ಬೆಳ್ತಂಗಡಿ: ಪುಂಜಾಲಕಟ್ಟೆ–ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ಕಟ್ಟಡ ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದ ವೇಳೆ ಸಿಮೆಂಟ್ ತುಂಡು ಬಿದ್ದು 22 ವರ್ಷದ ಕಾರ್ಮಿಕ ಮೃತಪಟ್ಟ ಘಟನೆ ಸೆಪ್ಟೆಂಬರ್ 17ರಂದು ಸಂಜೆ ಬೆಳ್ತಂಗಡಿ ನಗರದ ಮೂರು ಮಾರ್ಗದ ಬಳಿ ನಡೆದಿದೆ.
ಮೃತರನ್ನು ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ನಿವಾಸಿ ಆಲಿ ಅವರ ಪುತ್ರ ಝುಬೈರ್ (22) ಎಂದು ಗುರುತಿಸಲಾಗಿದೆ.
ಬೆಳ್ತಂಗಡಿ ಮಹಿಳಾ ಗ್ರಾಹಕರ ಸಹಕಾರಿ ಸಂಘಕ್ಕೆ ಸೇರಿದ ಮಳಿಗೆಯ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿತ್ತು. ಕಟ್ಟಡದ ಮೇಲ್ಭಾಗದಲ್ಲಿ ರಾಡ್ ಸಹಿತ ಸಿಮೆಂಟ್ ಭಾಗವನ್ನು ತೆರವುಗೊಳಿಸುತ್ತಿದ್ದ ವೇಳೆ ಒಂದು ಸಿಮೆಂಟ್ ತುಂಡು ಆಯತಪ್ಪಿ ಕೆಳಗೆ ಬಿದ್ದಿದೆ. ಇದೇ ವೇಳೆ ಕಟ್ಟಡದ ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಝುಬೈರ್ ಅವರ ಮೇಲೆ ಆ ತುಂಡು ಬಿದ್ದಿದೆ ಎಂದು ತಿಳಿದುಬಂದಿದೆ.
ಘಟನೆಯಿಂದ ಝುಬೈರ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರ ಸಹಕಾರದಿಂದ ತಕ್ಷಣವೇ ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಕಟ್ಟಡ ತೆರವು ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಘಟನೆ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನೆಯ ಹಿನ್ನೆಲೆ ಹಾಗೂ ಕಟ್ಟಡ ತೆರವು ಕಾರ್ಯದ ಸಂದರ್ಭದಲ್ಲಿನ ಪರಿಸ್ಥಿತಿಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯ ಬಳಿಕ ಇನ್ನಷ್ಟು ವಿವರಗಳು ಲಭ್ಯವಾಗುವ ಸಾಧ್ಯತೆಯಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















