SK Home Ad
Home ಸಿನಿ ಮಿಲ್ಸ್ ಸೆ. 12, 13ಕ್ಕೆ SIIMA 2026 ಮಹಾಸಂಭ್ರಮ; ಅಧಿಕೃತ ಘೋಷಣೆ

ಸೆ. 12, 13ಕ್ಕೆ SIIMA 2026 ಮಹಾಸಂಭ್ರಮ; ಅಧಿಕೃತ ಘೋಷಣೆ

0
60

ಬೆಂಗಳೂರು: ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಹಾಗೂ ಜನಪ್ರಿಯ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಒಂದಾದ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) 2026ರ 14ನೇ ಆವೃತ್ತಿ ಇದೇ ಸೆಪ್ಟೆಂಬರ್ 12 ಮತ್ತು 13ರಂದು ಅದ್ಧೂರಿಯಾಗಿ ನಡೆಯಲಿದೆ.

ಈ ಕುರಿತು ಬೆಂಗಳೂರಿನಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್, ನಟ ಶ್ರೀಮುರಳಿ, ನಟಿಯರಾದ ಪ್ರಣೀತಾ ಸುಭಾಷ್, ಶಾನ್ವಿ ಶ್ರೀವಾಸ್ತವ ಹಾಗೂ ಫಾರಿಯಾ ಅಬ್ದುಲ್ಲಾ ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡರು.

ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ: ಈ ವೇಳೆ ಮಾತನಾಡಿದ ನಟ ಶ್ರೀಮುರಳಿ, ಈ ಬಾರಿ ಸೈಮಾದಿಂದ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುವ ಜವಾಬ್ದಾರಿ ಸಿಕ್ಕಿರುವುದು ಸಂತಸದ ವಿಷಯ ಎಂದು ಹೇಳಿದರು.

“ಸೈಮಾ ಜೊತೆ ನಮ್ಮ ಕುಟುಂಬಕ್ಕೆ ಕಳೆದ 14 ವರ್ಷಗಳಿಂದ ಆತ್ಮೀಯ ನಂಟಿದೆ. ಅಪ್ಪು ಮಾಮ (ಡಾ. ಪುನೀತ್ ರಾಜ್‌ಕುಮಾರ್) ನಾಲ್ಕು ಬಾರಿ, ಶಿವಣ್ಣ (ಡಾ. ಶಿವರಾಜ್‌ಕುಮಾರ್) ಮೂರು ಬಾರಿ ಸೈಮಾ ಪ್ರಶಸ್ತಿ ಪಡೆದಿದ್ದಾರೆ. ನನ್ನ ಅಣ್ಣ ವಿಜಯ್ ರಾಘವೇಂದ್ರ ಎರಡು ಬಾರಿ ಕಾರ್ಯಕ್ರಮ ನಿರೂಪಿಸಿದ್ದಾರೆ. ನನಗೂ ʻಮಫ್ತಿʼ ಚಿತ್ರದ ಅಭಿನಯಕ್ಕಾಗಿ ʻಬೆಸ್ಟ್ ಲೀಡ್ (ಕ್ರಿಟಿಕ್)ʼ ಪ್ರಶಸ್ತಿ ದೊರೆತಿತ್ತು. ಈ ಬಾರಿ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಷಯ” ಎಂದು ಹೇಳಿದರು.

ಸೈಮಾ ದಕ್ಷಿಣ ಭಾರತದ ನಾಲ್ಕು ಚಿತ್ರರಂಗಗಳ ಕಲಾವಿದರನ್ನು ಒಂದೇ ವೇದಿಕೆಗೆ ತರುವ ಮೂಲಕ ವಿಶಿಷ್ಟ ವೇದಿಕೆಯಾಗಿದ್ದು, ಕಲಾವಿದರ ಪರಿಶ್ರಮಕ್ಕೆ ಗೌರವ ಸಲ್ಲಿಸುವ ಮಹತ್ವದ ಪ್ರಶಸ್ತಿ ಸಮಾರಂಭವಾಗಿದೆ. ಈ ಬಾರಿಯ 14ನೇ ಆವೃತ್ತಿಯೂ ಅಷ್ಟೇ ಭವ್ಯವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ ಸೈಮಾ: ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್ ಮಾತನಾಡಿ, ಸೈಮಾ ಸಂಸ್ಥೆ ನಂಬಿಕೆ, ಬದ್ಧತೆ ಹಾಗೂ ನಿರಂತರತೆಯ ಭದ್ರ ಅಡಿಪಾಯದ ಮೇಲೆ ಬೆಳೆದಿದ್ದು, ಇಂದು ದಕ್ಷಿಣ ಭಾರತವನ್ನು ಮೀರಿ ದೇಶದ ಅತ್ಯಂತ ಜನಪ್ರಿಯ ಹಾಗೂ ಗೌರವಾನ್ವಿತ ಪ್ರಶಸ್ತಿ ವೇದಿಕೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ ಎಂದು ಹೇಳಿದರು.

“ಈ ಯಶಸ್ಸಿನ ಹಿಂದೆ ಪಾಲುದಾರರು, ಚಿತ್ರರಂಗದ ಗಣ್ಯರು, ಮಾಧ್ಯಮ ಮಿತ್ರರು ಹಾಗೂ ಸಹಯೋಗಿಗಳ ಅಪಾರ ಬೆಂಬಲವಿದೆ. ಅವರ ಸಹಕಾರದಿಂದಲೇ ಇಂತಹ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ಸಾಧ್ಯವಾಗಿದೆ. ಈ ವರ್ಷವೂ ʻಮಾರುತಿ ಸುಜುಕಿ ನೆಕ್ಸಾʼ ಜೊತೆ ಸತತ ನಾಲ್ಕನೇ ವರ್ಷದ ಸಹಭಾಗಿತ್ವ ಮುಂದುವರಿದಿದೆ. ಎಲ್ಲ ಸಹಯೋಗಿಗಳಿಗೆ ನಾವು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ” ಎಂದು ತಿಳಿಸಿದರು.

ಇದೇ ವೇಳೆ ಶ್ರೀಮುರಳಿ, ಪ್ರಣೀತಾ ಸುಭಾಷ್, ಶಾನ್ವಿ ಶ್ರೀವಾಸ್ತವ ಹಾಗೂ ಫಾರಿಯಾ ಅಬ್ದುಲ್ಲಾ ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರಿಗೆ ಧನ್ಯವಾದ ಅರ್ಪಿಸಿದ ಅವರು, ದಕ್ಷಿಣ ಭಾರತೀಯ ಚಿತ್ರರಂಗದ ವೈವಿಧ್ಯತೆ, ಪ್ರತಿಭೆ ಹಾಗೂ ಒಗ್ಗಟ್ಟನ್ನು ಜಾಗತಿಕ ಮಟ್ಟದ ಅಭಿಮಾನಿಗಳ ಮುಂದೆ ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿಸುವ ಗುರಿಯೊಂದಿಗೆ ಈ ವರ್ಷದ ಸೈಮಾ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.