ.
ಬುಧವಾರ ಈ ಕುರಿತು ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಹಾಲಿ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಅವರನ್ನು ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಿದೆ.
ಬೆಂಗಳೂರು ನಗರ ವೇಗವಾಗಿ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಆಡಳಿತ, ಅಪರಾಧ ನಿಯಂತ್ರಣ, ಸಂಚಾರ ನಿರ್ವಹಣೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುವ ಉದ್ದೇಶದಿಂದ ನಗರ ಪೊಲೀಸ್ ವ್ಯವಸ್ಥೆಯನ್ನು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಮತ್ತು ಕೇಂದ್ರ ಎಂಬ ಐದು ಪ್ರತ್ಯೇಕ ಕಮಿಷನರೇಟ್ಗಳಾಗಿ ಪುನರ್ರಚಿಸಲಾಗಿದೆ. ಈ ಐದು ಘಟಕಗಳ ಮೇಲ್ವಿಚಾರಣೆಗೆ ಮುಖ್ಯ ಪೊಲೀಸ್ ಆಯುಕ್ತರ ಹುದ್ದೆಯನ್ನು ಸೃಷ್ಟಿಸಲಾಗಿದೆ.
ಐದು ಕಮಿಷನರೇಟ್ಗಳಿಗೆ ಐವರು ಆಯುಕ್ತರು: ಹೊಸದಾಗಿ ರಚಿಸಲಾಗಿರುವ ಐದು ಪೊಲೀಸ್ ಕಮಿಷನರೇಟ್ಗಳ ಜವಾಬ್ದಾರಿಯನ್ನು ಐವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವಹಿಸಲಾಗಿದೆ.
ಕೇಂದ್ರ ಬೆಂಗಳೂರು: ಲಾಬೂರಾಮ್
ಪೂರ್ವ ಬೆಂಗಳೂರು: ಡಾ. ಪಿ.ಎಸ್. ಹರ್ಷ
ಪಶ್ಚಿಮ ಬೆಂಗಳೂರು: ವಿಕಾಸ್ ಕುಮಾರ್ ವಿಕಾಸ್
ಉತ್ತರ ಬೆಂಗಳೂರು: ಡಾ. ಎಂ.ಬಿ. ಬೋರಲಿಂಗಯ್ಯ
ದಕ್ಷಿಣ ಬೆಂಗಳೂರು: ಸಿ. ವಂಶಿ ಕೃಷ್ಣ
ಮುಖ್ಯ ಆಯುಕ್ತರಾಗಿ ಆರ್. ಹಿತೇಂದ್ರ: ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿರುವ ಆರ್. ಹಿತೇಂದ್ರ ಅವರು ಈ ಹಿಂದೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅಲ್ಲದೆ, ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆಗಾಗಿ ಹೈಕೋರ್ಟ್ ನಿರ್ದೇಶನದ ಮೇರೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೀಗ ಬೆಂಗಳೂರಿನ ಐದು ಕಮಿಷನರೇಟ್ಗಳ ಮೇಲ್ವಿಚಾರಣೆ, ಅವುಗಳ ನಡುವಿನ ಸಮನ್ವಯ ಹಾಗೂ ನಗರದ ಒಟ್ಟಾರೆ ಪೊಲೀಸ್ ಆಡಳಿತದ ಜವಾಬ್ದಾರಿ ಅವರ ಹೆಗಲೇರಿದೆ.





















