ದಾವಣಗೆರೆ: ತುಮಕೂರು–ದಾವಣಗೆರೆ ಹೊಸ ಬ್ರಾಡ್ ಗೇಜ್ ರೈಲು ಮಾರ್ಗದ ತೊಳಹುಣಸೆ ಯಾರ್ಡ್ ಜೋಡಣೆ ಕಾಮಗಾರಿಯ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ಹಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಿದೆ. ಕಾಮಗಾರಿ ನಡೆಯುವ ಅವಧಿಯಲ್ಲಿ ಕೆಲವು ರೈಲುಗಳನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದ್ದು, ಇನ್ನು ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದು, ಮಾರ್ಗ ಬದಲಾವಣೆ ಹಾಗೂ ನಿಯಂತ್ರಣಕ್ಕೆ ಒಳಪಡಿಸಲಾಗಿದೆ.
ಕೆಲವು ರೈಲುಗಳ ಸಂಪೂರ್ಣ ರದ್ದು : ಹುಬ್ಬಳ್ಳಿ–ಅರಸೀಕೆರೆ ಎಕ್ಸ್‌ಪ್ರೆಸ್ ರೈಲನ್ನು ಅಕ್ಟೋಬರ್ 8 ಮತ್ತು 9ರಂದು ರದ್ದುಪಡಿಸಲಾಗಿದೆ. ಇದರ ಪ್ರತಿಯಾಗಿ ಅರಸೀಕೆರೆ–ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 9 ಮತ್ತು 10ರಂದು ಸಂಚರಿಸುವುದಿಲ್ಲ.
ಭಾಗಶಃ ರದ್ದು : ಬೆಂಗಳೂರು–ಧಾರವಾಡ ಸಿದ್ಧಗಂಗಾ ಎಕ್ಸ್‌ಪ್ರೆಸ್, ಹುಬ್ಬಳ್ಳಿ–ಚಿತ್ರದುರ್ಗ ಹಾಗೂ ಮೈಸೂರು–ಬೆಳಗಾವಿ ರೈಲುಗಳ ಸಂಚಾರದಲ್ಲೂ ಬದಲಾವಣೆ ಮಾಡಲಾಗಿದೆ. ಈ ರೈಲುಗಳು ನಿಗದಿತ ಮಾರ್ಗದ ಸಂಪೂರ್ಣ ಸಂಚಾರ ನಡೆಸದೆ, ಕ್ರಮವಾಗಿ ಬೀರೂರು ಅಥವಾ ಹರಿಹರದವರೆಗೆ ಮಾತ್ರ ಸಂಚರಿಸುವಂತೆ ವ್ಯವಸ್ಥೆ ಮಾಡಲಾಗಿದೆ.
ಹಲವು ರೈಲುಗಳ ಮಾರ್ಗ ಬದಲಾವಣೆ : ಹಮ್ಸಫರ್ ಎಕ್ಸ್‌ಪ್ರೆಸ್, ಗಂಗಾನಗರ–ತ್ರಿಚಿ, ವಾಸ್ಕೋ–ಯಶವಂತಪುರ, ಬೆಂಗಳೂರು–ಸಿಂಧನೂರು ಸೇರಿದಂತೆ ಒಟ್ಟು 10 ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಈ ರೈಲುಗಳು ಪರ್ಯಾಯವಾಗಿ ಬಳ್ಳಾರಿ–ಗುಂತಕಲ್ ಮಾರ್ಗದ ಮೂಲಕ ಸಂಚರಿಸಲಿವೆ.
ಮಾರ್ಗ ಬದಲಾವಣೆಯಿಂದಾಗಿ ಕೆಲವು ರೈಲುಗಳಿಗೆ ದಾವಣಗೆರೆ, ಹರಿಹರ, ಹಾವೇರಿ, ಬೀರೂರು ಮತ್ತು ಅರಸೀಕೆರೆ ನಿಲ್ದಾಣಗಳಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ. ಹೀಗಾಗಿ ಈ ನಿಲ್ದಾಣಗಳಿಂದ ಪ್ರಯಾಣಿಸುವವರು ತಮ್ಮ ರೈಲಿನ ಪರಿಷ್ಕೃತ ಸಂಚಾರ ವಿವರಗಳನ್ನು ಮುಂಚಿತವಾಗಿ ಪರಿಶೀಲಿಸುವುದು ಅಗತ್ಯವಾಗಿದೆ.
20ಕ್ಕೂ ಹೆಚ್ಚು ರೈಲುಗಳ ಸಂಚಾರದಲ್ಲಿ ವಿಳಂಬ : ಕಾಮಗಾರಿ ಹಿನ್ನೆಲೆಯಲ್ಲಿ 20ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ವಿವಿಧ ಅವಧಿಗೆ ನಿಯಂತ್ರಿಸಲಾಗುತ್ತದೆ. ವಾಸ್ಕೋ ರೈಲು ಸುಮಾರು 90 ನಿಮಿಷ, ಹುಬ್ಬಳ್ಳಿ–ತಿರುವನಂತಪುರಂ ರೈಲು ಸುಮಾರು 120 ನಿಮಿಷ ವಿಳಂಬವಾಗುವ ಸಾಧ್ಯತೆಯಿದೆ. ವಂದೇ ಭಾರತ್ ಹಾಗೂ ಜನಶತಾಬ್ದಿ ಸೇರಿದಂತೆ ಹಲವು ರೈಲುಗಳು ಸುಮಾರು 15ರಿಂದ 150 ನಿಮಿಷದವರೆಗೆ ನಿಯಂತ್ರಣಕ್ಕೆ ಒಳಪಡಲಿವೆ.
ತುಮಕೂರು–ದಾವಣಗೆರೆ ಹೊಸ ಬ್ರಾಡ್ ಗೇಜ್ ಮಾರ್ಗಕ್ಕೆ ಸಂಬಂಧಿಸಿದ ಯಾರ್ಡ್ ಜೋಡಣೆ ಕಾಮಗಾರಿ ಪೂರ್ಣಗೊಳಿಸುವ ಉದ್ದೇಶದಿಂದ ಈ ತಾತ್ಕಾಲಿಕ ಬದಲಾವಣೆಗಳನ್ನು ಕೈಗೊಳ್ಳಲಾಗಿದೆ. ಪ್ರಯಾಣಿಕರು ರೈಲು ಹೊರಡುವ ಮುನ್ನ ಪರಿಷ್ಕೃತ ವೇಳಾಪಟ್ಟಿ ಹಾಗೂ ತಮ್ಮ ರೈಲಿನ ಮಾರ್ಗವನ್ನು ಪರಿಶೀಲಿಸಿಕೊಂಡು ಪ್ರಯಾಣಿಸುವಂತೆ ಸೂಚಿಸಲಾಗಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















